ಕೊಡವ ಸ್ವಾತಂತ್ರೃ ಹೋರಾಟಗಾರರ ಸ್ಮರಣೆ

7mdks1 - Copy
Published on

ಮಡಿಕೇರಿ: ಸ್ವಾತಂತ್ರೃ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಕೊಡವ ಸ್ವಾತಂತ್ರೃ ಹೋರಾಟಗಾರರನ್ನು ಸ್ಮರಿಸುವ ಆರ್ಥಪೂರ್ಣ ಕಾರ್ಯಕ್ರಮ ರೆಡ್ ಕ್ರಾಸ್ ಸಭಾಂಗಣದಲ್ಲಿ ಬುಧವಾರ ನಡೆಯಿತು. ಕೊಡವಾಮೆರ ಕೊಂಡಾಟ ಸಂಘಟನೆ ಆಯೋಜಿಸಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ೨೪೭ ಕೊಡವ ಸ್ವಾತಂತ್ರೃ ಹೋರಾಟಗಾರರನ್ನು ಸ್ಮರಿಸಲಾಯಿತು.

ದೇಶದ ಸ್ವಾತಂತ್ರೃಕ್ಕಾಗಿ ಬಾಳೆಲೆಯಲ್ಲಿ ಬ್ರಿಟಿಷರ ವಿರುದ್ಧ ನಡೆದ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಪೊಡಮಾಡ ಪೊನ್ನಪ್ಪ ಅವರನ್ನು ಸನ್ಮಾನಿಸ ಲಾಯಿತು. ೮ನೇ ತರಗತಿಗೆ ತೆರಳುತ್ತಿದ್ದ ನಾನು ಸೇರಿದ್ದಂತೆ ನಾಲ್ವರು ವಿದ್ಯಾರ್ಥಿಗಳನ್ನು ಸ್ವಾತಂತ್ರೃ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕೃಷ್ಣಯ್ಯ ಎಂಬುವವರು ಕರೆದುಕೊಂಡು ಹೋಗಿದ್ದರು. ನಮ್ಮೊಂದಿಗೆ ಇದ್ದ ಒಬ್ಬ ವಿದ್ಯಾರ್ಥಿ ಶಾಲೆಗೆ ತೆರಳಿದ್ದು, ಮೂವರು ವಿದ್ಯಾರ್ಥಿಗಳು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾಗಿ ಪೊಡಮಾಡ ಪೊನ್ನಪ್ಪ ಹೇಳಿದರು.

ಸ್ವಾತಂತ್ರೃ ಹೋರಾಟದಲ್ಲಿ ಪಾಲ್ಗೊಂಡಿದ್ದ ಸ್ವಾತಂತ್ರೃ ಹೋರಾಟಗಾರರ ಪರವಾಗಿ ಅವರ ಕುಟುಂಬ ಸದಸ್ಯರಿಗೆ ಸ್ಮರಣಿಕೆ ನೀಡುವುದರ ಮೂಲಕ ಗೌರವಿಸಲಾಯಿತು. ಕೊಡವಾಮೆರ ಕೊಂಡಾಟ ಸಂಘಟನೆ ಸಂಗ್ರಹಿಸಿರುವ ೨೪೭ ಸ್ವಾತಂತ್ರೃ ಹೋರಾಟಗಾರರ ಹೆಸರು ವಾಚಿಸು ವುದರ ಮೂಲಕ ಗೌರವ ಸೂಚಿಸಲಾಯಿತು.

ಸ್ವಾತಂತ್ರೃ ಚಳುವಳಿಯಲ್ಲಿ ಕೊಡವರು ವಿಷಯ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅಮ್ಮುಣಿಚಂಡ ಗಂಗಮ್ಮ ಬೆಳ್ಯಪ್ಪ, ದ್ವಿತೀಯ ಸ್ಥಾನ ಪಡೆದ ಬೊಟ್ಟಂಗಡ ಸುಮನ್ ಸೀತಮ್ಮ, ತೃತೀಯ ಬಹುಮಾನ ಪಡೆದ ಅಪ್ಪೀರ ಆಶೀಕಾ ಉತ್ತಯ್ಯ ಅವರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.

ಕೊಡವರಲ್ಲಿರುವ ಉದಾಸೀನ ಮನೋಭಾವನೆ ಮತ್ತು ನಮ್ಮ ಬಗ್ಗೆ ನಮ್ಮಲ್ಲಿ ಜಾಗೃತಿ ಇಲ್ಲದಿರುವುದರಿಂದ ಕೊಡವ ಸ್ವಾತಂತ್ರೃ ಹೋರಾಟ ಗಾರರ ಅರಿವು ಸಮಾಜಕ್ಕೆ ಇಲ್ಲ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಳ್ಳಿಯಡ ಎಂ. ಪೂವಯ್ಯ ವಿಷಾದ ವ್ಯಕ್ತ ಪಡಿಸಿದರು.

ಸ್ವಾತಂತ್ರೃ ಅಮೃತ ಮಹೋತ್ಸವ ಪ್ರಯುಕ್ತ ವಾರ್ತಾ ಇಲಾಖೆ ನೀಡಿದ ಜಾಹೀರಾತಿನಲ್ಲಿ ಗುಡ್ಡೆಮನೆ ಅಪ್ಪಯ್ಯ ಗೌಡ ಅವರ ಫೋಟೋ ಇತ್ತು. ೧೮೫೭ ರ ಸಿಪಾಯಿ ದಂಗೆ ದೇಶದ ಮೊದಲ ಅಧಿಕೃತ ಸ್ವಾತಂತ್ರೃ ಚಳುವಳಿ. ಹೀಗಿರುವಾಗ ೧೯೩೪ ರಲ್ಲಿ ಬ್ರಿಟಿಷರು ಗಲ್ಲಿಗೇರಿಸಿದ ಗುಡ್ಡೆಮನೆ ಅಪ್ಪಯ್ಯಗೌಡ ಹೇಗೆ ಸ್ವಾತಂತ್ರೃ ಹೋರಾಟಗಾರರಾಗುತ್ತಾರೆಂದು ಪ್ರಶ್ನಿಸಿದರು.

ಮಡಿಕೇರಿ ಕೋಟೆಯಲ್ಲಿ ಬ್ರಿಟಿಷರ ಧ್ವಜ ಇಳಿಸಿ, ತ್ರಿವರ್ಣ ಧ್ವಜ ಹಾರಿಸಿದ ಮಲ್ಲೇಂಗಡ ಪಿ. ಚಂಗಪ್ಪ, ಹುಬ್ಬಳ್ಳಿ ಹುಲಿ ಎಂದು ಪ್ರಖ್ಯಾತಿ ಹೊಂದಿದ ಚೆಕ್ಕೇರ ಮೊಣ್ಣಯ್ಯ, ಕೊಡಗಿನ ಗಾಂಧಿ ಪಂದ್ಯಂಡ ಬೆಳ್ಯಪ್ಪ, ದೊಡ್ಡ ಹೋರಾಟಗಾರ ಪಾರುವಂಗಡ ಕುಶಾಲಪ್ಪ ಪ್ರಮುಖ ಸ್ವಾತಂತ್ರೃ ಹೋರಾಟಗಾರರೆಂದು ಬಣ್ಣಿಸಿದರು. ನೂರಾರು ಸಂಘಟನೆಗಳು ಇದ್ದರೂ ಕೊಡವಾಮೆರ ಕೊಂಡಾಟ ಸಂಘಟನೆ ಕೊಡವ ಸ್ವಾತಂತ್ರೃ ಹೋರಾಟಗಾರರನ್ನು ನೆನೆಯುವ ಕೆಲಸ ಮಾಡಿದೆ ಎಂದು ಉಳ್ಳಿಯಡ ಪೂವಯ್ಯ ಮೆಚ್ಚುಗೆ ವ್ಯಕ್ತ ಪಡಿಸಿದರು.

ಕೊಡವ ವೀರ ಸೇನಾನಿಗಳು, ಸ್ವಾತಂತ್ರೃ ಹೋರಾಟಗಾರರ ಪುತ್ಥಳಿ ಸ್ಥಾಪಿಸುವುದರ ಮೂಲಕ ಅವರನ್ನು ಪ್ರತಿಯೊಬ್ಬರು ಸದಾ ನೆನೆಯು ವಂತೆ ಮಾಡಬೇಕೆಂದು ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಹೇಳಿದರು. ಕೊಡವ ಸ್ವಾತಂತ್ರೃ ಹೋರಾಟಗಾರರನ್ನು ನೆನೆಯುವ ಒಳ್ಳೆಯ ಕಾರ್ಯಕ್ರಮವನ್ನು ಕೊಡವಾಮೆರ ಕೊಂಡಾಟ ಸಂಘಟನೆ ಆಯೋಜಿಸಿದ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಮುಖ್ಯಅತಿಥಿಯಾಗಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕಿ ಕಂಬೆಯಂಡ ಡೀನಾ ಬೋಜಣ್ಣ, ದಾನಿ ಗಳಾದ ಕೊಂಗಂಡ ಕಾಶಿ ಕಾರ್ಯಪ್ಪ, ಕುಕ್ಕೇರ ಜಯ ಚಿಣ್ಣಪ್ಪ, ಮಲ್ಲಂಡ ದರ್ಶನ್ ಮುತ್ತಪ್ಪ ಪಾಲ್ಗೊಂಡಿದ್ದರು. ಅಖಿಲ ಕೊಡವ ಸಮಾಜ ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ, ನಾಪೋಕ್ಲು ಕೊಡವ ಸಮಾಜ ಅಧ್ಯಕ್ಷ ಅಪ್ಪಚಟ್ಟೋಳಂಡ ಮನು ಮುತ್ತಪ್ಪ, ಮಕ್ಕಂದೂರು ಕೊಡವ ಸಮಾಜ ಅಧ್ಯಕ್ಷ ತಂಬುಕುತ್ತೀರ ಮಧು, ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ, ಭಾರತೀಯ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ.ಸಣ್ಣುವಂಡ ಕಾವೇರಪ್ಪ, ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಮತ್ತಿತರರು ಪಾಲ್ಗೊಂಡಿದ್ದರು.

ಚಾಮೆರ ದಿನೇಶ್ ಬೆಳ್ಯಪ್ಪ ಬರೆದಿರುವ ಕೊಡವ ಅಭಿಮಾನದ ಗೀತೆಯನ್ನು ಪೋಡಮಾಡ ಭವಾನಿ ನಾಣಯ್ಯ ಹಾಡಿದರು. ಚೋಕೀರ ಅನಿತಾ ನಿರೂಪಿಸಿದರು. ತೀತಿಮಾಡ ಸೋಮಣ್ಣ ಸ್ವಾಗತಿಸಿದರು. ಮಾಳೇಟಿರ ಸೀತಮ್ಮ ವಿವೇಕ್ ವಂದಿಸಿದರು. ಸ್ವಾತಂತ್ರೃ ಹೋರಾಟಗಾರ ರ ಹೆಸರನ್ನು ಕುಂಞೀರ ಗಿರೀಶ್ ಭೀಮಯ್ಯ ವಾಚಿಸಿದರು. ಮಾಳೇಟಿರ ಅಜಿತ್ ಪೂವಣ್ಣ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರ ಹೆಸರು ಘೋಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net