ಪಿರಿಯಾಪಟ್ಟಣ: ಕೊಡಗು ಗೌಡ ಸಮುದಾಯದ ಬಗ್ಗೆ ಕೊಡವ ನ್ಯಾಷನಲ್ ಕೌನ್ಸಿಲ್ ಮುಖಂಡ ನಾಚಪ್ಪ ಅವಹೇಳಕಾರಿಯಾಗಿ ಮಾತನಾಡು ವುದನ್ನು ನಿಲ್ಲಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕೊಡಗು ಗೌಡ ಸಮಾಜ ಫೆಡರೇಷನ್ ನಿರ್ದೇಶಕ ಕುಯ್ಯುಮುಡಿ ಅಶ್ವಿನಿಕುಮಾರ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಕೊಡಗು ಜಿಲ್ಲೆ ಮರಗೋಡು ಗ್ರಾಮದ ಕಟ್ಟೆಮಾಡು ಶ್ರೀ ಮೃತ್ಯುಂಜಯ ಮಹದೇಶ್ವರ ದೇವಾಲಯದಲ್ಲಿ ಪೂಜೆ, ದರ್ಶನಕ್ಕೆ ಬರುವ ಯಾವುದೇ ಸಮುದಾಯದ ಭಕ್ತರು ಸರಳವಾದ ಉಡುಗೆಯಲ್ಲಿ ಬರಬೇಕೆಂದು ಟ್ರಸ್ಟ್ ಸೂಚಿಸಿದೆ. ಆದರೂ ಕೆಲ ಕೊಡವ ಸಮುದಾಯದವರು ಸಾಂಪ್ರದಾಯಿಕ ಉಡುಪು ಧರಿಸಿ ದೇವಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇದನ್ನು ಟ್ರಸ್ಟ್ ವಿರೋಧಿಸಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡವ ಮುಖಂಡ ನಾಚಪ್ಪ ಸಾಮಾಜಿಕ ಜಾಲತಾಣಗಳಲ್ಲಿ ಕೊಡಗು ಗೌಡ ಜನಾಂಗವನ್ನು ಕ್ಷುಲ್ಲಕವಾಗಿ ನಿಂದಿಸಿರುವುದು ಸಲ್ಲದು. ಅವರ ಹೇಳಿಕೆಗಳು, ಪೋಸ್ಟ್‌ಗಳು ಹೀಗೆಯೇ ಮುಂದುವರಿದರೆ ನಾಚಪ್ಪ ವಿರುದ್ಧ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಅಶ್ವಿನಿಕುಮಾರ್ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ತಾಲೂಕು ಕೊಡಗು ಗೌಡ ಸಮಾಜದ ಅಧ್ಯಕ್ಷ ವಸಂತ್‌ಕುಮಾರ, ಕಾರ್ಯದರ್ಶಿ ಪೂಜಾರಿ ರವಿ, ಹುಣಸೂರು ಕಾರ್ಯದರ್ಶಿ ನೆಲ್ಲಿಪುಣಿ ಮಂಜುನಾಥ, ಮುಖಂಡರಾದ ಕುಯ್ಯಮುಡಿ ಅಶ್ವಥ್‌ಕುಮಾತ ಮತ್ತಿತರರು ಹಾಜರಿದ್ದರು.