ಸಂಸ್ಕೃತಿ, ಭಾಷೆ ಬೆಳವಣಿಗೆಗೆ ಕೈ ಜೋಡಿಸಿ

*ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಮನವಿ
ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ
71ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣವನ್ನು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎ.ಲೋಕೇಶ್ ಕುಮಾರ್ ನೇರವೇರಿಸಿದರು.
Published on: 

ಸುಂಟಿಕೊಪ್ಪ; ಕನ್ನಡ ಸಂಸ್ಕೃತಿ, ಭಾಷೆ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೈ ಜೋಡಿಸಬೇಕಿದೆ ಎಂದು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಹೇಳಿದರು.

ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ವೃತ್ತದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, 40 ವರ್ಷಗಳಿಂದ ಕಸಾಪ, ವಿವಿಧ ಸಂಘ ಸಂಸ್ಥೆಗಳು ಕನ್ನಡ ವೃತ್ತದಲ್ಲಿ ಆಚರಿಸಿಕೊಂಡು ಬರುತ್ತಿರುವ ರಾಜ್ಯೋತ್ಸವಕ್ಕೆ ಗ್ರಾಮ ಪಂಚಾಯಿತಿ ಕೈ ಜೋಡಿಸಿದರೆ ಈ ರಾಜ್ಯೋತ್ಸವಕ್ಕೆ ಇನ್ನಷ್ಟು ಮೆರಗು ಸಿಗಲಿದೆ ಎಂದರು.

ವಿದ್ಯಾರ್ಥಿನಿ ಶ್ರೀಶಾ ಮಾತನಾಡಿ, ನ್ಯಾಯಾಲಯ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಆದೇಶಗಳು, ವಿವಿಧ ಮಾಹಿತಿ ಪತ್ರಗಳು ಆಂಗ್ಲ ಭಾಷೆಗೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಕನ್ನಡ ಭಾಷೆ ಮಹತ್ವವವನ್ನು ಕಳೆದುಕೊಳ್ಳುತ್ತಿದೆ. ಹಾಗಾಗಿ ಎಲ್ಲ ಸರ್ಕಾರಿ ಇಲಾಖೆಗಳಲ್ಲೂ ಕನ್ನಡ ಭಾಷೆಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದರು.

ಹತ್ತನೇ ತರಗತಿಯಲ್ಲಿ ಕನ್ನಡ ವಿಷಯದಲ್ಲಿ 125 ಅಂಕಗಳಿಸಿದ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ರೋಜಾ ಹಾಗೂ ಸಂತಮೇರಿ ಆಂಗ್ಲ ಮಾಧ್ಯಮ ಶಾಲೆಯ ಹ್ಯಾರನ್ ಅವರಿಗೆ ಲಯನ್ಸ್ ಸಂಸ್ಥೆಯಿಂದ ನಗದು ಬಹುಮಾನ ನೀಡಲಾಯಿತು. 5 ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದರು.

ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಎಫ್.ಸಬಾಸ್ಸಿನ್, ಉದ್ಯಮಿ ಎಸ್.ಜಿ.ಶ್ರೀನಿವಾಸ್, ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷೆ ಲೀಲಾ ಮೇದಪ್ಪ, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಡಾ.ಯಶೋದರ ಪೂಜಾರಿ, ವಹೀದ್ ಜಾನ್, ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಗ್ಲೇನ್ ಮೇನೆಜೇಸ್, ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳಾದ ವಿಜಯಕುಮಾರ್,ನಿಕೇಶ್, ಶಶಾಂಕ್, ಮುಖ್ಯ ಶಿಕ್ಷಕ ಕುಮಾರ್, ಕೆ.ಪಿ.ಜಗನ್ನಾಥ್, ಡಿ.ನರಸಿಂಹ, ಬಿ.ಎಸ್.ಸದಾಶಿವ ರೈ, ಸುಂಟಿಕೊಪ್ಪ ಪೊಲೀಸ್ ಠಾಣೆಯ ಎಎಸ್‌ಐ ಮಧು, ಕೆ.ಎಸ್.ಅನಿಲ್ ಕಮಾರ್, ಸತೀಶ್ ಶೇಟ್ ಮತ್ತಿತರರು ಇದ್ದರು.