

ವಿಟ್ಲ: ಕೋಡಪದವು ದ. ಕ. ಜಿಲ್ಲಾ ಪಂಚಾಯಿತಿ ಉನ್ನತೀಕರಿಸಿದ ಶಾಲೆಯಲ್ಲಿ ಆಹಾರ ಸಾಮಾಗ್ರಿಗಳ ದಾಸ್ತಾನು ತುಂಬಿರುವ ಕೊಠಡಿ ಹಾಗೂ ಮುಖ್ಯ ಶಿಕ್ಷಕರ ಕೊಠಡಿಯ ಬೀಗ ಮುರಿದು ಕಳವಿಗೆ ವಿಫಲ ಯತ್ನ ನಡೆಸಿದ್ದು ಸೋಮವಾರ ಬೆಳಕಿಗೆ ಬಂದಿದೆ.
ಶತಮಾನೋತ್ಸವದ ಹೊಸ್ತಿಲಲ್ಲಿ ಶಾಲೆಯ ಆಹಾರ ದಾಸ್ತಾನುಕೊಠಡಿಯ ಬಾಗಿಲಿನ ಬೀಗವನ್ನು ಆಯುಧಗಳನ್ನು ಬಳಸಿ ಮುರಿದಿದ್ದು, ಮುಖ್ಯ ಶಿಕ್ಷಕರ ಕೊಠಡಿಯ ಬೀಗ ಮುರಿಯುವ ಯತ್ನ ನಡೆಸಿದ್ದಾರೆ. ಮುಂದಿನ ತಿಂಗಳು ಉದ್ಘಾಟನೆಗೊಳ್ಳಲಿರುವ ದಾನಿಗಳು ನೀಡಿರುವ ಬೆಲೆಬಾಳುವ ವಸ್ತುಗಳು, ಟಿ.ವಿ., ಕಂಪ್ಯೂಟರ್ ಗಳಿದ್ದು ಕಳವಿಗೆ ಪ್ರಯತ್ನಿಸಿದ್ದಾರೆ. ಶನಿವಾರ ಸಾಯಂಕಾಲ ಶಾಲೆಗೆ ಬೀಗ ಹಾಕಿದ್ದು, ಸೋಮವಾರ ಬೆಳಗ್ಗೆ ಬೀಗ ತೆಗೆಯುವ ಸಮಯದಲ್ಲಿ ಶಾಲೆಯ ಮುಖ್ಯಶಿಕ್ಷಕಿ ಮೋಹಲತಾ ಅವರ ಕಳವಿನ ಪ್ರಯತ್ನದ ಬಗ್ಗೆ ಗಮನಕ್ಕೆ ಬಂದಿದೆ.
ಭಾನುವಾರ ಎಸ್. ಡಿ. ಎಂ. ಸಿ. ಅಧ್ಯಕ್ಷ ಉಮ್ಮರ್ ಪಾರೂಕ್ ಟೆಕ್ನಿಕ್ ಶಾಲೆಗೆ ಬೇಟಿ ನೀಡಿದ್ದು, ಈ ಸಂದರ್ಭದಲ್ಲಿ ಕಳ್ಳತನ ನಡೆದಿರಲಿಲ್ಲ. ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗಿನ ಜಾವದ ನಡುವೆ ಈ ಪ್ರಯತ್ನ ನಡೆದಿರಬಹುದೆಂಬ ಊಹಿಸಲಾಗಿದೆ. ಪಕ್ಕದ ದೇವಸ್ಥಾನದಲ್ಲಿ ರಾತ್ರಿ ಸಮಯ ಜನ ಸಂಚಾರ ಇರುವ ಕಾರಣ ಬೆಳಗ್ಗಿನ ಜಾವವೇ ಈ ಪ್ರಯತ್ನ ನಡೆದಿರಬಹುದೆನ್ನಲಾಗಿದೆ. ಈ ಸಂದರ್ಭ ಯಾವುದೇ ವಾಹನದ ಅಥವಾ ಇನ್ನಿತರ ಶಬ್ದ ಕೇಳಿ ಕಳ್ಳರು ಪರಾರಿಯಾಗಿರಬಹುದು ಎಂಬ ಸಂಶಯ ಮೂಡುತ್ತಿದೆ ಎಂದು ಶಾಲಾ ಎಸ್.ಡಿ.ಎಂ. ಸಿ. ಅದ್ಯಕ್ಷ ಉಮ್ಮರ್ ಪಾರೂಕ್ ಟೆಕ್ನಿಕ್ ಹೇಳಿದರು.
ವರ್ಷದ ಹಿಂದೆ ಕಾರು ಹಾಗೂ ಬೈಕ್ ನಲ್ಲಿ ಬಂದ ಕಳ್ಳರು ಗ್ಯಾಸ್ ಕಟ್ಟರ್ ಬಳಸಿ ಶಟ್ಟರ್ ತುಂಡರಿಸಿ ಕೋಡಪದವು ಸಹಕಾರಿ ಸಂಘದಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿತ್ತು. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ದಾಖಲೆಗಳಿದ್ದು, ಅದಕ್ಕೆ ಹಾನಿಯಾದರೆ ಅದನ್ನು ಮತ್ತೆ ಸಿದ್ದಪಡಿಸುವ ಕಾರ್ಯ ಬಹಳಷ್ಟು ಕಷ್ಟವಾಗಿತ್ತಿತ್ತು ಎನ್ನಲಾಗಿದೆ.
ಮುಖ್ಯ ಶಿಕ್ಷಕರು ನೀಡಿದ ಮಾಹಿತಿಯ ಹಿನ್ನಲೆಯಲ್ಲಿ ಎಸ್.ಡಿ.ಎಂ.ಸಿ ಅದ್ಯಕ್ಷರು 112 ವ್ಯವಸ್ಥೆಯ ಮೂಲಕ ಮಾಹಿತಿ ನೀಡಿದ್ದಾರೆ. ಸ್ಥಳೀಯ ಗ್ರಾ.ಪಂಚಾಯಿತಿ ಸದಸ್ಯ ಅರ್ಶದ್ ಕುಕ್ಕಿಲ, ಹಳೆ ವಿದ್ಯಾರ್ಥಿ ಸಂಘದ ಹಸೈನಾರ್ ತಾಳಿತ್ತನೂಜಿ, ಪಾರೂಕ್ ಬೊನ್ಯಕುಕ್ಕು, ಮುಖ್ಯ ಶಿಕ್ಷಕರಾದ ಮೋಹಲತಾ ಉಪಸ್ಥಿತರಿದ್ದರು.