ಕೊಡವ ಲ್ಯಾಂಡ್ ವಿಚಾರಣೆ ಜ.೨೫ಕ್ಕೆ ಮುಂದೂಡಿಕೆ

Z CNC 2
Published on

ಮಡಿಕೇರಿ: ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆಯ ಕುರಿತು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಬೇಡಿಕೆಗೆ ಪೂರಕವಾಗಿ ಆಯೋಗ ರಚಿಸಬೇಕೆಂದು ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿರವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿಯ ವಿಚಾರಣೆ ಬುಧವಾರ ಹೈಕೋರ್ಟ್‌ನಲ್ಲಿ ನಡೆಯಿತು.


ಸ್ವಾಮಿ ಅವರ ಪರವಾಗಿ ವಕೀಲ ಕೀರನ್ ನಾರಾಯಣ್ ಅವರು ನ್ಯಾಯಾಲಯದ ಮುಂದೆ ವಿಷಯ ಮಂಡಿಸಿದರು. ಕೇಂದ್ರ ಸರ್ಕಾರದ ಪ್ರತಿನಿಧಿಗಳು ಅಫಿಡವಿಟ್ ಸಲ್ಲಿಸಲು ಕಾಲಾವಕಾಶ ನೀಡಿದ ಕೋರ್ಟ್, ವಿಚಾರಣೆಯನ್ನು ೨೦೨೪ ಜ.೨೫ಕ್ಕೆ ಮುಂದೂಡಿತು. ಇದೇ ಸಂದರ್ಭ ಕರ್ನಾಟಕ ಸರ್ಕಾರಕ್ಕೂ ಸೂಚನೆ ನೀಡಿದ ನ್ಯಾಯಾಲಯ ಇಂದಿನಿಂದ ಮೂರು ವಾರಗಳಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ಸಲ್ಲಿಸಬೇಕು ಎಂದು ನಿರ್ದೇಶಿಸಿತು.


ಎನ್.ಯು.ನಾಚಪ್ಪರವರು ಅರ್ಜಿದಾರ ಸಂಖ್ಯೆ-೨ ಆಗಿದ್ದಾರೆ. ಕೇಂದ್ರ ಕಾನೂನು ಸಚಿವಾಲಯ, ಕೇಂದ್ರ ಗೃಹ ಸಚಿವಾಲಯ ಮತ್ತು ಕರ್ನಾಟಕ ರಾಜ್ಯವನ್ನು ಪ್ರತಿವಾದಿ ಸಂಖ್ಯೆ ಕ್ರಮವಾಗಿ ೧, ೨ ಮತ್ತು ೩ ಎಂದು ಉಲ್ಲೇಖಿಸಲಾಗಿದೆ.


ಹೋರಾಟಕ್ಕೆ ಜಯ: ಅತ್ಯಂತ ಸೂಕ್ಷ್ಮ ಬುಡಕಟ್ಟು ಜನಾಂಗ ಕೊಡವರಿಗೆ ಸಾಂವಿಧಾನಿಕ ಭದ್ರತೆಗಾಗಿ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಸಿಗಬೇಕು ಎನ್ನುವ ಕಾರಣಕ್ಕಾಗಿ ಕೊಡವ ನ್ಯಾ?ನಲ್ ಕೌನ್ಸಿಲ್ ಸಂಘಟನೆ ಶಾಂತಿಯುತ ಹೋರಾಟವನ್ನು ಮುಂದುವರೆಸಿದೆ. ಕಾನೂನು ಹೋರಾಟಕ್ಕೆ ಜಯ ಸಿಗಲಿದೆ. ಸಿಎನ್‌ಸಿ ಹೋರಾಟಕ್ಕೆ ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿರವರು ಬೆಂಬಲವಾಗಿ ನಿಂತಿದ್ದು, ನಮ್ಮ ಬೇಡಿಕೆ ಈಡೇರುವುದು ನಿಶ್ಚಿತ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ವಿಶ್ವಾಸ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ವಿರಾಟ್ ಹಿಂದೂಸ್ಥಾನ್ ಸಂಘಂನ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ, ರಾಜ್ಯಾಧ್ಯಕ್ಷ ನಿಖುಂಜ್ ಶಾ, ಪ್ರಮುಖರಾದ ನಟರಾಜ್, ರವಿಶಂಕರ್, ಸಿಎನ್‌ಸಿಯ ಲೆಫ್ಟಿನೆಂಟ್ ಕರ್ನಲ್ ಪಾರ್ವತಿ, ಎನ್.ಶ್ರೇಯ ನಾಚಪ್ಪ, ಕಲಿಯಂಡ ಪ್ರಕಾಶ್, ಕಾಂಡೇರ ಸುರೇಶ, ಚಂಬಂಡ ಜನತ್, ಅಜ್ಜಿಕುಟ್ಟೀರ ಲೋಕೇಶ್, ಮಂದಪಂಡ ಮನೋಜ್, ಕಿರಿಯಮಾಡ ಶೆರಿನ್, ಕೃಷ್ಣಮೋಹನ್ ರೆಡ್ಡಿ ಹಾಗೂ ಮಹೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net