ಬಾಳೆಲೆ ವ್ಯಾಪ್ತಿಯಲ್ಲಿ ಅಕ್ರಮ ವಲಸಿಗರು ಪತ್ತೆ

ಬಾಳೆಲೆ ವ್ಯಾಪ್ತಿಯಲ್ಲಿ ಅಕ್ರಮ ವಲಸಿಗರು ಪತ್ತೆ
ಅಕ್ರಮ ಬಾಂಗ್ಲಾ ವಲಸಿಗರು ಬಳಸುತ್ತಿದ್ದ ಬೆಂಗಳೂರು ನೋಂದಣಿಯ ದ್ವಿಚಕ್ರ ವಾಹನ
Published on: 

ಗೋಣಿಕೊಪ್ಪಲು

ಅಕ್ರಮವಾಗಿ ಬಾಂಗ್ಲಾದೇಶದಿAದ ವಲಸೆ ಬಂದಿದ್ದ ನಾಲ್ವರು ಕಾರ್ಮಿಕರನ್ನು ಹಿಂದೂ ಜಾಗರಣ ವೇದಿಕೆ ಹಾಗೂ ಆಟೋ ಚಾಲಕರ ಸಂಘದ ಕಾರ್ಯಕರ್ತರು ಪತ್ತೆ ಹಚ್ಚಿ, ಪೊನ್ನಂಪೇಟೆ ಪೊಲೀಸರಿಗೆ ಒಪ್ಪಿಸಿರುವ ಘಟನೆ ದಕ್ಷಿಣ ಕೊಡಗಿನ ಬಾಳೆಲೆ ವ್ಯಾಪ್ತಿಯಲ್ಲಿ ನಡೆದಿದೆ. ಪೊನ್ನಂಪೇಟೆ ತಾಲೂಕು ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟಿಗೇರಿ ಗ್ರಾಮದ ಕಾಫಿ ತೋಟವೊಂದರಲ್ಲಿ ಕಾರ್ಮಿಕರಾಗಿ ಈ ನಾಲ್ವರು ಕೆಲಸ ಮಾಡುತ್ತಿದ್ದರು. ಗಂಡ, ಹೆಂಡತಿ ಹಾಗೂ ಇಬ್ಬರು ಮಕ್ಕಳಿರುವ ಈ ಕುಟುಂಬ ಪಶ್ಚಿಮ ಬಂಗಾಳದ ದಲ್ಲಾಳಿ ಮೂಲಕ ಭಾರತಕ್ಕೆ ಪ್ರವೇಶಿಸಿರುವುದಾಗಿ ವಲಸಿಗರೇ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಇವರ ಬಳಿ ಬೆಂಗಳೂರು ನೋಂದಣಿಯ ದ್ವಿಚಕ್ರ ವಾಹನವೊಂದು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿದ ಹಿಂದೂ ಜಾಗರಣ ವೇದಿಕೆ ಮತ್ತು ಆಟೋ ಚಾಲಕರ ಸಂಘದ ಪ್ರಮುಖರು, ಅಕ್ರಮ ವಲಸಿಗರ ಹಿನ್ನೆಲೆ ಹಾಗೂ ಅವರ ಬಳಿಯಿರುವ ದಾಖಲೆಗಳ ಕುರಿತು ಸಮಗ್ರ ಪೊಲೀಸ್ ತನಿಖೆ ನಡೆಸುವಂತೆ ಬಲವಾಗಿ ಆಗ್ರಹಿಸಿದ್ದಾರೆ. ಈ ಹಿಂದೆ ಹಲವು ಬಾರಿ ಅಕ್ರಮ ವಲಸಿಗರ ಬಗ್ಗೆ ಮಾಹಿತಿ ನೀಡಿದ್ದರೂ ಇಲಾಖೆ ಕಡೆಯಿಂದ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಹಿಂದೂ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಆಂತರಿಕ ಭದ್ರತೆಗೆ ಧಕ್ಕೆಯಾಗದಂತೆ ತಡೆಯಲು ಮತ್ತು ಅಕ್ರಮ ವಲಸಿಗರ ಹಾವಳಿಯನ್ನು ಮಟ್ಟಹಾಕಲು ಪೊಲೀಸ್ ಇಲಾಖೆ ತಕ್ಷಣವೇ ಕಠಿಣ ಹಾಗೂ ಎಚ್ಚೆತ್ತುಕೊಂಡ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯದ ವಿವಿಧೆಡೆ ಅಕ್ರಮ ವಲಸಿಗರ ಹಾವಳಿ ಹೆಚ್ಚುತ್ತಿರುವ ಬೆನ್ನಲ್ಲೇ, ಕೊಡಗಿನಲ್ಲೂ ಈ ಪ್ರಕರಣ ಬೆಳಕಿಗೆ ಬಂದಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಹಾಗೂ ಚರ್ಚೆಗೆ ಗ್ರಾಸವಾಗಿದೆ. ಕೊಡಗು ಜಿಲ್ಲೆಯ ಕಾಫಿ ತೋಟಗಳು ವಲಸೆ ಕಾರ್ಮಿಕರ ಮೇಲಿನ ಅವಲಂಬನೆಯಿAದ ಕೂಡಿರುವುದರಿಂದ, ಇತ್ತೀಚಿನ ದಿನಗಳಲ್ಲಿ ಹೊರರಾಜ್ಯ ಹಾಗೂ ಹೊರದೇಶಗಳ ವ್ಯಕ್ತಿಗಳು ನಕಲಿ ದಾಖಲೆಗಳೊಂದಿಗೆ ಇಲ್ಲಿ ನುಸುಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ನಾಲ್ವರು ಅಕ್ರಮ ಬಾಂಗ್ಲಾ ವಲಸಿಗರನ್ನು ಬಾಳೆಲೆಯಲ್ಲಿ ಪತ್ತೆ ಹಚ್ಚಲಾಗಿದೆ. ಪತ್ತೆಯಾಗಿರುವ ಅಕ್ರಮ ವಲಸಿಗರಲ್ಲಿ ಓರ್ವ ಪುರುಷ, ಒಬ್ಬ ಮಹಿಳೆ ಹಾಗೂ ಇಬ್ಬರು ಸಣ್ಣ ವಯಸ್ಸಿನ ಮಕ್ಕಳು ಸೇರಿದ್ದಾರೆ. ಇವರನ್ನು ಸುಜಾನ್ (32), ಸೋನಿಯಾ (28), ಸಂಜಿದಾ (10) ಹಾಗೂ ಶಿಯಾಮ (5) ಎಂದು ಗುರುತಿಸಲಾಗಿದೆ. ಈ ಬಗ್ಗೆ ವಿಚಾರಣೆ ಮುಂದುವರಿದಿದೆ.

ಆರ್.ಎನ್ ಬಿಂದುಮಣಿ, ಕೊಡಗು ಎಸ್‌ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net