

ಮಡಿಕೇರಿ: ಕೊಡವ ಪಾರಂಪಾರಿಕ ಕೇಂದ್ರದ ನಿರ್ಮಾಣ ಸಂಬಂಧ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಲು ತಕ್ಷಣ ಸಮಗ್ರ ಅಂದಾಜು ಪಟ್ಟಿ ಸಲ್ಲಿಸುವಂತೆ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ.ಎನ್.ವಿ. ಪ್ರಸಾದ್ ಸೂಚಿಸಿದ್ದಾರೆ.
ಬುಧವಾರ ವಿಡಿಯೊ ಸಂವಾದ ಮೂಲಕ ಕೊಡವ ಹೆರಿಟೇಜ್ ಕಟ್ಟಡ ನಿರ್ಮಾಣ ಕಾಮಗಾರಿ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅವರಿಂದ ಮಾಹಿತಿ ಪಡೆದು ಮಾತನಾಡಿದರು. ಕೊಡವ ಹೆರಿಟೇಜ್ ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಆ ನಿಟ್ಟಿನಲ್ಲಿ ಅಂದಾಜು ಪಟ್ಟಿ ಸಲ್ಲಿಸಬೇಕೆಂದರು.
ಜಿಲ್ಲೆಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಜೊತೆ ಮಾತನಾಡಿ ಹಣಕಾಸು ಇಲಾಖೆಯಿಂದ ಹಣ ಬಿಡುಗಡೆಗೆ ಕ್ರಮ ವಹಿಸ ಲಾಗುವುದು. ಈಗಾಗಲೇ ಶೇ.೭೫ ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಆ ನಿಟ್ಟಿನಲ್ಲಿ ಬಾಕಿ ಇರುವ ಕಾಮಗಾರಿ ಕೈಗೊಳ್ಳಲು ಮುಂದಾಗಬೇಕೆಂದರು.
ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಮಾತನಾಡಿ, ಕೊಡವ ಹೆರಿಟೇಜ್ ಕಟ್ಟಡದ ನಿರ್ಮಾಣ ಕಾಮಗಾರಿಯಲ್ಲಿ ಪ್ರಮುಖವಾಗಿ ಲ್ಯಾಟರೈಟ್ ಗೋಡೆಗಳಿಗೆ ಪಾಲಿಂಗ್ ಆಗಬೇಕಿದೆ. ಕಟ್ಟಡದ ಮುಂಭಾಗ ಗೇಟ್ ಮತ್ತು ಸುತ್ತುಗೋಡೆ ನಿರ್ಮಿಸಬೇಕಿದೆ. ಮೆಟ್ಟಿಲುಗಳಿಗೆ ರೇಲಿಂಗ್ಸ್ ಮತ್ತು ಪ್ರೋರಿಂಗ್ ಮಾಡಬೇಕಿದೆ. ರಂಗಮಂದಿರಕ್ಕೆ ಮೇಲ್ಛಾವಣಿ ಹಾಗೂ ಇತರ ಕೆಲಸಗಳು ಬಾಕಿ ಇದೆ ಎಂದರು.
ಕೊಡವ ಹೆರಿಟೇಜ್ ಸೆಂಟರ್ ನಿರ್ಮಾಣ ಸಂಬಂಧ ೩೩೦.೪೫ ಲಕ್ಷ ರೂ. ಕಾಮಗಾರಿಗೆ ಅನುಮೋದನೆ ದೊರೆತಿದೆ. ಐನ್‌ಮನೆ, ಬಯಲು ರಂಗಮಂದಿರ, ವಾಟರ್ ಟ್ಯಾಂಕ್, ತಡೆಗೋಡೆ ಮತ್ತು ಸಂಪರ್ಕ ಮೆಟ್ಟಿಲು, ವಿದ್ಯುತ್ ಸಂಪರ್ಕ ಮತ್ತಿತರ ಕಾಮಗಾರಿಗಳು ಪೂರ್ಣ ಗೊಂಡಿದೆ. ಈಗಾಗಲೇ ೨೮೨.೫೦ ಲಕ್ಷ ರೂ. ಬಿಡುಗಡೆಯಾಗಿದ್ದು, ೪೭.೯೫ ಲಕ್ಷ ರೂ. ಬಿಡುಗಡೆಗೆ ಬಾಕಿ ಇದೆ ಎಂದು ಮಾಹಿತಿ ನೀಡಿದರು.
ಕೊಡವ ಹೆರಿಟೇಜ್ ಕಾಮಗಾರಿ ಸಂಬಂಧ ೧೦ ದಿನದಲ್ಲಿ ಅಂದಾಜು ಪಟ್ಟಿ ಸಲ್ಲಿಸಲಾಗುವುದು. ನಿವೃತ್ತ ಐಎಎಸ್ ಅಧಿಕಾರಿ ರತಿ ವಿನಯ್ ಜಾ ಕೊಡವ ಪಾರಂಪರಿಕ ಕೇಂದ್ರ ನಿರ್ಮಾಣಕ್ಕೆ ಸಾಕಷ್ಟು ಶ್ರಮಿಸಲಾಗಿದೆ. ಆ ನಿಟ್ಟಿನಲ್ಲಿ ಕಾಮಗಾರಿ ಪೂರ್ಣಗೊಳಿಸಲು ಮುಂದಾಗ ಬೇಕೆಂದರು.
ಕೊಡವ ಹೆರಿಟೇಜ್ ಕೇಂದ್ರವು ಮುಂದಿನ ಪೀಳಿಗೆಗೆ ಕೊಡವ ಸಂಸ್ಕೃತಿ ಪರಿಚಯಿಸುವಲ್ಲಿ ಸಹಕಾರಿಯಾಗಲಿದೆ. ಕೊಡವ ಸಂಸ್ಕೃತಿ ಎಲ್ಲೆಡೆ ಫಸರಿಸುವ ನಿಟ್ಟಿನಲ್ಲಿ ಕೊಡವ ಹೆರಿಟೇಜ್ ಸೆಂಟರ್ ನಿರ್ಮಾಣ ಮಾಡಲಾಗುತ್ತದೆ ಎಂದರು.
ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಯತೀಶ್ ಉಳ್ಳಾಲ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳಾದ ಚೆನ್ನಕೇಶವ, ಸತೀಶ್ ಮತ್ತಿತರರು ಇದ್ದರು.