ಮೇ ತಿಂಗಳಲ್ಲಿ ಕೊಡವ ಲೆದರ್ ಕ್ರಿಕೆಟ್ ಪ್ರೀಮಿಯರ್ ಲೀಗ್

kodava cricket
Published on

ಮಡಿಕೇರಿ: ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಪ್ರಥಮ ವರ್ಷದ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್ ಲೆದರ್ ಬಾಲ್ ಪಂದ್ಯಾವಳಿಯು ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ ತಿಂಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್‌ನ ಸಂಚಾಲಕ ಪೊರುಕೊಂಡ ಸುನಿಲ್ ತಿಳಿಸಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂದ್ಯಾವಳಿ ಕೊಡವ ಜನಾಂಗದವರಿಗೆ ಮಾತ್ರ ಸೀಮಿತವಾಗಿದೆ. ೧೪ ವರ್ಷ ಮೇಲ್ಪಟ್ಟ ಆಟಗಾರರಿಗೆ ಮಾತ್ರ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಬಿಡ್ಡಿಂಗ್ ಪ್ರಕ್ರಿಯೆ ಮಾರ್ಚ್‌ನಲ್ಲಿ ನಡೆಯಲಿದ್ದು, ಆಸಕ್ತ ಆಟಗಾರರು ಮಾ.೧೫ರೊಳಗೆ ಬಿಡ್ಡಿಂಗ್ ಫಾಂನಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಬೇಕು ಎಂದು ತಿಳಿಸಿದರು.


ಕ್ರೀಡಾಕೂಟದ ವಿಜೇತ ತಂಡಕ್ಕೆ ಪ್ರಥಮ ಬಹುಮಾನ ೧.೫ ಲಕ್ಷ, ದ್ವಿತೀಯ ೭೫ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಆಸಕ್ತ ಮಹಿಳೆಯರು ಕೂಡ ಪಾಲ್ಗೊಳ್ಳಲು ಅವಕಾಶವಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಎಲ್ಲಾ ಜನಾಂಗದವನ್ನೂ ಒಗ್ಗೂಡಿಸಿ ಪಂದ್ಯಾವಳಿ ಹಮ್ಮಿಕೊಳ್ಳುವ ಚಿಂತನೆ ಇದೆ ಎಂದರು.


ಫೌಂಡೇಶನ್‌ನ ನಿರ್ದೇಶಕರಾದ ಕುಲ್ಲೇಟಿರ ಶಾಂತ ಕಾಳಪ್ಪ ಮಾತನಾಡಿ, ಜಿಲ್ಲೆಯಲ್ಲಿ ಬಹುತೇಕ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹೆಚ್ಚಾಗಿ ನಡೆಯುತ್ತಿದೆ. ಲೆದರ್ ಬಾಲ್ ಕ್ರಿಕೆಟ್ ನಡೆಸಿ ಉತ್ತಮ ಆಟಗಾರರಿಗೆ ವೇದಿಕೆ ಕಲ್ಪಿಸುವ ಜತೆಗೆ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಆಟಗಾರರು ಪಾಲ್ಗೊಳ್ಳುವಂತಾಗಬೇಕು ಎಂದರು.


ಸುದ್ದಿಗೋಷ್ಠಿಯಲ್ಲಿ ಫೌಂಡೇಶನ್‌ನ ಸಹ ಸಂಚಾಲಕ ಚಂಡೀರ ರಚನ್ ಚಿಣ್ಣಪ್ಪ, ನಿರ್ದೇಶಕರಾದ ಮಡ್ಲಂಡ ದರ್ಶನ್ ಪೆಮ್ಮಯ್ಯ, ಚರ್ಮಂದಂಡ ಡಾ.ಸೋಮಣ್ಣ, ಪಾಲಚಂಡ ಜಗನ್ ಉತ್ತಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net