ಹುತಾತ್ಮ ಪೊಲೀಸರಿಗೆ ಗೌರವಪೂರ್ವಕ ನಮನ

ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಸಂಸ್ಮರಣಾ ದಿನಾಚರಣೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಗೌರವ ನಮನ ಸಲ್ಲಿಸಿದರು.
ಹುತಾತ್ಮ ಪೊಲೀಸರಿಗೆ ಗೌರವಪೂರ್ವಕ ನಮನ
Published on: 

ಮಡಿಕೇರಿ

ಕಾನೂನು ಸುವ್ಯವಸ್ಥೆ ಕಾಪಾಡುವುದು, ಪ್ರತಿಯೊಬ್ಬ ನಾಗರಿಕರಿಗೆ ಸಂವಿಧಾನ ಬದ್ಧವಾಗಿ ಇರುವ ಹಕ್ಕನ್ನು ರಕ್ಷಣೆ ಮಾಡುವುದು, ಅಪರಾಧ ಪ್ರಕರಣ ತಡೆಯುವುದು, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಆಗದಂತೆ ನೋಡಿಕೊಳ್ಳುವುದು ಪೊಲೀಸರ ಪ್ರಮುಖ ಮೂಲಭೂತ ಕರ್ತವ್ಯಗಳಲ್ಲಿ ಅತಿಮುಖ್ಯವಾಗಿವೆ ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಹೇಳಿದರು. ಜಿಲ್ಲಾ ಪೊಲೀಸ್ ಘಟಕ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ನಡೆದ ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಾಕೃತಿಕ ವಿಕೋಪ ಹಾಗೂ ಚುನಾವಣೆ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾತ್ರ ಪ್ರಮುಖವಾಗಿದ್ದು, ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಪೊಲೀಸ್ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ತಮ್ಮ ಅಮೂಲ್ಯ ಜೀವ ಕಳೆದುಕೊಂಡ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಮರಣೆಗಾಗಿ ಈ ದಿನವನ್ನು ಪೊಲೀಸ್ ಸಂಸ್ಮರಣಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಮಾತನಾಡಿ, ರಾಷ್ಟ್ರದಲ್ಲಿ ಪೊಲೀಸ್ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ 2025-26 ನೇ ಅವಧಿಯಲ್ಲಿ 154 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹುತಾತ್ಮರಾಗಿದ್ದಾರೆ, ಇವರಲ್ಲಿ ರಾಜ್ಯದ ಐವರು ಸೇರಿದ್ದಾರೆ ಎಂದು ಹುತಾತ್ಮ ಪೊಲೀಸರ ಹೆಸರು ಓದಿದರು. ರಾಷ್ಟ್ರದ ಆಂತರಿಕ ಭದ್ರತೆಯಲ್ಲಿ ಪೊಲೀಸರ ಸೇವೆ ಅನುಪಮವಾದುದು, ಶಾಂತಿ-ಸುರಕ್ಷತೆ ಕಾಪಾಡುವುದು ಹಾಗೂ ಸಮಾಜ ಘಾತುಕ ಶಕ್ತಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸರ ಪಾತ್ರ ಹೆಚ್ಚಿನದ್ದಾಗಿದೆ ಎಂದು ಇದೇ ವೇಳೆ ಹೇಳಿದರು.

ಪೊಲೀಸ್ ಹುತಾತ್ಮರ ದಿನದ ಕಾರ್ಯಕ್ರಮದಲ್ಲಿ ಪರೇಡ್‌ಡ್ ಕಮಾಂಡರ್ ಗಣೇಶ್ ಅವರು ಗೌರವ ವಂದನೆ ಸಲ್ಲಿಸಿ, ಮುಖ್ಯ ಅತಿಥಿಗಳಿಂದ ಅನುಮತಿ ಪಡೆದರು. ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಸೇರಿದಂತೆ ಗಣ್ಯರು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಚ ಸಮರ್ಪಿಸಿ, ಗೌರವ ನಮನ ಸಲ್ಲಿಸಿದರು.

ಹಾಸನ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ, ಉಪ ಪೊಲೀಸ್ ವರಿಷ್ಠಾಧಿಕಾರಿಗಳ ಪರವಾಗಿ ಚಂದ್ರಶೇಖರ, ಗೃಹ ರಕ್ಷಕ ದಳ ಪರವಾಗಿ ಸೂರಜ್, ನಗರಸಭೆ ಅಧ್ಯಕ್ಷೆ ಪಿ.ಕಲಾವತಿ, ವಕೀಲರ ಸಂಘದ ಅಧ್ಯಕ್ಷ ಸಿ.ಟಿ. ಜೋಸೆಫ್, ಪ್ರಮುಖರಾದ ಅಂಬೆಕಲ್ಲು ನವೀನ್, ಸಂತೋಷ, ದಿನೇಶ್, ಮಂಡುವAಡ ಮುತ್ತಪ್ಪ, ಸೂರ್ತಲೆ ಸೋಮಣ್ಣ, ಉಷಾ, ಚೆನ್ನಕೇಶವ, ಖತಿಜಾ, ಮಧುಚಂದ್ರ, ಶಶಿಕುಮಾರ, ಕಂದಮಣಿ ಮತ್ತಿತರರು ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಪುಷ್ಪಗುಚ್ಛವಿಟ್ಟು ಗೌರವಿಸಿದರು. ನಂತರ ಪೊಲೀಸ್ ಕವಾಯತು ತಂಡದವರು ಮೂರು ಸುತ್ತು ಕುಶಾಲತೋಪು ಹಾರಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಬ್ಯಾಂಡ್ ತಂಡದವರು ರಾಷ್ಟ್ರಗೀತೆ ನುಡಿಸಿದರು. ಬಳಿಕ ಎರಡು ನಿಮಿಷ ಮೌನಾಚರಿಸಲಾಯಿತು.

ಉಪ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಕುಮಾರ್, ಐ.ಪಿ. ಮೇದಪ್ಪ, ಅನೂಪ್ ಮಾದಪ್ಪ, ಜಿಲ್ಲೆಯ ಎಲ್ಲಾ ಹಂತದ ಪೊಲೀಸ್ ಅಧಿಕಾರಿಗಳು ಇದ್ದರು. ಪೊಲೀಸ್ ಮುಖ್ಯಪೇದೆ ಫಾರುಕ್, ಲೋಕೇಶ್ ಮತ್ತು ಸುಕನ್ಯಾ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net