ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಬೇಡಿಕೆಯ ವಿಚಾರಣೆ ಸೆ.೫ ಕ್ಕೆ

N.U.NACHAPPA
Published on

ಮಡಿಕೇರಿ: ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆಯ ಕುರಿತು ಸಿಎನ್‌ಸಿ ಬೇಡಿಕೆಗೆ ಪೂರಕವಾಗಿ ಆಯೋಗವನ್ನು ರಚಿಸಬೇಕೆಂದು ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಸೆ.೫ಕ್ಕೆ ಮುಂದೂಡಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಚಾರಣೆಯನ್ನು ಸೆ.೫ ಕ್ಕೆ ಮುಂದೂಡಲಾಗಿದ್ದು, ಮೂವರು ಪ್ರತಿವಾದಿಗಳು ಮುಂದಿನ ೪ ವಾರಗಳಲ್ಲಿ ಉತ್ತರ ನೀಡುವಂತೆ ಕೋರ್ಟ್ ನಿರ್ದೇಶನ ನೀಡಿತು. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಎಂಜೆಎಸ್.ಕಮಲ್ ಅವರ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಡಾ.ಸುಬ್ರಮಣಿಯನ್ ಸ್ವಾಮಿರವರು ವಿಚಾರಣೆಗೆ ಹಾಜರಾಗಿ ಹೈಕೋರ್ಟ್ ವಿಭಾಗೀಯ ಪೀಠದ ಮುಂದೆ ಪ್ರಕರಣವನ್ನು ವಾದಿಸಿದರು. ಅರ್ಜಿದಾರರ ಪರವಾಗಿ ವಕೀಲರಾದ ಎಂ.ಎಸ್.ನಾರಾಯಣ ಕಿರಣ್, ವಿಕ್ರಮ್ ಹೆಗ್ಡೆ ಹಾಗೂ ಪಾರ್ಥ್ ಅವರು ಹಾಜರಾಗಿದ್ದರು ಎಂದು ತಿಳಿಸಿದ್ದಾರೆ.


ಹೈಕೋರ್ಟ್ ಕಲಾಪ ನಡೆಯುವ ಸಂದರ್ಭ ವಿಎಚ್‌ಎಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ, ಸಿಎನ್‌ಸಿ ಪ್ರಮುಖರಾದ ಕಲಿಯಂಡ ಪ್ರಕಾಶ್, ಲೆಫ್ಟಿನೆಂಟ್ ಕರ್ನಲ್ ಪಾರ್ವತಿ, ಶ್ರೇಯಾ ನಾಚಪ್ಪ, ಕಾಂಡೇರ ಸುರೇಶ್, ಪಾರ್ವಂಗಡ ನವೀನ್, ಅರೆಯಡ ಗಿರೀಶ್, ಬೊಟ್ಟಂಗಡ ಗಿರೀಶ್, ಚಂಬಂಡ ಜನತ್, ಬೇಪಡಿಯಂಡ ದಿನು ಸೇರಿದಂತೆ ಇತರರು ಕಲಾಪವನ್ನು ವೀಕ್ಷಿಸಿದರು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net