

ವಿರಾಜಪೇಟೆ: ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಮದ್ಯದಲ್ಲಿ ವಿಷ ಬೆರೆಸಿ ವ್ಯಕ್ತಿಯನ್ನು ಕೊಲೆ ಮಾಡಿದ್ದ ಮೂವರು ಆರೋಪಿಗಳನ್ನು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಸತೀಶ್ ಕೆ.ಜಿ.ಬೋಪಯ್ಯ(19), ಎಚ್.ಬಿ.ರವಿ (61), ಕೆ.ಎಂ.ಪೊನ್ನಪ್ಪ (43) ಬಂಧಿತ ಆರೋಪಿಗಳು.
ವಿವಿಧ ಕಡೆಗಳಲ್ಲಿ ತೋಟದ ರೈಟರ್ ಅಗಿದ್ದ ಕೆದಮುಳ್ಳೂರು ಪಾಲಂಗಾಲ ಗ್ರಾಮದ ನಿವಾಸಿ ಕೆ.ಪಿ.ಪೊನ್ನಪ್ಪ (41) ಕೊಲೆಯಾದ ವ್ಯಕ್ತಿ.
ಅ.21ರ ರಾತ್ರಿ ಕುಡಿಯರ ಸೋಮಯ್ಯ ಎಂಬುವರ ಕಾರಿನಲ್ಲಿ ಕೆ.ಪಿ.ಪೊನ್ನಪ್ಪ ಕಡಂಗ ಗ್ರಾಮಕ್ಕೆ ಆಗಮಿಸುತ್ತಾರೆ. ಈ ವೇಳೆ ಬಂಧಿತ ಮೂವರು ಆರೋಪಿಗಳೊಂದಿಗೆ ಬಾರ್ನಲ್ಲಿ ಮದ್ಯ ಸೇವಿಸಿದ್ದಾರೆ. ಈ ಮೊದಲೇ ಸಂಚು ರೂಪಿಸಿ ಮದ್ಯದಲ್ಲಿ ವಿಷ ಬೆರೆಸಿ ಆರೋಪಿಗಳು ಕೆ.ಪಿ.ಪೊನ್ನಪ್ಪಗೆ ಅರಿವಿಗೆ ಬಾರದಂತೆ ಕುಡಿಸಿ ಸಾಯಿಸಿದ್ದಾರೆ. ನಂತರ ಮೃತದೇಹವನ್ನು ಮಕ್ಕಿ ಅರಣ್ಯ ಪ್ರದೇಶದಲ್ಲಿ ಹೂತು ಹಾಕಿದ್ದಾರೆ.
ಈ ಮಧ್ಯೆ ಕೆ.ಪಿ.ಪೊನ್ನಪ್ಪ ಕಾಣೆಯಾಗಿದ್ದಾರೆ ಎಂದು ತಾಯಿ ರೇಣು ಅ.26ರಂದು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಮೊದಲು ಸೋಮಯ್ಯ ಎಂಬುವರನ್ನು ವಿಚಾರಣೆ ಕರೆದಿದ್ದಾರೆ. ಇದರಿಂದ ವಿಚಾರಣೆಗೆ ಅಂಜಿ ಸೋಮಯ್ಯ ಕೂಡ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದರಿಂದ ಅನುಮಾನಗೊಂಡ ಪೊಲೀಸರು ಸೋಮಯ್ಯ ಅವರ ಎರಡು ಮೊಬೈಲ್ ಪರಿಶೀಲಿಸಿದ್ದಾರೆ. ಅ.29ರಂದು ಪೊಲೀಸರಿಗೆ ಮಕ್ಕಿ ಅರಣ್ಯ ಪ್ರದೇಶದಲ್ಲಿ ಮಣ್ಣಿನಡಿ ಮೃತದೇಹ ಸಿಲುಕಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಬರುತ್ತದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಕೆ.ಪಿ.ಪೊನ್ನಪ್ಪ ಶವ ಎಂದು ದೃಢವಾಗುತ್ತದೆ. ತನಿಖೆ ತೀವ್ರಗೊಳಿಸಿ ಆರೋಪಿಗಳಾದ ಸತೀಶ್, ರವಿ ಮತ್ತು ಕೆ.ಎಂ.ಪೊನ್ನಪ್ಪರನ್ನು ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ವಿರಾಜಪೇಟೆ ಉಪವಿಭಾಗ ಪ್ರಭಾರ ಡಿವೈಎಸ್ಪಿ ಸೂರಜ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆಯ ಪಿಎಸ್ಐ ಪ್ರಮೋದ್, ಸಿಬ್ಬಂದಿ ಎಎಸ್ಐ ಮೋಹನ್, ಎಎಸ್ಐ ರವಿ, ನವೀನ್ ಕುಮಾರ್, ಅಬ್ದುಲ್ ಮಜೀದ್, ಕೆ.ಎ.ಅನೀಫ್, ಎಂ.ಎಸ್.ಬೋಪಣ್ಣ, ಎಸ್.ಮಹೇಶ್, ಪರಮೇಶ್, ಮತ್ತು ತೇಜಸ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.