ನಿಗಮ ಸ್ಥಾಪನೆ ನಿರೀಕ್ಷೆಯಲ್ಲಿ ಕೊಡವ ಭಾಷಿಕರು

02mdk03
Published on

ಮಡಿಕೇರಿ:

ಸುಮಾರು ಒಂದು ಲಕ್ಷದಷ್ಟು ಸಂಖ್ಯೆಯಲ್ಲಿ ಇರುವ ಕೊಡವ ಭಾಷಿಕ ಸಮುದಾಯದವರು ಈ ಬಜೆಟ್‌ನಲ್ಲಾದರೂ ತಮ್ಮ ಅಭಿವೃದ್ಧಿಗಾಗಿ ನಿಗಮವೊಂದು ಘೋಷಣೆ ಆಗುವ ನಿರೀಕ್ಷೆಯಲ್ಲಿ ಇದ್ದಾರೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿರುವ ಕೊಡವ ಭಾಷಿಕ ಸಮುದಾಯದವರು ಈ ಹಿಂದಿನಿಂದಲೂ ಈ ಸಂಬಂಧ ಸರ್ಕಾರದ ಮುಂದೆ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ತಮ್ಮ ಅಭ್ಯುದಯಕ್ಕಾಗಿ ಯೋಜನೆ ರೂಪಿಸಲು ಸರ್ಕಾರಕ್ಕೆ ಸೂಚನೆ ನೀಡುವಂತೆ ರಾಷ್ಟ್ರಪತಿ ಅವರಿಗೂ ಮನವಿ ಸಲ್ಲಿಸಿದ್ದಾರೆ. ಇದೀಗ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಮುಖಾಂತರ ಪ್ರಯತ್ನ ಮುಂದುವರಿಸಿದ್ದು, ತಮ್ಮ ಹೋರಾಟಕ್ಕೆ ಜಯ ಸಿಗುವ ವಿಶ್ವಾಸದಲ್ಲಿದ್ದಾರೆ.

ಕೊಡವ ಭಾಷಿಕ ಮೂಲ ನಿವಾಸಿಗಳಲ್ಲಿ ಸುಮಾರು ೨೦ ಸಮುದಾಯಗಳನ್ನು ಗುರುತಿಸಲಾಗಿದೆ. ಇದಕ್ಕೂ ಹೆಚ್ಚು ಸಮುದಾಯಗಳು ಮೊದಲು ಇದ್ದವೆಂದು ಹೇಳಲಾಗುತ್ತಿದ್ದು, ಕಾಲಕ್ರಮೇಣ ಹಲವು ಕಾರಣಗಳಿಂದ ನಶಿಸಿಹೋಗಿವೆ. ಈ ಸಮುದಾಯಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿ ವರ್ಗಕ್ಕೆ ಸೇರಿವೆ. ಕೊಡವ ಭಾಷಿಕ ಸಮುದಾಯದವರು ಅನಾದಿ ಕಾಲದಿಂದಲೂ ಪ್ರಕೃತಿಯ ಜತೆ ಅವಿನಾಭಾವ ಸಂಬಂಧ ಇಟ್ಟುಕೊಂಡವರಾಗಿದ್ದಾರೆ. ಕೊಡಗನ್ನಾಳಿದ ರಾಜರು, ಬ್ರಿಟಿಷರು ಜಮ್ಮಾ, ಉಂಬಳಿ ಜಾಗ ಕೊಟ್ಟು ಬೆಂಬಲವಾಗಿ ನಿಂತರೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಜೀವನ ಮಟ್ಟದಲ್ಲಿ ಸುಧಾರಣೆ ಕಂಡುಬಂದಿಲ್ಲ.

ಈ ಸಮುದಾಯಗಳು ಕೊಡಗಿನಲ್ಲಿ ವಿಶಿಷ್ಟ ಸಂಸ್ಕೃತಿ ಜತೆಗೆ ಆಚಾರ, ವಿಚಾರ, ಪದ್ಧತಿ, ಪರಂಪರೆ ಹಾಗೂ ಸಂಪ್ರದಾಯಗಳನ್ನು ಮೈಗೂಡಿಸಿಕೊಂಡು ಬರುತ್ತಿವೆ. ಜನಪದ ಸೊಗಡಿನೊಂದಿಗೆ ಇಂದಿಗೂ ಪೂರ್ವಿಕರ ಬಳುವಳಿಯನ್ನು ಉಳಿಸಿ, ಬೆಳೆಸಿಕೊಂಡು ಮನ್ನಡೆಸಲಾಗುತ್ತಿದೆ. ಆದರೆ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ. ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಿಕೊಡುತ್ತಿಲ್ಲ ಎನ್ನುವ ನೋವು ಈ ಸಮುದಾಯದವರನ್ನು ಕಾಡುತ್ತಿದೆ. ಸರ್ಕಾರಗಳು, ಜನಪ್ರತಿನಿಧಿಗಳ ಮುಂದೆ ಅಂಗಾಲಾಚಿದರೂ ಪ್ರಯೋಜನ ಶೂನ್ಯ ಎನ್ನುವ ಹತಾಶೆ ಇವರಲ್ಲಿದೆ.
೧೯೭೪, ೭೫ರ ಅವಧಿಯಲ್ಲಿ ಅಂದಿನ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಎಲ್.ಜಿ. ಹಾವನೂರು ಸರ್ಕಾರಕ್ಕೆ ಕೊಟ್ಟ ವರದಿಯಲ್ಲಿ ಕೊಡವ ಭಾಷಿಕ ಮೂಲ ನಿವಾಸಿಗಳ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಆದರೆ ನಂತರ ಬಂದ ಯಾವುದೇ ಆಯೋಗಗಳಿಂದ ಕೊಡವ ಭಾಷಿಕ ಸಮುದಾಯದವರಿಗೆ ನ್ಯಾಯ ಒದಗಿಸುವ ಕೆಲಸ ಆಗಿರಲಿಲ್ಲ. ದೇವರಾಜು ಅರಸು ನಿಗಮ ಸೇರಿದಂತೆ ವಿವಿಧ ನಿಗಮ ಮಂಡಳಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿ ವರ್ಗಕ್ಕೆ ಅನುಕೂಲವಾಗುವ ಯೋಜನೆಗಳಿದ್ದರೂ ಅವುಗಳು ಬೇರೆ ಬೇರೆ ಸಮುದಾಯಗಳ ಮಧ್ಯೆ ಹಂಚಿಹೋಗುವುದರಿಂದ ಕೊಡವ ಭಾಷಿಕ ಮೂಲ ನಿವಾಸಿಗಳಿಗೆ ನಿರೀಕ್ಷಿತ ಪ್ರಯೋಜನ ಆಗುತ್ತಿಲ್ಲ.
ಕೊಡಗಿನಲ್ಲಿ ವಿಶಿಷ್ಟ ಸಂಸ್ಕೃತಿ ಹೊಂದಿರುವ, ಕೊಡವ ಭಾಷೆ ಮಾತನಾಡುವ ಮೂಲನಿವಾಸಿ ೨೦ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿ ಆಗಬೇಕಾದರೆ ಪ್ರತ್ಯೇಕ ’ಕೊಡವ ಭಾಷಿಕ ಸಮುದಾಯಗಳ ಅಭಿವೃದ್ಧಿ ನಿಗಮ’ ಸ್ಥಾಪಿಸಬೇಕು ಎನ್ನುವುದು ಇವರುಗಳ ಒತ್ತಾಸೆ. ಹಾಗಾಗಿ ಈ ಸಂಬಂಧದ ಬೇಡಿಕೆಯನ್ನು ಹಿಂದಿನಿಂದಲೂ ಸರ್ಕಾರಗಳು, ಜನಪ್ರತಿನಿಧಿಗಳ ಮುಂದೆ ಇಡುತ್ತಲೇ ಬರಲಾಗುತ್ತಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಂದಿನ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಮುಖಾಂತರವೂ ಪ್ರಯತ್ನ ನಡೆಸಲಾಗಿತ್ತು. ಈ ಹಿಂದಿನ ಬಜೆಟ್‌ನಲ್ಲಿ ’ಕೊಡವ ಭಾಷಿಕ ಸಮುದಾಯಗಳ ಅಭಿವೃದ್ಧಿ ನಿಗಮ’ ಸ್ಥಾಪನೆಯ ನಿರೀಕ್ಷೆ ಇತ್ತಾದರೂ ಅದು ಹುಸಿಯಾಗಿತ್ತು.

ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲಿ ಒಕ್ಕೂಟದ ಪ್ರತಿನಿಧಿಗಳ ಭೇಟಿ ವೇಳೆ ’ಕೊಡವ ಭಾಷಿಕ ಸಮುದಾಯಗಳ ಅಭಿವೃದ್ಧಿ ನಿಗಮ’ ಸ್ಥಾಪನೆ ಅಗತ್ಯತೆಯನ್ನು ಪ್ರತಿಪಾದಿಸಲಾಗಿತ್ತು. ಈ ಸಂದರ್ಭ ಸಿದ್ದರಾಮಯ್ಯ ಪೂರಕವಾಗಿ ಸ್ಪಂದಿಸಿದ್ದರು. ಇದೀಗ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಭೇಟಿ ಮಾಡಿ ಸಿದ್ದರಾಮಯ್ಯ ಅವರಿಗೆ ಕೊಟ್ಟಿದ್ದ ಮನವಿ ಮತ್ತು ಸರ್ಕಾರಕ್ಕೆ ಅವರು ಕೊಟ್ಟಿದ್ದ ಶಿಫಾರಸ್ಸು ಪತ್ರದ ಬಗ್ಗೆ ಗಮನ ಸೆಳೆಯಲಾಗಿದೆ. ಅಭಿವೃದ್ಧಿ ನಿಗಮ ಮತ್ತು ಅಗತ್ಯವಿರುವ ಜಾಗದ ಕುರಿತು ಮನವರಿಕೆಯನ್ನೂ ಮಾಡಲಾಗಿದೆ. ಪೊನ್ನಣ್ಣ ಅವರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದ್ದು, ಸಿದ್ದರಾಮಯ್ಯ ಜು. ೭ಕ್ಕೆ ಮಂಡಿಸಲಿರುವ ಬಜೆಟ್ ಮೇಲೆ ಕೊಡವ ಭಾಷಿಕ ಸಮುದಾಯಗಳ ಒಕ್ಕೂಟ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದೆ

ಈ ಹಿಂದೆ ಯಾವುದೇ ಸರ್ಕಾರ ಅಧಿಕಾರದಲ್ಲಿ ಇದ್ದರೂ ಕೊಡಗಿನ ಸರ್ವತೋಮುಖ ಅಭಿವೃದ್ಧಿಗೆ ಅಲ್ಪ ಪ್ರಮಾಣದಲ್ಲಿ ಸ್ಪಂದಿಸಿದೆ. ಆದರೆ ಹಿಂದುಳಿದ ವರ್ಗದ ಮೂಲ ನಿವಾಸಿಗಳ ಏಳಿಗೆಗೆ ಗಮನ ಹರಿಸಿದ ಉದಾಹರಣೆಗಳು ವಿರಳ. ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ನಮ್ಮ ಬೇಡಿಕೆಯನ್ನು ಅವರ ಗಮನಕ್ಕೆ ತಂದಿದ್ದೆವು. ಅವರು ಪೂರಕವಾಗಿ ಸ್ಪಂದಿಸಿದ್ದರು. ಈಗ ಸಿದ್ದರಾಮಯ್ಯ ಅವರೇ ಪೂರ್ಣ ಬಹುಮತದ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದಾರೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಗತಿ ಕಾಣದ ಮೂಲನಿವಾಸಿ ಕೊಡವ ಭಾಷಿಕ ಸಮುದಾಯಗಳ ಬಹುನಿರೀಕ್ಷಿತ ಬೇಡಿಕೆ ಇನ್ನಾದರೂ ಈಡೇರಿಸಲಿದ್ದಾರೆ ಎನ್ನುವ ಬಲವಾದ ನಂಬಿಕೆ ಮತ್ತು ವಿಶ್ವಾಸದಿಂದ ಈ ಬಾರಿಯ ಬಜೆಟ್ ಎದುರು ನೋಡುತ್ತಿದ್ದೇವೆ.
ಡಾ. ಮೇಚೀರ ಸುಭಾಷ್ ನಾಣಯ್ಯ, ಅಧ್ಯಕ್ಷ, ಕೊಡವ ಭಾಷಿಕ ಸಮುದಾಯಗಳ ಒಕ್ಕೂಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net