

ಮಡಿಕೇರಿ
ಮುಂಬರುವ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಕೊಡವರ ಬೇಡಿಕೆಗಳನ್ನೂ ತಮ್ಮ ಪ್ರಣಾಳಿಕೆಯಲ್ಲಿ ಪ್ರಕಟಿಸಬೇಕೆಂದು ಕೊಡವಾಮೆರ ಕೊಂಡಾಟ ಸಂಘಟನೆ ಆಗ್ರಹಿಸಿದೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಸಂಘಟನೆ ಅಧ್ಯಕ್ಷ ಚಾಮೇರ ದಿನೇಶ್, ಕೊಡವರು ಕೊಡಗಿನ ಆದಿ ಮೂಲ ನಿವಾಸಿ ಜನಾಂಗವಾಗಿದ್ದು, ಕೊಡಗಿನಲ್ಲಿ ಸುಮಾರು ಒಂದು ಲಕ್ಷ, ಮೈಸೂರು ಜಿಲ್ಲೆಯಲ್ಲಿ ಸುಮಾರು ೨೫೦೦೦, ಬೆಂಗಳೂರಿನಲ್ಲಿ ಸುಮಾರು ೬೦,೦೦೦ ಹಾಗೂ ರಾಜ್ಯದ ಇತರೆಡೆಗಳಲ್ಲಿ ಸರಿಸುಮಾರು ೪೦,೦೦೦ ಮತದಾರರನ್ನು ಹೊಂದಿದೆ. ಕೊಡವ ಜನಾಂಗಕ್ಕೆ ಇದುವರೆಗೆ ಯಾವುದೇ ರಾಜಕೀಯ ಪಕ್ಷವೂ ಸೂಕ್ತ ಮನ್ನಣೆ ನೀಡಿಲ್ಲ. ಮುಂಬರುವ ವಿಧಾನ ಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ನಮ್ಮ ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡುವ ರಾಜಕೀಯ ಪಕ್ಷವನ್ನು ಜನಾಂಗ ಬೆಂಬಲಿಸುವ ಯೋಚನೆ ಮಾಡಬೇಕಾಗಿದೆ ಎಂದಿದ್ದಾರೆ.
ಕೊಡವ ಭಾಷೆಯನ್ನು ಅಧಿಕೃತ ರಾಜ್ಯಭಾಷೆಯಾಗಿ ಘೋಷಿಸುವುದು, ಕೊಡವರನ್ನ ಆದಿ ಬುಡಕಟ್ಟು ಜನಾಂಗವೆಂದು ಅಧಿಕೃತಗೊಳಿಸಲು ಕೇಂದ್ರಕ್ಕೆ ಶಿಫಾರಸು ಮಾಡುವುದು, ಕೊಡವ, ಕಾರೋಣ ಕೋಟ, ಕೈಮಡ, ಐನ್ ಮನೆಗಳನ್ನು ವಿಶೇಷ ಸ್ಮಾರಕಗಳಂತೆ ರಕ್ಷಿಸಲು ಅನುದಾನ ನೀಡುವುದು, ತಲಕಾವೇರಿ, ಇಗ್ಗುತಪ್ಪ ದೇವಾಲಯಗಳನ್ನು ಮುಜರಾಯಿ ಇಲಾಖೆಯಿಂದ ಬಿಡಿಸಿ, ಮೂಲ ತಕ್ಕರಿಗೆ ತಕ್ಕಾಮೆ ನೀಡುವುದು. ದೇವಾಟ್ ಪರಂಬುವಿನಲ್ಲಿ ೫ ಏಕರೆ ಪ್ರದೇಶವನ್ನು ಸ್ಮಾರಕ ಮಾಡುವುದು, ಮೈಸೂರಿನಿಂದ ಕೊಡಗನ್ನು ಸಂಪರ್ಕಿಸುವ ಕುಶಾಲನಗರ ದ್ವಾರಕ್ಕೆ ಮಹಾನ್ ಪರಾಕ್ರಮಿ ಕುಲ್ಲೇಟಿರ ಪೊನ್ನಣ್ಣ, ಆನೆಚೌಕೂರು ದ್ವಾರಕ್ಕೆ ಪಂದ್ಯಂಡ ಬೆಳ್ಯಪ್ಪ ಹೆಬ್ಬಾಗಿಲು ಎಂದು ನಾಮಕರಣ ಮಾಡಿ ಮಹಾ ದ್ವಾರ ನಿರ್ಮಾಣ ಮಾಡುವುದು.. ಹೀಗೆ ಹಲವು ಬೇಡಿಕೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲು ಆಗ್ರಹಿಸಲಾಗಿದೆ.