

ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ೩೪ನೇ ವರ್ಷದ ಕೊಡವ ನ್ಯಾಷನಲ್ ಡೇ ಮತ್ತು ಭಾರತದ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.
ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್‌ನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ೯ ಪ್ರಮುಖ ನಿರ್ಣಯಗಳನ್ನು ಮಂಡಿಸಿ ಮಾತನಾಡಿ, ಭಾರತೀಯ ಸಂವಿಧಾನದಡಿಯಲ್ಲಿ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ನೀಡಬೇಕು. ಅಂತರಾಷ್ಟ್ರೀಯ ಕಾನೂನಿನಡಿ ಕೊಡವರನ್ನು ಸ್ಥಳೀಯ ಕೊಡವ ಬುಡಕಟ್ಟು ಜನರು ಎಂದು ಗುರುತಿಸಬೇಕು. ಸಂವಿಧಾನದ ೨೫ ಮತ್ತು ೨೬ ನೇ ವಿಧಿಗಳ ಅಡಿಯಲ್ಲಿ ಕೊಡವ ಸಾಂಪ್ರದಾಯಿಕ ಸಂಸ್ಕಾರ ಗನ್ ಹಕ್ಕಿಗೆ ಸಾಂವಿಧಾನಿಕ ಭದ್ರತೆ ನೀಡಬೇಕು. ಕೊಡವ ಭಾಷೆಯನ್ನು ಭಾರತೀಯ ಸಂವಿಧಾನದ ೮ನೇ ಶೆಡ್ಯೂಲ್‌ನಲ್ಲಿ ಸೇರಿಸಬೇಕು. ಕೊಡವ ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯಾಗಿ ಗುರುತಿಸಬೇಕು ಎಂದು ಆಗ್ರಹಿಸಿದರು.
ಭಾರತೀಯ ಸಂಸತ್ತು ಮತ್ತು ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ಕೊಡವರಿಗೆ ಪ್ರಾತಿನಿಧ್ಯ ನೀಡಬೇಕು ಮತ್ತು ಪರಕೀಯ ಆಡಳಿತಗಾರರಿಂದ ವಶಪಡಿಸಿಕೊಳ್ಳಲ್ಪಟ್ಟ ಮತ್ತು ಹೊರಗಿನವರಿಗೆ ಅಡಮಾನವಿಟ್ಟ ಕೊಡವ ಪೂರ್ವಜರ ಭೂಮಿಯನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವು ಪ್ರಜಾಪ್ರಭುತ್ವ ದೇಶ ಭಾರತದ ಸರ್ವೋಚ್ಚ ದಾಖಲೆಯಾಗಿದೆ. ಇದರ ಆಧಾರದಲ್ಲಿ ಕೊಡವರು ತಮಗೆ ಸೇರಬೇಕಾದ ಹಕ್ಕುಗಳನ್ನು ಮಂಡಿಸುವ ಮೂಲಕ ಸಾಂವಿಧಾನಿಕ ಭದ್ರತೆಯನ್ನು ಪಡೆದುಕೊಳ್ಳಬೇಕು. ಕೊಡವರು ಭಾರತೀಯ ಶ್ರೇಷ್ಠ ಸಂವಿಧಾನದ ಮೂಲಕವಷ್ಟೇ ಹಕ್ಕುಗಳನ್ನು ಪಡೆಯಲು ಸಾಧ್ಯ. ಆದರೆ ಹಕ್ಕುಗಳನ್ನು ಪ್ರತಿಪಾದಿಸುವ ಧೈರ್ಯವನ್ನು ಕೊಡವರು ತೋರಬೇಕು ಎಂದು ಎನ್.ಯು.ನಾಚಪ್ಪ ತಿಳಿಸಿದರು.
ಕೊಡವರ ಹಕ್ಕುಗಳ ಕುರಿತು ಹಾದಿ ತಪ್ಪಿಸುವವರ ಮತ್ತು ಪಿತೂರಿ ನಡೆಸುವವರ ಬಗ್ಗೆ ಕೊಡವರು ಜಾಗೃತರಾಗಿರಬೇಕು. ಕೊಡವ ಲ್ಯಾಂಡ್ ಭೂಮಾಫಿಯಾಗಳ ಮೂಲಕ ಪರರ ಪಾಲಾಗುತ್ತಿದ್ದು, ಕೊಡವರು ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದ ಅವರು, ಜನಾಂಗದ ಉಳಿವಿಗೆ ಕೊಡವ ಲ್ಯಾಂಡ್ ಮತ್ತು ಎಸ್.ಟಿ ಟ್ಯಾಗ್ ಅತ್ಯಗತ್ಯ ಎಂದರು.
ಕಲಿಯಂಡ ಮೀನಾ ಪ್ರಕಾಶ್, ಬೊಪ್ಪಂಡ ಬೊಳ್ಳಮ್ಮ, ನಂದೇಟಿರ ಕವಿತಾ, ಚೋಳಪಂಡ ಜ್ಯೋತಿ, ಪಟ್ಟಮಾಡ ಲಲಿತಾ, ಅಪ್ಪಚ್ಚಿರ ರೀನಾ, ಕೊಡಂದೇರ ಉತ್ತರೆ, ಚೆಕ್ಕೇರ ಕಾಶಿ, ಚೇಂದಂಡ ಜೆಮ್ಸಿ ಪೊನ್ನಪ್ಪ, ಪೊರಿಮಂಡ ದಿನಮಣಿ, ಮಾಚೆಟ್ಟಿರ ಚೋಟು, ತೀತರಮಾಡ ಪ್ರಭು, ಉದಿಯಂಡ ಸುರೇಶ, ಉದಿಯಂಡ ಚೆಂಗಪ್ಪ, ಡಾ.ನಂದೇಟಿರ ರವಿ ಸುಬಯ್ಯ, ಪೆಮ್ಮುಡಿಯಂಡ ವೇಣು, ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಎನ್‌ಸಿ ಬೇಡಿಕೆಗಳ ಪರ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಎನ್.ಯು.ನಾಚಪ್ಪ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊಡವ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರುಗು ನೀಡಿದವು.