

ಮಡಿಕೇರಿ
2030ರ ವೇಳೆಗೆ ದೇಶದಲ್ಲಿ ಮಲೇರಿಯಾ ರೋಗ ಪ್ರಕರಣಗಳನ್ನು ಸಂಪೂರ್ಣವಾಗಿ ಕೊನೆಗಾಣಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಇದರ ಭಾಗವಾಗಿ ಕೇಂದ್ರ ತನಿಖಾ ತಂಡ ಕೊಡಗು ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಜಿಲ್ಲೆಯ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ರೋಗ ಪ್ರಕರಣಗಳ ಚಿಕಿತ್ಸೆ ಅನುಸರಣೆ ಹಾಗೂ ದಾಖಲಾತಿ ನಿರ್ವಹಣೆಯನ್ನು ಪರಿಶೀಲಿಸಿದ ತಂಡ, ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೆ.ಎಂ. ಸತೀಶ್ ಕುಮಾರ್ ತಿಳಿಸಿದ್ದಾರೆ.
ಕಳೆದ 3 ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿದ್ದ ಸಬ್ ನ್ಯಾಷನಲ್ ಮಲೇರಿಯಾ ಎಲಿಮಿನೇಷನ್ ವ್ಯಾಲಿಡೇಶನ್ ರಾಷ್ಟ್ರೀಯ ತಂಡ ಸೋಮವಾರಪೇಟೆ ತಾಲೂಕು ಆಸ್ಪತ್ರೆ, ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರ, ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ, ಸುಂಟಿಕೊಪ್ಪ ಉಪಕೇಂದ್ರ ಹಾಗೂ ಮಡಿಕೇರಿ ತಾಲೂಕಿನ ನಗರ ಆರೋಗ್ಯ ಕೇಂದ್ರ ಮತ್ತು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿತು. ಈ ವೇಳೆ ಮಲೇರಿಯಾ ಮುಕ್ತಗೊಳಿಸಲು ಕಳೆದ 5 ವರ್ಷಗಳಿಂದ ಅನುಸರಿಸಿಕೊಂಡು ಬರಲಾಗಿರುವ ದಾಖಲಾತಿ ನಿರ್ವಹಣೆ ಮತ್ತು ರೋಗಿಗಳ ಚಿಕಿತ್ಸಾ ವಿಧಾನಗಳನ್ನು ಆಳವಾಗಿ ಪರಿಶೀಲಿಸಲಾಯಿತು.
ದೆಹಲಿಯ ಡಾ. ಕಲ್ಪನಾ ಬರುವ ನೇತೃತ್ವದ ಈ ಕೇಂದ್ರ ತಂಡದಲ್ಲಿ ಡಾ. ಆರ್. ತೇನಾಂಬಿಗೈ, ಡಾ. ಬಿಜೀತ್ ಬಿಸ್ವಾ ಹಾಗೂ ಡಾ. ಶ್ಯಾಮ್ ಬಂದು ರಾತ್ ಇದ್ದರು. ಪರಿಶೀಲನೆ ವೇಳೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಬಿ.ಎಲ್. ಶ್ರೀನಿವಾಸ್, ಸೋಮವಾರಪೇಟೆ ತಾಲೂಕು ಆರೋಗ್ಯ ಅಧಿಕಾರಿ ಡಾ. ಇಂದೂಧರ್, ಮಡಿಕೇರಿ ತಾಲೂಕು ಆರೋಗ್ಯ ಅಧಿಕಾರಿ ಡಾ. ಸುನಿಲ್, ಜಿಲ್ಲಾ ಎಂಟಮಾಲಜಿಸ್ಟ್ ಮಂಜುನಾಥ್, ಜಿಲ್ಲಾ ಎನ್‌ವಿಬಿಸಿಪಿ ತಂಡ, ವಿವಿಧ ಆರೋಗ್ಯ ಸಂಸ್ಥೆಗಳ ಅಧಿಕಾರಿಗಳು, ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಮಲೇರಿಯಾ ನಿಯಂತ್ರಣ ಮತ್ತು ದಾಖಲಾತಿ ನಿರ್ವಹಣೆ ಉತ್ತಮವಾಗಿ ಮೂಡಿಬಂದಿದ್ದು, ಕೆಲವು ಸಣ್ಣಪುಟ್ಟ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವಂತೆ ತಂಡವು ಸೂಕ್ತ ಸಲಹೆ-ಸೂಚನೆ ನೀಡಿತು. ಕಾರ್ಯಕ್ರಮದ ಕೊನೆಯಲ್ಲಿ ಕೇಂದ್ರ ಪರಿಶೀಲನಾ ತಂಡದ ಸದಸ್ಯರನ್ನು ಜಿಲ್ಲಾ ಸರ್ವೇಕ್ಷಣಾ ಘಟಕದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.