ಮುಂಬೈನ ಕೂರ್ಗ್ ಅಸೋಸಿಯೇಷನ್ ಕೈಲ್‌ಪೋದ್ ಸಂಭ್ರಮ

ಮುಂಬೈನ ಕೂರ್ಗ್ ಅಸೋಸಿಯೇಷನ್ ಕೈಲ್‌ಪೋದ್ ಸಂಭ್ರಮ
ಮುಂಬೈನ ಕೂರ್ಗ್ ಅಸೋಸಿಯೇಷನ್ ಸಂಸ್ಥೆಯ 105ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ನಡೆದ ಕೈಲ್‌ಪೋದ್ ಹಬ್ಬದಲ್ಲಿ ಮಹಿಳೆಯರು ಸಾಂಪ್ರದಾಯಿಕ ಉಡುಗೆ ಧರಿಸಿ ಸಂಭ್ರಮಿಸಿದರು.
Published on: 

ಮಡಿಕೇರಿ

ಮುಂಬೈನ ಕೂರ್ಗ್ ಅಸೋಸಿಯೇಷನ್ ಸಂಸ್ಥೆ ತನ್ನ 105ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಈಚೆಗೆ ಕೈಲ್‌ಪೋದ್ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಿತು. ಸಂಸ್ಥೆ 1921ರಲ್ಲಿ ಸ್ಥಾಪನೆಯಾಗಿದ್ದು, ಶತಮಾನಕ್ಕೂ ಹೆಚ್ಚು ಕಾಲದಿಂದ ಮುಂಬೈನಲ್ಲಿರುವ ಕೊಡಗಿನ ಜನರನ್ನು ಒಂದೇ ಸೂರಿನಡಿ ಜೋಡಿಸುವ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಸಂಘದ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಂಬೈವಾಸಿ ಕೊಡವರು ಪಾಲ್ಗೊಂಡು ಸಂಭ್ರಮಿಸಿದರು. ಸಾಂಪ್ರದಾಯಿಕ ಮದ್ ಕೂಳು ತಯಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ತೆಂಗಿನಕಾಯಿಗೆ ಗುರಿ ಇಡುವುದು ಸೇರಿದಂತೆ ವಿವಿಧ ಸಾಂಪ್ರದಾಯಿಕ ಕ್ರೀಡೆಗಳು ನಡದವು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕೊಡಗಿನ ಖ್ಯಾತ ಖಾದ್ಯಗಳಾದ ಪಂದಿ ಕರಿ, ಕಡಂಬುಟ್ಟು ವ್ಯವಸ್ಥೆ ಮಾಡಲಾಗಿತ್ತು. ಈ ಖಾದ್ಯಗಳನ್ನು ಸಂಘದ ಸದಸ್ಯರೇ ಹಿಂದಿನ ದಿನ ಒಟ್ಟಾಗಿ ಸೇರಿ ತಯಾರಿಸಿದ್ದು ವಿಶೇಷವಾಗಿತ್ತು.

ಸಂಜೆ ವೇಳೆಗೆ ಕೊಡವ ಸಾಂಪ್ರದಾಯಿಕ ಸಂಗೀತ ಮತ್ತು ಜಾನಪದ ನೃತ್ಯಗಳನ್ನು ಏರ್ಪಡಿಸಲಾಗಿತ್ತು. ಹಳೆಯ ಮುಖಗಳ ಜತೆಗೆ ಮಾಧ್ಯಮ, ಮಾಹಿತಿ ತಂತ್ರಜ್ಞಾನ, ಚಲನಚಿತ್ರ, ಜಾಹೀರಾತು, ಶಿಕ್ಷಣ ಮತ್ತು ಬ್ಯಾಂಕಿAಗ್ ರಂಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವ ಕೊಡವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಕೊಡಗಿನ ಮೂಲದ ಕೊಡವೇತರ ಕೊಡವ ನಿವಾಸಿಗಳನ್ನು ಪ್ರೀತಿಯಿಂದ ಸ್ವಾಗತಿಸುವ ಮೂಲಕ ಕೂರ್ಗ್ ಅಸೋಸಿಯೇಷನ್ ತನ್ನ ವಿಶಾಲ ಮನೋಭಾವ ಹಾಗೂ ಹುಟ್ಟೂರಿನ ಮೇಲಿನ ಪ್ರೀತಿಯನ್ನು ಎತ್ತಿಹಿಡಿಯಿತು. ಮುಂಬೈನAತಹ ಮಹಾನಗರದಲ್ಲಿ ವಾಸಿಸುತ್ತಿರುವ ಕೊಡಗಿನ ಜನರಿಗೆ ತಮ್ಮ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಮಾಡಿಕೊಳ್ಳಲು ಮತ್ತು ಪರಸ್ಪರ ಭೇಟಿಯಾಗಲು ಈ ಹಬ್ಬ ಉತ್ತಮ ವೇದಿಕೆಯಾಯಿತು. 105ನೇ ವರ್ಷದ ಸವಿನೆನಪಿನಲ್ಲಿರುವ ಅಸೋಸಿಯೇಷನ್, ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸಿರುವ ಇನ್ನಷ್ಟು ಕೊಡವರು ಹಾಗೂ ಕೊಡಗಿನ ನಿವಾಸಿಗಳು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಆಹ್ವಾನ ನೀಡಿದೆ. ಬರುವ ತಿಂಗಳುಗಳಲ್ಲಿ ಸಂಘದ ಮುಂದಿನ ಪ್ರಮುಖ ಸಾಂಸ್ಕೃತಿಕ ಹಬ್ಬವಾದ ಪುತ್ತರಿಯನ್ನು ವಿಜೃಂಭಣೆಯಿAದ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net