

ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಫೆ.೨೭ ಹಾಗೂ ೨೮ ರಂದು ಅಮ್ಮತ್ತಿ ಕೊಡವ ಸಮಾಜದಲ್ಲಿ ಕೊಡವ ಬಲ್ಯನಮ್ಮೆಯನ್ನು ಆಯೋಜಿಸಲು ಸರ್ವ ಸದಸ್ಯರ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಕುರಿತು ಅಮ್ಮತ್ತಿ ಕೊಡವ ಸಮಾಜದ ಸಹಭಾಗಿತ್ವದಲ್ಲಿ ಅದ್ಧೂರಿಯ ಕೊಡವ ಬಲ್ಯ ನಮ್ಮೆಯನ್ನು ನಡೆಸಲು ಒಕ್ಕೊರಲಿನ ನಿರ್ಧರಿಸಲಾಯಿತು.
ಕೊಡವ ಬಲ್ಯ ನಮ್ಮೆಯ ಮೊದಲ ದಿನ ಸಾರ್ವತ್ರಿಕವಾಗಿ ಕೊಡವ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದ್ದು, ಈ ಪ್ರಯುಕ್ತ ಉಮ್ಮತಾಟ್, ಬೊಳಕಾಟ್, ಕೋಲಾಟ್, ಕತ್ತಿಯಾಟ್, ಕಪ್ಪೆಯಾಟ್, ದುಡಿಕೊಟ್ಟ್ ಪಾಟ್ (ದೇಶಕೆಟ್ಟ್ ಪಾಟ್ ಅಥವಾ ಕಾವೇರಿ ಪಾಟ್), ಪರೆಯಕಳಿ, ಸಮ್ಮಂಧ ಅಡ್‌ಕುವ, ವಾಲಗ ನುಡಿಸುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುವುದು. ಅಂತೆಯೇ ಸಾಹಿತ್ಯ ಪರ ಸ್ಪರ್ಧೆಗಳಾದ ಕವನ ಸ್ಪರ್ಧೆ, ಕೊಡವ ಪಾಟ್ ಸ್ಪರ್ಧೆ, ಕೊಡವ ಭಾಷಣ ಸ್ಪರ್ಧೆ ಏರ್ಪಡಿಸಲಾಗುವುದು ಎಂದು ವಿವರಿಸಿದರು.
ಕೊಡವ ವಸ್ತು ಪ್ರದರ್ಶನ ಹಾಗೂ ಪೈಪೋಟಿಗೆ ಅವಕಾಶವನ್ನು ಬಲ್ಯನಮ್ಮೆಯಲ್ಲಿ ಕಲ್ಪಿಸಲಾಗಿದೆ. ವಸ್ತು ಪ್ರದರ್ಶನ ನೀಡುವವರು ತಮ್ಮ ತಮ್ಮಲ್ಲಿರುವ ಪ್ರಾಚ್ಯ ಕೊಡವ ಬಳಕೆಯ ವಸ್ತುಗಳನ್ನು ಬಲ್ಯ ನಮ್ಮೆಯ ವೇಳೆ ಪ್ರದರ್ಶನಕ್ಕಿಡಲು ಅವಕಾಶವಿದ್ದು ಬಹುಮಾನ ನೀಡಲಾಗುವುದು. ಬಲ್ಯ ನಮ್ಮೆಯಲ್ಲಿ ವಿಶೇಷವೆಂಬಂತೆ ಪಾನಿಕೆಟ್ಟ್, ಕೋರೆಕೆಟ್ಟ್, ವಸ್ತ್ರಕೆಟ್ಟ್‌ಗಳ ಪೈಪೋಟಿಯಿದ್ದು ಆಸಕ್ತರು ಭಾಗವಹಿಸಬಹುದು ಎಂದು ತಿಳಿಸಿದ್ದಾರೆ.
ಸಾರ್ವತ್ರಿಕವಾಗಿ ಕೊಡವ ಸಂಸ್ಕೃತಿಯ ಬಗ್ಗೆ ವಿಶೇಷ ಪ್ರತಿಭೆಯುಳ್ಳವರಿಗೆ ಬಲ್ಯನಮ್ಮೆಯಲ್ಲಿ ತಮ್ಮ ತಮ್ಮ ಸಾಂಸ್ಕೃತಿಕ ಪ್ರತಿಭೆಗಳನ್ನು ಅನಾವರಣ ಮಾಡಲು ವೇದಿಕೆ ಕಲ್ಪಿಸಲಾಗುವುದು. ಅಂತಹವರು ತಮ್ಮ ಹೆಸರನ್ನು ವಿವರಗಳೊಂದಿಗೆ ಅಕಾಡೆಮಿ ಕಚೇರಿಗೆ ೮೭೬೨೯೪೨೯೭೬ ಮೂಲಕ ತ್ವರಿತವಾಗಿ ಹೆಸರು ನೋಂದಾಯಿಸುವಂತೆ ಅಜ್ಜಿನಿಕಂಡ ಮಹೇಶ್ ನಾಚಯ್ಯ ಹೇಳಿದರು.
ಬಲ್ಯನಮ್ಮೆಯ ಎರಡನೇ ದಿನ ಬೆಳಗ್ಗೆ ಅಮ್ಮತ್ತಿ ಪಟ್ಟಣದಲ್ಲಿ ಅದ್ಧೂರಿಯ ಕೊಡವ ಸಾಂಸ್ಕೃತಿಕ ಮೆರವಣಿಗೆಯನ್ನು ಏರ್ಪಡಿಸಲಾಗುವುದು. ಕರ್ನಾಟಕ-೫೦ರ ಸಂಭ್ರಮದ ಪ್ರಯುಕ್ತ ಕನ್ನಡ ಭುವನೇಶ್ವರಿಯ ಬಾವುಟವನ್ನು ಹಾರಿಸಿ ತದನಂತರ ಬಲ್ಯನಮ್ಮೆಗೆ ಚಾಲನೆ ನೀಡಲಾಗುತ್ತದೆ. ಮಧ್ಯಾಹ್ನದವರೆಗೆ ಹಿಂದಿನ ದಿನ ಪೈಪೋಟಿಯಲ್ಲಿ ವಿಜೇತರಾದ ತಂಡಗಳಲ್ಲಿ ಪ್ರಥಮ ಸ್ಥಾನ ಪಡೆದಿರುವವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮಧ್ಯಾಹ್ನದ ನಂತರ ನಡೆಯುವ ಕಾರ್ಯಕ್ರಮವು ಮಹತ್ವದಾಗಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು, ಜಿಲ್ಲೆಯ ಶಾಸಕರು, ಸಂಸದರುಗಳು ಆಗಮಿಸುವರು. ವೇದಿಕೆಯಲ್ಲಿ ೨೦೨೨-೨೩ ಹಾಗೂ ೨೦೨೩-೨೪ನೇ ಸಾಲಿನ ಗೌರವ ಪ್ರಶಸ್ತಿ, ಪುಸ್ತಕ ಪ್ರಶಸ್ತಿಗಳನ್ನು ಸಚಿವರಿಂದ ಪ್ರಧಾನ ಮಾಡಿಸಿ ಗೌರವಿಸಲಾಗುವುದು ಎಂದು ಕರ್ನಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸಿ.ಮಹೇಶ್ ನಾಚಯ್ಯ ತಿಳಿಸಿದರು.
ಅರ್ಹ ಕಲಾವಿದರುಗಳಿಗೆ ಹಾಗೂ ಐನ್‌ಮನೆ, ದೇವಸ್ಥಾನ, ಸಂಘ-ಸಂಸ್ಥೆ, ಸಮಾಜಗಳಿಗೆ ವಾದ್ಯ ಪರಿಕರಗಳನ್ನು ನೀಡಲಾಗುವುದು. ವೇದಿಕೆಗೆ ಕೊಡವ ಜನಾಂಗ ಹಾಗೂ ಭಾಷಿಕ ಜನಾಂಗದ ಮೇರು ವ್ಯಕ್ತಿಗಳನ್ನು ಆಹ್ವಾನಿಸಲಾಗುವುದು. ಬಲ್ಯನಮ್ಮೆಯ ಎರಡು ದಿನಗಳು ಊಟದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಅಕಾಡೆಮಿಯ ಸರ್ವ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಸದಸ್ಯರುಗಳಾದ ಪುತ್ತರಿರ ಪಪ್ಪು ತಿಮ್ಮಯ್ಯ, ಕಂಬೆಯಂಡ ಡೀನಾ ಬೋಜಣ್ಣ, ಮೊಳ್ಳೆಕುಟ್ಟಂಡ ದಿನು ಬೋಜಪ್ಪ, ಪೊನ್ನಿರ ಯು.ಗಗನ್, ಕುಡಿಯರ ಕಾವೇರಪ್ಪ, ನಾಯಂದಿರ ಆರ್.ಶಿವಾಜಿ, ನಾಯಕಂಡ ಬೇಬಿ ಚಿಣ್ಣಪ್ಪ, ಚೊಟ್ಟೆಯಂಡ ಎ.ಸಂಜು ಕಾವೇರಪ್ಪ, ನಾಪಂಡ ಸಿ.ಗಣೇಶ್, ರಿಜಿಸ್ಟ್ರಾರ್ ಚಿನ್ನಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಹಾಜರಿದ್ದರು.