

ಸೋಮವಾರಪೇಟೆ: ಮಾತೃಭಾಷೆ ಆತ್ಮಗೌರವದ ಸಂಕೇತವಾಗಿದ್ದು, ಕನ್ನಡ ಭಾಷೆಯನ್ನು ಎಂದಿಗೂ ಮರೆಯಬಾರದು ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.
ಖಾಸಗಿ ಬಸ್ ನಿಲ್ದಾಣದ ವೇದಿಕೆಯಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದ ಸಮಾರೋಪದಲ್ಲಿ ಅವರು ಮಾತನಾಡಿದರು.
ಕನ್ನಡ ನಮ್ಮ ಬದುಕಿಗೆ ಅನ್ನ ನೀಡುವ ಭಾಷೆಯಾಗಿದೆ. ಕನ್ನಡವನ್ನು ಪ್ರೀತಿಸಿ, ಗೌರವಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ. ಕನ್ನಡ ಭಾಷೆ ನಮ್ಮ ರಕ್ತದಲ್ಲಿಯೇ ಬೆರೆತಿದೆ. ಕನ್ನಡಿಗರ ರಕ್ಷಣೆ ಹಾಗೂ ಏಳಿಗೆಗೆ ಸದಾ ಬೆಂಬಲವಾಗಿ ನಿಲ್ಲುತ್ತೇನೆ. ಆಟೋ ಚಾಲಕರು ವೃತ್ತಿಯಲ್ಲಿ ಎದುರಿಸುವ ಸಮಸ್ಯೆ ಹಾಗೂ ಸಂಕಷ್ಟಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು. ಅವುಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸಲು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು. ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಕಳೆದ 19 ವರ್ಷಗಳಿಂದ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಪ್ರಶಂಸನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಂಪತ್ ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ಮುಖಂಡ ಎಡಿಕೇರಿ ಪ್ರಸನ್ನ, ಪ್ರಮುಖರಾದ ಎಚ್.ಕೆ.ಚಂದ್ರಶೇಖರ್, ಚೇತನ್, ಅರುಣ್ ಕಾಳಪ್ಪ, ಗಿರೀಶ್ ಮಲ್ಲಪ್ಪ, ರುಬಿನಾ, ಶೀಲಾ ಡಿಸೋಜ, ಸುನಿಲ್ ರೈ, ನತೀಶ್ ಮಂದಣ್ಣ, ಡಿ.ಯು.ಕಿರಣ್, ಎಸ್.ಎಂ.ಡಿಸಿಲ್ವ, ಸಂಘದ ಉಪಾಧ್ಯಕ್ಷ ಪ್ರಸನ್ನ ಯಡೂರು, ಕಾರ್ಯದರ್ಶಿ ಪಿ.ಎಂ. ಕವನ್, ಖಜಾಂಚಿ ವಿಜು ಐಗೂರು, ಸಹ ಕಾರ್ಯದರ್ಶಿ ಎ.ಸಿ.ಜಗದೀಶ್, ಮಾಜಿ ಅಧ್ಯಕ್ಷ ಆರ್.ಮೋಹನ್ ಹಾಗೂ ರವೀಶ್ ಇದ್ದರು.
ಸಂಘದ ಹಿರಿಯ ಸದಸ್ಯ ಎಸ್.ಐ.ಮಹಮ್ಮದ್ ಫಿರ್, ನಿವೃತ್ತ ಡೆಪ್ಯೂಟಿ ಕಮಾಂಡೆಂಟ್ ಬಿ.ಬಿ.ಮಂಜುನಾಥ್, ಹಾನಗಲ್ಲು ಗ್ರಾಮ ಆಡಳಿತಾಧಿಕಾರಿ ಎನ್.ರಾಜು ಅವರನ್ನು ಸನ್ಮಾನಿಸಲಾಯಿತು. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಾದ ಪವನ್, ಅಭಿನವಗೌಡ, ವಂಶಿಕ್ ರಮೇಶ್, ಪುನಿತ್ ಅವರನ್ನು ಗೌರವಿಸಲಾಯಿತು.