

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕೊಡವ ಕ್ರಿಕೆಟ್ ಲೀಗ್‌ನಲ್ಲಿ ಮೈಸೂರು ಮಕ್ಕ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ಪರಾಭವಗೊಂಡ ಟೀಮ್ ಕೈಮಡ ತಂಡ ದ್ವಿತೀಯ ಸ್ಥಾನ ಪಡೆಯಿತು. ಪಿ ಆ್ಯಂಡ್ ಜಿ ಕ್ರಿಯೇಷನ್ ನಾಲ್ನಾಡ್ ನರಿಯ ತಂಡ ತೃತೀಯ ಸ್ಥಾನ ಪಡೆಯಿತು.
ಕತ್ತಲೆಯಾಗಿದ್ದರಿಂದ ಮೂವರು ಓವರ್‌ಗೆ ಅಂತಿಮ ಪಂದ್ಯ ಸೀಮಿತಗೊಳಿಸಲಾತು. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಮೈಸೂರು ಮಕ್ಕ ತಂಡಕ್ಕೆ ಟೀಮ್ ಕೈಮಡ ತಂಡ ೨೫ ರನ್ ಗುರಿ ನೀಡಿತು. ಮೈಸೂರು ಮಕ್ಕ ೨.೨ ಓವರ್‌ನಲ್ಲಿ ವಿಕೆಟ್ ಕಳೆದುಕೊಳ್ಳದೆ ಗೆಲುವು ಸಾಧಿಸಿತು.
ತೀರ್ಪುಗಾರರಾಗಿ ರವಿ, ಯಶ್ವಂತ್, ಧನುಷ್, ರಘು, ಹರ್ಷವರ್ಧನ್, ರಾಹುಲ್, ವೀಕ್ಷಕ ವಿವರಣೆಗಾರರಾಗಿ ಚಂಡೀರ ರಚನ್, ಕೊಟ್ಟಂಗಡ ಅಪ್ಪಣ್ಣ, ಪೋರ್ಕಂಡ ಸುನಿಲ್ ಕಾರ್ಯನಿರ್ವಹಿಸಿದರು.
ಪ್ರಥಮ ಬಾರಿಗೆ ಐಪಿಎಲ್ ಮಾದರಿಯಲ್ಲಿ ಆಯೋಜಿಸಿದ್ದ ಕೊಡವ ಕ್ರಿಕೆಟ್ ಲೀಗ್ ಜನಮನ ರಂಜಿಸಿತು. ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಕ್ರೀಡಾಪ್ರೇಮಿಗಳು ಚಪ್ಪಾಳೆ, ಶಿಳ್ಳೆ, ಬ್ಯಾಂಡ್ ಮೂಲಕ ತಮ್ಮ ನೆಚ್ಚಿನ ತಂಡಕ್ಕೆ ಬೆಂಬಲ ನೀಡಿದರು. ವಾಲಗ ಸಂಭ್ರಮವನ್ನು ದುಪ್ಪಟ್ಟುಗೊಳಿಸಿತು.
ಇದೇ ಸಂದರ್ಭ ’ಲೇಲುಳ್ಳಿ ಲೇ ಲೇ’ ಕೊಡವ ಅಲ್ಬಂ ಹಾಡನ್ನು ಲೋಕಾರ್ಪಣೆ ಮಾಡಲಾಯಿತು. ತಿಂಗಕೊರ್ ಮೊಟ್ಟ್ ತಲಕಾವೇರಿಕ್ ತಂಡದಿಂದ ಉಮ್ಮತಾಟ್, ಕೋಲಾಟ್, ಪರೆಕಳಿ ಪ್ರದರ್ಶನಗೊಂಡಿತು. ಸಿಡಿಮದ್ದು ಸಿಡಿಸಲಾಯಿತು.
ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಮಾತನಾಡಿ, ಕೊಡವರ ಪ್ರತಿ ಮನೆಯಲ್ಲಿ ಕ್ರೀಡಾಪಟುಗಳಿದ್ದಾರೆ. ವಿಶ್ವಮಟ್ಟದಲ್ಲಿ ಹಲವು ಕೊಡವ ಕ್ರೀಡಾಪಟುಗಳು ಸಾಧನೆಗೈದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕೊಡವರನ್ನು ಒಗ್ಗೂಡಿಸಿ ಕ್ರಿಕೆಟ್ ಆಯೋಜಿಸಿರುವುದು ಶ್ಲಾಘನಿಯ ಎಂದರು.
ಕ್ರೀಡೆಯಿಂದ ಜನಾಂಗ ಒಂದಾಗಲು ವೇದಿಕೆ ಸೃಷ್ಟಿಯಾಗುತ್ತದೆ. ಸ್ನೇಹ ವೃದ್ಧಿಸಿ ಆರೋಗ್ಯ ಸಮಾಜ ನಿರ್ಮಾಣವಾಗುತ್ತದೆ. ಕೊಡಗು ಉಳಿಯಬೇಕಾದರೆ ಕೊಡವ ಸಂಸ್ಕೃತಿ, ಆಚಾರ-ವಿಚಾರ ಉಳಿಯಬೇಕು. ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖಗೊಳ್ಳಬೇಕೆಂದರು.
ಕಾಂಗ್ರೆಸ್ ಮುಖಂಡ ಡಾ.ಮಂಥರ್ ಗೌಡ ಮಾತನಾಡಿ, ಕ್ರೀಡಾಕೂಟ ಹೆಚ್ಚಾಗಿ ನಡೆದರೆ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ದೊರೆಯುತ್ತದೆ. ಕ್ರೀಡೆಯಲ್ಲಿ ಯುವಕರು ಹೆಚ್ಚಾಗಿ ತೊಡಗಿಸಿಕೊಳ್ಳಬೇಕೆಂದರು.
ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಕುಟ್ಟಂಡ ಕುಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಯಾಗಿ ರೆನ್‌ಜಿಟ್ ಟೆಕ್ನೋಲಾಜಿಸ್ ನಂದೀರ ಬಿ. ತಿಮ್ಮಯ್ಯ ಪಾಲ್ಗೊಂಡಿದ್ದರು.
ಶರತ್ ನಂಜಪ್ಪ ಸರಣಿ ಶ್ರೇಷ್ಠ
ಸರಣಿ ಶ್ರೇಷ್ಠ ಪ್ರಶಸ್ತಿ ಹಾಗೂ ಆಲ್ ರೌಂಡರ್ ಪ್ರಶಸ್ತಿಯನ್ನು ಮೈಸೂರು ಮಕ್ಕ ತಂಡದ ಆಟ್ರಂಗಡ ಶರತ್ ನಂಜಪ್ಪ ತಮ್ಮದಾಗಿಸಿಕೊಂಡರು.
ಬೆಸ್ಟ್ ಬೌಲರ್- ಟೀಮ್ ಕೈಮಡದ ಶಿಯಾನ್ ಅಯ್ಯಪ್ಪ, ಬೆಸ್ಟ್ ಬ್ಯಾಟ್ಸ್‌ಮೆನ್- ನಾಲ್ನಾಡ್ ನರಿಯ ತಂಡದ ಸೋಮಯ್ಯ, ಬೆಸ್ಟ್ ಫೀಲ್ಡರ್- ನಾಲ್ನಾಡ್ ನರಿಯ ತಂಡದ ಪೋರ್ಕಂಡ ಸುನಿಲ್, ಬೆಸ್ಟ್ ವಿಕೆಟ್ ಕೀಪರ್- ಎಲ್ಸಿಎಂ ಟಸ್ಕರ್ಸ್ ಆಟ್ ೯೦ ತಂಡದ ರೋಷನ್ ಪಡೆದುಕೊಂಡರು. ಶಿಸ್ತಿನ ತಂಡ ಪ್ರಶಸ್ತಿ ಅಂಜಿಕೇರಿ ನಾಡ್ ಕೂಟ ಪಡೆದುಕೊಂಡಿತು.
ವಿಜಯವಾಣಿ ಸುದ್ದಿಜಾಲ ಮಡಿಕೇರಿ
ರಾಜ್ಯ ಎಫ್‌ಕೆಸಿಸಿಐನ ಪ್ರವಾಸೋದ್ಯಮ ಸಮಿತಿಗೆ ಜಿಲ್ಲೆಯಿಂದ ಬಿ.ಆರ್. ನಾಗೇಂದ್ರ ಪ್ರಸಾದ್ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಅಧ್ಯಕ್ಷರಾಗಿ ಜಿ.ಕೆ. ಶೆಟ್ಟಿ ೧ ವರ್ಷ ಅವಧಿಗೆ ನೇಮಕಗೊಂಡಿದ್ದಾರೆ. ೧೫ ಸದಸ್ಯರಿರುವ ಈ ಸಮಿತಿಗೆ ಜಿಲ್ಲೆಯಿಂದ ಜಿಲ್ಲಾ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಸಂಘ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ. ಗೋಪಾಲ್ ರೆಡ್ಡಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ನಾಗೇಂದ್ರ ಪ್ರಸಾದ್, ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಆಗಬೇಕಾದ ಪ್ರಗತಿ ಕಾರ್ಯಗಳ ಬಗ್ಗೆ ವಿಚಾರ ಮಂಡಿಸಿದರು. ಎಫ್ ಕೆಸಿಸಿಐನ ಪ್ರವಾಸೋದ್ಯಮ ಸಮಿತಿಯಿಂದ ರಾಜ್ಯ ಪ್ರವಾಸೋದ್ಯಮ ಸಚಿವರು, ಪ್ರಧಾನ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ಕೊಡಗಿನ ಪ್ರವಾಸೋದ್ಯಮ ಅಭಿವದ್ಧಿ ನಿಟ್ಟಿನಲ್ಲಿ ಸಮಗ್ರ ಪ್ರಸ್ತಾವನೆ ಮಂಡಿಸಿ ಅನುಮೋದನೆ ಪಡೆಯಲು ಸಭೆಯಲ್ಲಿ ತೀರ್ಮಾನಿಸ ಲಾಯಿತು.