ಬೆಳ್ತಂಗಡಿ: ಕುವೆಟ್ಟು ಗ್ರಾಮದ ಇತಿಹಾಸ ಪ್ರಸಿದ್ಧ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯಿ ದೈವಸ್ಥಾನದಲ್ಲಿ ಮುಂದಿನ ಫೆಬ್ರವರಿಯಲ್ಲಿ ನಡೆಯಲಿರುವ ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮದ ಪೂರ್ವಸಿದ್ಧತೆಗಳ ಬಗ್ಗೆ ಸಭೆ ಆಡಳಿತ ಮೊಕ್ತೇಸರ ಸುಖೇಶ್ ಕುಮಾರ್ ಕಡಂಬು ಅಧ್ಯಕ್ಷತೆಯಲ್ಲಿ ಅರಮಲೆ ಬೆಟ್ಟ ಕೊಡಮಣಿತ್ತಾಯಿ ದೈವಸ್ಥಾನದ ವಠಾರದಲ್ಲಿ ನಡೆಯಿತು.
ಕುಂಭಾಭಿಷೇಕ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ಕಾರ್ಯಧ್ಯಕ್ಷರಾಗಿ ಸುಮಂತ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿಯಾಗಿ ಪುರಂದರ ಶೆಟ್ಟಿ ಪಾಡ್ಯಾರು, ಕೋಶಾಧಿಕಾರಿಯಾಗಿ ಪ್ರದೀಪ್ ಶೆಟ್ಟಿ ಶಕ್ತಿನಗರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷ ಶಶಿಧರ ಶೆಟ್ಟಿ ಮಾತನಾಡಿ, ಅರಮಲೆಬೆಟ್ಟ ಕ್ಷೇತ್ರ ಬಹಳ ಕಾರಣಿಕ ಕ್ಷೇತ್ರವಾಗಿದ್ದು, ಗ್ರಾಮಸ್ಥರು ಎಲ್ಲರೂ ಒಟ್ಟಾಗಿ ಸೇರಿ ನಮ್ಮ ಗ್ರಾಮದ ದೈವಸ್ಥಾನದ ಬ್ರಹ್ಮ ಕುಂಭಾಭಿಷೇಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಗೋಪಾಲಕೃಷ್ಣ ತಂತ್ರಿ, ಜಯರಾಮ ಶೆಟ್ಟಿ ಪಡಂಗಡಿ, ಸಂಪತ್ ಸುವರ್ಣ, ಸುಮಂತ್ ಜೈನ್ ಶುಭ ಹಾರೈಸಿದರು. ಸೆ.18ರಂದು ಕ್ಷೇತ್ರದಲ್ಲಿ ಪ್ರಶ್ನಾಚಿಂತನೆಗಳು ನಡೆಯಲಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಧರಣೇಂದ್ರ ಜೈನ್ ನಿರೂಪಿಸಿದರು. ಪುರಂದರ ಶೆಟ್ಟಿ ವಂದಿಸಿದರು.