

ಮಡಿಕೇರಿ: ಕೊಡವರ ಸಮಗ್ರ ಅಭಿವೃದ್ಧಿಗಾಗಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಅನಿವಾರ್ಯ. ಈ ನಿಟ್ಟಿನಲ್ಲಿ ೨ನೇ ಹಂತದ ಹೋರಾಟ ಕೈಗೆತ್ತಿಕೊಳ್ಳಲಾಗುವುದೆಂದು ಯುನೈಟೆಡ್ ಕೊಡವ ಆರ್ಗನೈಜೇಷನ್ (ಯುಕೊ) ಅಧ್ಯಕ್ಷ ಕೊಕ್ಕಲೇಮಾಡ ಮಂಜು ಚಿಣ್ಣಪ್ಪ ಹೇಳಿದ್ದಾರೆ.
ಯುಕೊ ಸಂಘಟನೆ ಹೋರಾಟದ ಫಲವಾಗಿಯೇ ಕೊಡವರ ಶ್ರೇಯೋಭಿವೃದ್ಧಿಗಾಗಿ ಮುಂಗಡ ಪತ್ರದಲ್ಲಿ ೧೦ ಕೋಟಿ ರೂ. ಅನುದಾನ ಘೋಷಣೆಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಾಕತ್ತಿದ್ದರೆ ಇದೀಗ ಪ್ರಚಾರ ಪಡೆಯುತ್ತಿರುವವರು ಅವರ ಪ್ರಯತ್ನದಿಂದ ಕೊಡವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಅನುದಾನ ತಂದು ತೋರಿಸಲಿ ಎಂದು ಸವಾಲು ಹೇಳಿದರು. ಇದೀಗ ೧೦ ಕೋಟಿ ಹಂಚಿಕೆ ವಿಷಯದಲ್ಲಿ ಸರ್ವಾಧಿಕಾರಿ ಧೋರಣೆ ತೋರಿರುವುದ ಖಂಡನೀಯ ಎಂದಿದ್ದಾರೆ.
ಕೊಡವರ ಸಮಗ್ರ ಶ್ರೇಯೋಭಿವೃದ್ಧಿಗಾಗಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಮುಂದಿನ ಹಂತದ ಹೋರಾಟ ತೀವ್ರಗೊಳಿಸಲಾಗುವುದು. ಯುಕೊ ಸಂಘಟನೆ ಸಮಯೋಚಿತ ಬೇಡಿಕೆ ಪರಿಗಣಿಸಿ ಕಳೆದ ಸಾಲಿನ ಬಜೆಟಿನಲ್ಲಿ ಸಿಎಂ ಕೊಡವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ೧೦ ಕೋಟಿ ರೂ. ಘೋಷಿಸಿದ್ದಾರೆ. ಈ ಅನುದಾನ ತರಲು ಯುಕೊ ನಿಯೋಗದೊಂದಿಗೆ ಸಹಕರಿಸಿದ ಜನಪ್ರತಿನಿಧಿಗಳು ಯಾರು ಎಂಬುದು ಜನತೆಗೆ ಸ್ಪಷ್ಟ ಅರಿವಿದೆ.
ಇದೀಗ ಸರ್ವಾಧಿಕಾರಿ ಧೋರಣೆಯಿಂದ ಈ ಹಣವನ್ನು ರಾಜಕೀಯ ದುರುದ್ದೇಶ ಹಾಗೂ ಸ್ವಹಿತಾಸಕ್ತಿಯೊಂದಿಗೆ ಬೇರೆಡೆಗೆ ವರ್ಗಾ ಯಿಸುವ ಮೂಲಕ ಕೊಡವ ಜನಾಂಗದ ಅಭಿವೃದ್ಧಿಗೆ ಬಳಕೆಯಾಗದಂತೆ ಮಾಡಿರುವುದು ಬೇಸರದ ವಿಚಾರ. ಆದ್ದರಿಂದ ಘೋಷಿಸಿದ ೧೦ ಕೋಟಿ ಅನುದಾನ ತಡೆ ಹಿಡಿದು, ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಿ ಆ ಮೂಲಕವೇ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.
ಕೊಡವ ಜನಾಂಗದ ಬುನಾದಿ ಹಾಗೂ ಶೃದ್ಧಾ ಕೇಂದ್ರವೇ ಕೊಡವರ ಐನ್‌ಮನೆ. ಇವುಗಳ ಉನ್ನತೀಕರಣಕ್ಕಾಗಿ, ಕೊಡವರ ಭಾವನಾತ್ಮಕ, ಆಧ್ಯಾತ್ಮಿಕ ಕೇಂದ್ರಗಳಾದ ಕೈಮಡ ಹಾಗೂ ಕೊಡವರ ಪಾರಂಪರಿಕ ತಾಣಗಳಾದ ಮಂದ್‌ಮಾನಿಗಳ ಪುನಶ್ಚೇತನಕ್ಕೆ ನೇರವಾಗಿ ಉಪಯೋಗವಾಗಬೇಕಿದ್ದ ಅನುದಾನ, ಸರ್ಕಾರಕ್ಕೆ ತಪ್ಪು ಮಾಹಿತಿನೀಡುವುದರ ಮೂಲಕ ಅನಾವಶ್ಯಕ ಉದ್ದೇಶಕ್ಕೆ ವರ್ಗಾಯಿಸಲಾಗಿದೆ, ಇದು ಕೊಡವ ಜನಾಂಗಕ್ಕೆ ಮಾಡಿದ ದ್ರೋಹ ಎಂದು ಕಿಡಿಕಾರಿದರು.