ವಂಶವೃಕ್ಷದ ಮೂಲಕ ವಿಶ್ವ ದಾಖಲೆಗೆ ಸಜ್ಜಾದ ಕೊಡವ ಕ್ಲಾನ್

Z KODAVA
Published on

ಮಡಿಕೇರಿ: ಕೊಡವರ ಎಲ್ಲಾ ಒಕ್ಕಗಳ ವಂಶಾವಳಿ ವೃಕ್ಷವನ್ನು www.kodavaclan.com, http://www.kodavaclan.comಮೂಲಕ ಒಂದಕ್ಕೊಂದು ನೇಯ್ದು ಎಲ್ಲಾ ಕೊಡವರು ಒಂದೇ ಕುಟುಂಬಕ್ಕೆ ಸೇರಿದವರೆಂದು ದೃಢೀಕರಣ ಪಡಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡಿರುವ ಕೊಡವ ಕ್ಲಾನ್ ಸಂಸ್ಥೆ ಇದೀಗ ವಿಶ್ವ ದಾಖಲೆ ಬರೆಯಲು ಸಜ್ಜಾಗಿದೆ ಎಂದು ಕೊಡವ ಕ್ಲಾನ್ ಸಂಸ್ಥೆಯ ಸಂಸ್ಥಾಪಕ ಗೊಮ್ಮಟಿರ ಕಿಶು ಉತ್ತಪ್ಪ ತಿಳಿಸಿದರು.


ಫ್ರಾನ್ಸ್‌ನಲ್ಲಿ ಒಲಿಮಿಯಾ ಕುಟುಂಬದ ೪೫೧೪ ಜನ ಒಂದೆಡೆ ಸೇರಿದ "ಲಾರ್ಜೆಸ್ಟ್ ಫ್ಯಾಮಿಲಿ ಗ್ಯಾದರಿಂಗ್" ದಾಖಲೆಯನ್ನು ಮುರಿಯುವುದಕ್ಕಾಗಿ ಡಿ೨೪ ರಂದು ವಿರಾಜಪೇಟೆಯ "ಕೂರ್ಗ್ ಎತ್ನಿಕ್" ನಲ್ಲಿ ಸುಮಾರು ೫ ಸಾವಿರಕ್ಕೂ ಹೆಚ್ಚಿನ ಕೊಡವರನ್ನು ಸೇರಿಸಲಾಗುತ್ತಿದೆ. ಇಲ್ಲಿ ಬಂದು ಸೇರುವ ಎಲ್ಲಾ ಕೊಡವರು ಒಂದೇ ಕುಟುಂಬದವರೆಂದು ದೃಢೀಕರಿಸಿ ಅವಿನಾಭಾವ ಸಂಬಂಧವನ್ನು ಗಟ್ಟಿಗೊಳಿಸುವ ವಿಶ್ವಾಸವನ್ನು ಹೊಂದಿದ್ದೇವೆ. ಎಲ್ಲಾ ಕೊಡವರು ಒಂದೇ ಸ್ಥಳದಲ್ಲಿ ಸೇರುವ ಮೂಲಕ ಹೊಸ ವಿಶ್ವ ದಾಖಲೆ ಮಾಡಲಿದ್ದೇವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ವಿರಾಜಪೇಟೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನ ಪ್ರತಿನಿಧಿಗಳು ಆಗಮಿಸಿ ಸಂಖ್ಯೆಯನ್ನು ದಾಖಲೀಕರಣ ಮಾಡಿಕೊಳ್ಳಲಿದ್ದಾರೆ. ನಂತರ ವಿಶ್ವ ದಾಖಲೆಗೆ ಶಿಫಾರಸ್ಸು ಆಗಲಿದೆ ಎಂದು ತಿಳಿಸಿದರು.


ಕೊಡವರು ಸೇರುವ ಕೂರ್ಗ್ ಎತ್ನಿಕ್ ನಲ್ಲಿ ಹಲವು ಬಗೆಯ ಸುಮಾರು ೫೦ ಸ್ಟಾಲ್ ಗಳನ್ನು ತೆರೆಯಲಾಗುವುದು. ವಿವಿಧ ಸ್ಪರ್ಧೆಗಳು, ಫ್ಯಾಷನ್ ಶೋ ಮತ್ತು ವಾಲಗತ್ತಾಟ್ ನಡೆಯಲಿದೆ. ಹಿರಿಯ ಕಲಾವಿದ ಮುಳ್ಳೇರ ಜಿಮ್ಮಿ ಅಯ್ಯಪ್ಪರವರ ನೆನಪಿನಲ್ಲಿ ಅವರ ಹಾಡುಗಳನ್ನು ವಿರಾಜಪೇಟೆ ತಂಡದವರು ಹಾಡಲಿದ್ದಾರೆ. ಕೊಡವ ಸಾಹಿತಿಗಳು ಬರೆದಿರುವ ಪುಸ್ತಕಗಳ ಮಾರಾಟಕ್ಕಾಗಿ ಪ್ರತ್ಯೇಕ ಸ್ಟಾಲ್ ವ್ಯವಸ್ಥೆ ಮಾಡಲಾಗುವುದು. ಕಾರ್ಯಕ್ರಮ ಬೆಳಗ್ಗೆ ೮.೩೦ ಗಂಟೆಯಿಂದ ಹೆಸರು ನೋಂದಣಿ ಮೂಲಕ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.


ಕೊಡವ ಕ್ಲಾನ್ ಸಂಸ್ಥೆ ಕಳೆದ ೮ ವರ್ಷಗಳಿಂದ ೨೧ ಸಾವಿರಕ್ಕೂ ಹೆಚ್ಚಿನ ಕೊಡವರು ಒಂದೇ ವಂಶ ವೃಕ್ಷದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದು, ಈಗಾಗಲೇ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ೧೮ ತಲೆಮಾರಿನ ಒಟ್ಟು ೭೫೧ ಕೊಡವ ಕುಟುಂಬಗಳ ದಾಖಲೆಗಳು ಕೊಡವ ಕ್ಲಾನ್ ವಂಶವೃಕ್ಷದಲ್ಲಿದೆ ಎಂದು ಕಿಶು ಉತ್ತಪ್ಪ ತಿಳಿಸಿದರು.


ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಕೊಡವ ಕ್ಲಾನ್‌ನ ಕೊಡವ ಕುಟುಂಬಗಳ ವಂಶವೃಕ್ಷದ ಪರಿಕಲ್ಪನೆ ಅದ್ಭುತವಾಗಿದೆ. ವಿರಾಜಪೇಟೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ವಿಶ್ವ ದಾಖಲೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದ ಅವರು, ಹೆಚ್ಚಿನ ಮಾಹಿತಿಗೆ ೯೮೪೫೩೯೦೫೨೨ (ಕಿಶುಉತ್ತಪ್ಪ) ಹಾಗೂ ೯೮೮೦೭೭೮೦೪೭ (ಬೊಳ್ಳಜಿರ ಬಿ.ಅಯ್ಯಪ್ಪ) ಅವರನ್ನು ಸಂಪರ್ಕಿಸಬಹುದೆಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net