ಹಾಕಿ ತವರಿನ ಹೆಸರು ಉಳಿಸಿ

28 gkp. 04
Published on

ಗೋಣಿಕೊಪ್ಪ: ಭಾರತ ಹಾಕಿ ತಂಡದಲ್ಲಿ ಕೊಡಗಿನ ಆಟಗಾರರ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಹೀಗೆ ಮುಂದುವರಿದರೆ ಹಾಕಿ ತವರೂರಾದ ಕೊಡಗಿನ ಹೆಗ್ಗಳಿಕೆಗೆ ಹಿನ್ನಡೆಯಾಗಲಿದೆ. ಆದ್ದರಿಂದ ಕೊಡವರು ಯಾವುದೇ ಕಾರಣಕ್ಕೂ ಹಾಕಿ ಕ್ರೀಡೆಯನ್ನು ನಿರ್ಲಕ್ಷಿಸಬಾರದು ಎಂದು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಕರೆ ನೀಡಿದರು.

ಬಿಟ್ಟಂಗಾಲ ಸಮೀಪದ ವಿ.ಬಾಡಗ ಹೈ ಪ್ಲೈಯರ್ಸ್ ಸಂಸ್ಥೆ ವತಿಯಿಂದ ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ ವಿರಾಜಪೇಟೆ ತಾಲೂಕಿನ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ 2ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ‘ ಹೈ ಪ್ಲೈಯರ್ಸ್ ಕಪ್-2023’ಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ಹಾಕಿ ಕ್ರೀಡೆ ಬಗ್ಗೆ ಕೊಡವರು ಆಸಕ್ತಿ ವಹಿಸದಿದ್ದಲ್ಲಿ ಅದಕ್ಕೆ ಭವಿಷ್ಯವಿಲ್ಲ. ಕೊಡವರ ಹೆಗ್ಗಳಿಕೆಗಳಿಗೆ ಒಂದು ಗರಿ ಮೂಡಿಸುವಲ್ಲಿ ಹಾಕಿ ಕ್ರೀಡೆಯ ಪಾತ್ರವೂ ಬಹಳಷ್ಟಿದೆ. ಆದ್ದರಿಂದ ಕೊಡಗಿನ ನೈಜ ಹಾಕಿ ಆಟಗಾರರನ್ನು ರೂಪಿಸಲು ಕೆಳಮಟ್ಟದ ಶ್ರಮ ತೀರಾ ಅಗತ್ಯ ಎಂದು ಅಭಿಪ್ರಾಯ ಪಟ್ಟರು. ದೇಶದ ಹಾಕಿ ಕ್ರೀಡೆಗೆ ಕೊಡಗಿನ ಕೊಡುಗೆ ಅಪಾರ ವಾದದ್ದು. ಕೊಡಗನ್ನು ಹೊರತುಪಡಿಸಿ ಹಾಕಿಯ ಇತಿಹಾಸ ಬರೆಯಲು ಸಾಧ್ಯವಿಲ್ಲ. ಕೊಡಗಿನಲ್ಲಿ ಹಾಕಿ ಕ್ರೀಡೆ ಆಳವಾಗಿ ಬೇರೂರುವಲ್ಲಿ ಹಿಂದಿನಿಂದಲೂ ಗ್ರಾಮೀಣ ಕ್ರೀಡಾ ಕೂಟಗಳು ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದ ಬೋಪಣ್ಣ, ಹಾಕಿ ಕ್ರೀಡೆಯ ಅಸ್ತಿತ್ವ ಕಾಪಾಡಲು ಪ್ರತಿಯೊಬ್ಬ ಕೊಡವನ ಸಹಕಾರ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಅಂತಾರಾಷ್ಟ್ರೀಯ ಅಥ್ಲೀಟ್ ತೀತಮಾಡ ಅರ್ಜುನ್ ದೇವಯ್ಯ ಮಾತನಾಡಿದರು. ಇದಕ್ಕೂ ಮೊದಲು ಹೈ ಪ್ಲೈಯರ್ಸ್ ಕಪ್-2023ರ ವಿಜೇತರಿಗೆ ನೀಡಲಾಗುವ ಆಕರ್ಷಕ ಟ್ರೋಫಿಗಳನ್ನು ಅರ್ಜುನ್ ದೇವಯ್ಯ ವೇದಿಕೆಯಲ್ಲಿ ಅನಾವರಣಗೊಳಿಸಿದರು. ಎನ್. ಯು. ನಾಚಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಹಾಕಿ ಕೂರ್ಗ್ ಸಂಸ್ಥೆಯ ಅಧ್ಯಕ್ಷ ಪಳಂಗಂಡ ಲವಕುಮಾರ್, ಕಾಫಿ ಬೆಳಗಾರರಾದ ಕೊಲ್ಲಿರ ಬೋಪಣ್ಣ, ಸ್ಥಳೀಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕಂಜಿತಂಡ ಗಿಣಿ ಮೊಣ್ಣಪ್ಪ, ವಿ.ಬಾಡಗ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕೆ. ಸಿ.ಗೀತಾಂಜಲಿ, ಹೈಪ್ಲೈಯರ್ಸ್ ಸಂಸ್ಥೆಯ ಸಲಹಾ ಸಮಿತಿ ಅಧ್ಯಕ್ಷ ಮಳವಂಡ ಗಿರೀಶ್ ಮುದ್ದಯ್ಯ, ಪಂದ್ಯಾವಳಿ ನಿರ್ದೇಶಕರಾದ ಕುಪ್ಪಂಡ ದಿಲನ್ ಬೋಪಣ್ಣ ಮೊದಲಾದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net