

ಗೋಣಿಕೊಪ್ಪ: ರಾಷ್ಟ್ರೀಯಮಟ್ಟದ ಬ್ಯಾಡ್ಮಿಂಟನ್ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಕೊಡಗಿನ ಪ್ರತಿಭಾವಂತ ಆಟಗಾರರಾದ ದಿಯಾ ಭೀಮಯ್ಯ ಮತ್ತು ವಿಶಾಲ್ ಉತ್ತಪ್ಪ ಆಯ್ಕೆಯಾಗಿದ್ದು, ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆ ತಂದಿದ್ದಾರೆ.
ಸಿಕ್ಕಿಂನ ಪಾಲ್ಜೋರ್ ಕ್ರೀಡಾಂಗಣದಲ್ಲಿ ನ.14ರಿಂದ 21ರವರೆಗೆ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧೀನದಲ್ಲಿ ನಡೆಯಲಿರುವ ಜೂನಿಯರ್ ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ 19 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಭಾರತದ ಅಗ್ರಗಣ್ಯ ಆಟಗಾರ್ತಿಯಾಗಿರುವ ದಿಯಾ ಭೀಮಯ್ಯ ಆಯ್ಕೆಯಾಗಿದ್ದಾರೆ.
ಇದಲ್ಲದೆ, ಡಿ.1ರಿಂದ 6ರವರೆಗೆ ನಡೆಯಲಿರುವ ಯೋನೆಕ್ಸ್ ಸನ್ರೈಸ್ ಗುವಾಹಟಿ ಮಾಸ್ಟರ್ಸ್-2026ರ ಬಿಡಬ್ಲ್ಯುಎಫ್ ಸೂಪರ್ 100 ಟೂರ್ನಿಯಲ್ಲಿ ಹಾಗೂ ಡಿ.17ರಿಂದ 24ರವರೆಗೆ ಭುವನೇಶ್ವರದ ದಾಲ್ಮಿಯಾ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ಹಿರಿಯರ ವಿಭಾಗದ ರಾಷ್ಟ್ರೀಯಮಟ್ಟದ ಪಂದ್ಯಾವಳಿಯಲ್ಲೂ ಭಾಗವಹಿಸಲು ದಿಯಾ ಅರ್ಹತೆ ಪಡೆದಿದ್ದಾರೆ.
ಪ್ರಸ್ತುತ ಮೈಸೂರಿನ ವಿದ್ಯಾಶ್ರಮ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ದಿಯಾ, ಅಸ್ಸಾಂನ ಗುವಾಹಟಿಯಲ್ಲಿರುವ ಭಾರತದ ಪ್ರತಿಷ್ಠಿತ ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್ನಲ್ಲಿ ಬ್ಯಾಡ್ಮಿಂಟನ್ ತರಬೇತಿ ಪಡೆಯುತ್ತಿದ್ದಾರೆ.
ಇನ್ನು 38ನೇ ಸಬ್ ಜೂನಿಯರ್ ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್-2026ರಲ್ಲಿ 15 ವಷರ್ದೊಳಗಿನ ಬಾಲಕರ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಉದಯೋನ್ಮುಖ ಆಟಗಾರ ವಿಶಾಲ್ ಉತ್ತಪ್ಪ ಆಯ್ಕೆಯಾಗಿದ್ದಾರೆ. ಸಬ್ ಜೂನಿಯರ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಮೂರನೇ ಶ್ರೇಯಾಂಕಿತ ಆಟಗಾರರಾಗಿರುವ ವಿಶಾಲ್, ಈ ವರ್ಷದ ವಿವಿಧ ರ್ಯಾಂಕಿಂಗ್ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ರಾಷ್ಟ್ರೀಯಮಟ್ಟದ ಸ್ಪರ್ಧೆಗೆ ಅರ್ಹತೆ ಗಳಿಸಿದ್ದಾರೆ.
ನ.30ರಿಂದ ಡಿ.5ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ವಿಶಾಲ್ ಪಾಲ್ಗೊಳ್ಳಲಿದ್ದಾರೆ. ಪ್ರಸ್ತುತ ಮೈಸೂರಿನ ಪ್ರಗತಿ ಎಲೈಟ್ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರು, ಹೈದರಾಬಾದ್ನ ಪ್ರತಿಷ್ಠಿತ ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಲ್ಲದೆ, ಮೈಸೂರಿನ ಸ್ಪೋರ್ಟ್ಸ್ ಪಾರ್ಕ್ ಅಕಾಡೆಮಿಯಲ್ಲಿ ಮೇದುರ ಅರುಣ್ ಪೆಮ್ಮಯ್ಯ ಅವರ ಮಾರ್ಗದರ್ಶನದಲ್ಲಿಯೂ ತರಬೇತಿ ಪಡೆದಿದ್ದಾರೆ.
ಬೊಪ್ಪಂಡ ಭೀಮಯ್ಯ ಮತ್ತು ಕುಸುಮಾ(ತಾಮನೆ ಕಂಬೀರಂಡ) ದಂಪತಿಯ ಮಕ್ಕಳಾದ ದಿಯಾ ಹಾಗೂ ವಿಶಾಲ್ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ನಿರಂತರ ಸಾಧನೆ ಮಾಡುತ್ತಿದ್ದು, ರಾಷ್ಟ್ರೀಯಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿರುವುದು ಕುಟುಂಬದವರು ಹಾಗೂ ಜಿಲ್ಲೆಯ ಕ್ರೀಡಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.