ಕೊಡವ ಜಾತಿ, ಹಿಂದು ಧರ್ಮ ಎಂದು ದಾಖಲಿಸಲು ಮನವಿ

kodava
Published on

ಮಡಿಕೇರಿ:

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಡಿ ನಡೆಸಲಾಗುತ್ತಿರುವ ಜಾತಿ ಗಣತಿ ರಾಜ್ಯದಲ್ಲಿ ಹಿಂದು ಧರ್ಮ ಒಡೆಯಲು ನಡೆದಿರುವ ದೊಡ್ಡ ಷಡ್ಯಂತರವಾಗಿದ್ದು, ಕೊಡವ ಸಮುದಾಯದಲ್ಲಿ ಹಲವು ರೀತಿಯ ಗೊಂದಲಕ್ಕೆ ಕಾರಣವಾಗಿದೆ ಎಂದು ಎಂದು ನಾಪೋಕ್ಲು ಕೊಡವ ಸಮಾಜ ಮಾಜಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಆರೋಪಿಸಿದ್ದಾರೆ.

ಕೊಡರದ್ದು ಕೊಡವ ಭಾಷೆ, ಕೊಡವ ಜಾತಿ ಹಾಗೂ ಹಿಂದು ಧರ್ಮ. ಇದರಲ್ಲಿ ಯಾವುದೇ ಗೊಂದಲ ಬೇಡ. ಆದರೆ ಗಣತಿ ಸಂದರ್ಭ ತಪ್ಪು ಕಲ್ಪನೆ ಮೂಡುವಂತೆ ಮಾಡಲಾಗುತ್ತಿದೆ. ಕೊಡವ ಜನಾಂಗದ ಕೆಲವರು ಹಿಂದು ಧರ್ಮ ಬಿಟ್ಟು ಕೊಡವ ಧರ್ಮದಲ್ಲಿ ಗುರುತಿಸಿಕೊಳ್ಳಲು ಹೊರಟಿರುವುದು ವಿಷಾದನೀಯ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೊಡವರು ಹಿಂದೂ ಸಂಸ್ಕೃತಿ ಜತೆ ಸೇರಿಕೊಡಿದ್ದಾರೆ. ಆರಾಧನಾ ಪದ್ಧತಿಯೂ ಹಿಂದೂ ಧರ್ಮಕ್ಕೆ ಸೇರಿಕೊಂಡಿದೆ. ಕೊಡವರಲ್ಲಿ ನಾಗ, ಅಯ್ಯಪ್ಪ, ಭಗವತಿ, ಮಹದೇವನ ಆರಾಧನೆ ಇದೆ. ಭಗವತಿ ದೇವಾಲಯಗಳಲ್ಲಿ ಕೊಡವರೇ ತಕ್ಕರಾಗಿರುತ್ತಾರೆ. ಭಂಡಾರ ಕಾಯುವವರೂ ಕೊಡವರೇ ಆಗಿರುತ್ತಾರೆ. ತುಲಾ ಸಂಕ್ರಮಣವೂ ಹಿಂದು ಧರ್ಮದ ಸಂಪ್ರದಾಯದAತೆ ಆಚರಿಸಲಾಗುತ್ತದೆ. ಹುತ್ತರಿ ಆಚರಣೆಯೂ ಹಿಂದು ಧಾರ್ಮಿಕ ಪದ್ಧತಿಯಿಂದ ಕೂಡಿದೆ ಎಂದರು.

ಕೊಡವ ಸಮುದಾಯದ ಮುಖಂಡ ಮಾಚಿಮಾಡ ರವೀಂದ್ರ ಮಾತನಾಡಿ ರಾಮಾಯಣಕ್ಕೂ ಕೊಡವರಿಗೂ ಸಂಬAಧ ಇದೆ. ಕೊಡವರಿಗೂ ಹಿಂದೂ ಧರ್ಮಕ್ಕೂ 10 ಸಾವಿರ ವರ್ಷಗಳ ನಂಟಿದೆ. ಜಾತಿಗಳನ್ನು ಸಣ್ಣ ಸಣ್ಣ ಪಂಗಡ ಮಾಡಲು ಸರ್ಕಾರದ ಹುನ್ನಾರ ನಡೆಸಿದೆ. ಇಡೀ ರಾಜ್ಯದಲ್ಲಿ ಗೊಂದಲ ಏರ್ಪಟ್ಟಿದೆ. ಸಂವಿಧಾನದಲ್ಲಿ ಇರುವುದೇ 7 ಧರ್ಮ. ಸಮೀಕ್ಷೆ ಹೆಸರಿನಲ್ಲಿ ಕೊಡವರನ್ನು ಎತ್ತಿ ಕಟ್ಟುವ ಕೆಲಸ ನಡೆದಿದೆ. ಈ ಸಮೀಕ್ಷೆಯಿಂದ ಏನೂ ಪ್ರಯೋಜನ ಇಲ್ಲ. ಧರ್ಮದ ವಿಷಯದಲ್ಲಿ ಕೆಲವರಲ್ಲಿ ಗೊಂದಲ ಇದೆ ಅದನ್ನು ನಿವಾರಿಸಲು ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.

ಮಡಿಕೇರಿ ಕೊಡವ ಸಮಾಜ ಮಾಜಿ ಅಧ್ಯಕ್ಷ ಕೊಂಗAಡ ದೇವಯ್ಯ ಮಾತನಾಡಿ ಕೊಡವರದ್ದು ಸಾಮರಸ್ಯದ ಬದುಕು. ಆದರೆ ಜಾತಿ ಸಮೀಕ್ಷೆ ಹೆಸರಿನಲ್ಲಿ ಕೊಡವರನ್ನು ಒಡೆಯುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ದೇಶ ತಕ್ಕ ಬೊಳ್ಳೇರ ವಿನಯ್ ಅಪ್ಪಯ್ಯ ಮಾತನಾಡಿ ತಕ್ಕರ ಕೆಲಸ ಮನೆ ಕಟ್ಟುವುದು. ಮನೆ ಒಡೆಯುವುದಲ್ಲ. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಈ ಗೊಂದಲದ ಹಿಂದೆ ಎಡಪಂಥೀಯರ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ಅಖಿಲ ಕೊಡವ ಸಮಾಜ ಕಾರ್ಯದರ್ಶಿ ವಾಟೇರಿರ ಶಂಕರಿ ಪೊನ್ನಪ್ಪ, ಕೊಡವ ಸಮುದಾಯದ ಪ್ರಮುಖರಾದ ಎಂ.ಬಿ. ದೇವಯ್ಯ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net