

ಬೇಲೂರು : ತಾಲೂಕಿನ ಕಡೇಗರ್ಜೆ ಗ್ರಾಮದಲ್ಲಿರುವ ಉದ್ಭವ ಆದಿಶಕ್ತಿ ಶ್ರೀ ಕೆರೆ ಕೋಡಮ್ಮನವರ ಜಾತ್ರಾ ಮಹೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಅಮ್ಮನವರ ಮಹೋತ್ಸವದ ಅಂಗವಾಗಿ ಶನಿವಾರ ರುದ್ರಾಭಿಷೇಕ, ಪೂಜಾದಿಗಳು ಸಂಪನ್ನಗೊಂಡವು. ಬಳಿಕ ಮಹಾ ಮಂಗಳಾರತಿ ಜರುಗಿತು. ಎರಡನೇ ದಿನವಾದ ಭಾನುವಾರ ಬೆಳಗ್ಗೆ ಅಮ್ಮನವರಿಗೆ ಗಂಗಾ ಪೂಜೆ, ಮಹಾ ಮಂಗಳಾರತಿ, ಹಗಲು ಉತ್ಸವ ನೆರವೇರಿಸಲಾಯಿತು. ದೇವಸ್ಥಾನದ ವತಿಯಿಂದ ಹರಕೆ ಮುಡಿ ತೆಗೆಯವ ವ್ಯವಸ್ಥೆ ಹಾಗೂ ದೇವಿಗೆ ಕುಂಕುಮ ಮತ್ತು ಮಡಿಲಕ್ಕಿ ಅರ್ಪಿಸಲಾಯಿತು. ಹವಳಪ್ಪ ಸ್ವಾಮಿಯವರಿಗೆ ನೀರೋಕುಳಿ(ಕವಳ) ಆಯೋಜಿಸಲಾಗಿತ್ತು.
ಜಾತ್ರಾ ಮಹೋತ್ಸವದಲ್ಲಿ ಕೆರೆ ಕೋಡಮ್ಮ ದೇವಸ್ಥಾನ ಸೇವಾ ಸಮಿತಿ ಸದಸ್ಯರು, ಕಡೇಗರ್ಜೆ ಗ್ರಾಮಸ್ಥರು, ದೇವಿ ಮನೆತನದ ಕುಟುಂಬದವರು ಸೇರಿದಂತೆ ನೂರಾರು ಭಕ್ತರು ಆಗಮಿಸಿ ದೇವರಿಗೆ ಭಕ್ತಿ, ಭಾವ ಸಮರ್ಪಿಸಿದರು. ಎರಡೂ ದಿನ ಪ್ರಧಾನ ಅರ್ಚಕ ಎಚ್.ಆರ್ ಚಂದ್ರಶೇಖರ್ ಪೂಜಾ ವಿಧಿಗಳ ನೇತೃತ್ವ ವಹಿಸಿದರು.