

ಮಡಿಕೇರಿ: ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಮತ್ತು ಎಸ್‌ಟಿ ಟ್ಯಾಗ್ ಕುರಿತು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಬೇಡಿಕೆಗೆ ಪೂರಕವಾಗಿ ಆಯೋಗವನ್ನು ರಚಿಸಬೇಕೆಂದು ಖ್ಯಾತ ಅರ್ಥಶಾಸ್ತ್ರಜ್ಞ, ಹಾರ್ವರ್ಡ್ ವಿದ್ವಾಂಸ ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿ ವಿಚಾರಣೆ ಸೋಮವಾರ ಹೈಕೋರ್ಟ್‌ನಲ್ಲಿ ನಡೆಯಿತು.
ಕರ್ನಾಟಕ ರಾಜ್ಯ ಶ್ರೇಷ್ಠ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ನಿಲಯ್ ವಿಪಿನ್ ಚಂದ್ರ ಅಂಜಾರಿಯಾ ಅವರನ್ನೊಳಗೊಂಡ ವಿಭಾಗೀಯ ಪೀಠ ರಿಟ್ ಅರ್ಜಿಯ ವಿಚಾರಣೆಯನ್ನು ನಡೆಸಿತು. ಡಾ.ಸುಬ್ರಮಣಿಯನ್ ಸ್ವಾಮಿ ಅವರ ಕಾನೂನು ಸಹಾಯಕರಾದ ಹೈಕೋರ್ಟ್ ವಕೀಲ ಕಿರಣ್ ನಾರಾಯಣ್, ಸುಪ್ರೀಂಕೋರ್ಟ್ ವಕೀಲ ಸತ್ಯ ಸಬರವಾಲ್ ಹಾಗೂ ವಿಶೇಷ್ ಕನೋಡಿಯ ಅವರುಗಳು ಭಾಗಿಯಾಗಿದ್ದರು. ಸಿಎನ್‌ಸಿಯ ಬೇಡಿಕೆಗೆ ಆಕ್ಷೇಪ ಸಲ್ಲಿಸಿದ ಪ್ರತಿವಾದಿಗಳ ಅಹವಾಲನ್ನು ಕೂಡ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ೨೦೨೪ ಅಕ್ಟೋಬರ್ ೨೧ಕ್ಕೆ ಮುಂದೂಡಿತು.
ವಿಚಾರಣೆ ನಂತರ ಮಾತನಾಡಿದ ಎನ್.ಯು.ನಾಚಪ್ಪ, ಕಾನೂನು ಹೋರಾಟದಿಂದ ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ನ್ಯಾಯ ಸಿಗಲಿದ್ದು, ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಮತ್ತು ಎಸ್‌ಟಿ ಟ್ಯಾಗ್ ಪಡೆಯುವ ವಿಶ್ವಾಸವಿದೆ ಎಂದರು.
ಈ ಸಂದರ್ಭ ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿ, ವಿರಾಟ್ ಹಿಂದೂಸ್ತಾನ್ ಸಂಘಂನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಶ್ರೇಯಾ ನಾಚಪ್ಪ, ಬೊಟ್ಟಂಗಡ ಗಿರೀಶ್, ಅರೆಯಡ ಗಿರೀಶ್, ಕಿರಿಯಮಾಡ ಶೆರಿನ್, ಚಂಬಂಡ ಜನತ್ ಇತರರು ಉಪಸ್ಥಿತರಿದ್ದರು.