ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿಗೆ ಪ್ರಶಸ್ತಿ

ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿಗೆ ಪ್ರಶಸ್ತಿ
ಭಾರತೀಯ ಕೈಗಾರಿಕಾ ಒಕ್ಕೂಟದ ಎಫ್‌ಪಿಒ ಎಕ್ಸಲೆನ್ಸ್ ಪ್ರಶಸ್ತಿ ಸಮಾರಂಭದಲ್ಲಿ ಕೊಡಗು ಮೂಲದ ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ತಂತ್ರಜ್ಞಾನ ಮತ್ತು ಸುಸ್ಥಿರತೆ ವಿಭಾಗದಲ್ಲಿ ಪ್ರಶಸ್ತಿ ಸ್ವೀಕರಿಸಿತು. ಎ.ಕೆ. ಮುತ್ತಪ್ಪ, ಕೆ. ರತ್ನ ಚರ್ಮಣ ಮತ್ತಿತರರು ಇದ್ದರು.
Published on: 

ಮಡಿಕೇರಿ

ಭಾರತೀಯ ಕೈಗಾರಿಕಾ ಒಕ್ಕೂಟದ ಎಫ್‌ಪಿಒ ಎಕ್ಸಲೆನ್ಸ್ ಪ್ರಶಸ್ತಿ ಸಮಾರಂಭದಲ್ಲಿ ಸದ್ಗುರುಗಳು ರೂಪಿಸಿರುವ ಈಶ ಔಟ್‌ರೀಚ್ ಬೆಂಬಲಿತ ಕೊಡಗು ಮೂಲದ ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ತಂತ್ರಜ್ಞಾನ ಮತ್ತು ಸುಸ್ಥಿರತೆ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಈಶ ಔಟ್‌ರೀಚ್ ಬೆಂಬಲಿತ ತಮಿಳುನಾಡಿನ ಇತರ ಎರಡು ರೈತ ಉತ್ಪಾದಕ ಸಂಸ್ಥೆಗಳಿಗೂ ಪ್ರಶಸ್ತಿಗಳು ಬಂದಿವೆ. ಕೊಯಂಬತ್ತೂರಿನ ತೇಂಚೇರಿಮಲೈ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಮಾರುಕಟ್ಟೆ ಸಂಪರ್ಕ ವಿಭಾಗದಲ್ಲಿ ಜಯಗಳಿಸಿದರೆ, ಸೆನ್ನಿಯಾಂಡವರ್ ಎಫ್‌ಪಿಒ ಅದೇ ವಿಭಾಗದಲ್ಲಿ ವಿಶೇಷ ಮನ್ನಣೆ ಪಡೆದಿದೆ.

ದೇಶಾದ್ಯಂತ ಸಾವಿರಾರು ಎಫ್‌ಪಿಒಗಳ ಅರ್ಜಿದಾರರನ್ನು ಒಳಗೊಂಡ ಮೂರು ಹಂತಗಳ ಕಠಿಣ ಮೌಲ್ಯಮಾಪನ ಪ್ರಕ್ರಿಯೆಯ ನಂತರ ಈ ಪ್ರಶಸ್ತಿಗಳನ್ನು ನೀಡಲಾಗಿದೆ. ಮಾರುಕಟ್ಟೆ ಪ್ರವೇಶವನ್ನು ಬಲಪಡಿಸುವುದು, ಪರಿಣಾಮಕಾರಿ ವ್ಯಾಪಾರ ಪದ್ಧತಿ ಅಳವಡಿಕೆ ಹಾಗೂ ಸುಸ್ಥಿರ ಕೃಷಿ ವಿಧಾನಗಳಲ್ಲಿ ಈ ರೈತ ನೇತೃತ್ವದ ಸಂಸ್ಥೆಗಳು ಸಾಧಿಸಿದ ಮುನ್ನಡೆಗೆ ಈ ಗೌರವ ಸಂದಿದೆ.

ಶುಕ್ರವಾರ (ಅ.23) ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೊನ್ನಾಡ್ ಎಫ್‌ಪಿಒ ನಿರ್ದೇಶಕರು ಹಾಗೂ ರೈತರಾದ ಎ.ಕೆ. ಮುತ್ತಪ್ಪ ಮತ್ತು ಕೆ. ರತ್ನ ಚರ್ಮಣ, ಈ ಪ್ರಶಸ್ತಿಯು ನಮ್ಮೆಲ್ಲಾ ರೈತ ಸದಸ್ಯರಿಗೆ ಹೆಮ್ಮೆಯ ಕ್ಷಣವಾಗಿದೆ. ಸುಸ್ಥಿರ ಕೃಷಿ ಉದ್ಯಮವನ್ನು ನಿರ್ಮಿಸುವ ನಿಟ್ಟಿನಲ್ಲಿ ನಮ್ಮ ರೈತರ ಸಾಮೂಹಿಕ ಪ್ರಯತ್ನವನ್ನು ಇದು ಗುರುತಿಸಿದೆ. ಈಶ ಔಟ್‌ರೀಚ್‌ನ ಬೆಂಬಲ ಮತ್ತು ಮಾರ್ಗದರ್ಶನದಿಂದಾಗಿ ನಮಗೆ ಉತ್ತಮ ಅವಕಾಶಗಳನ್ನು ಕಂಡುಕೊಳ್ಳಲು ಸಾಧ್ಯವಾಗಿದೆ. ನಮಗೆ ಬೆಂಬಲ ನೀಡಿದ ಸದ್ಗುರುಗಳಿಗೆ ಮತ್ತು ಈಶ ಔಟ್‌ರೀಚ್‌ಗೆ ಕೃತಜ್ಞತೆಗಳು ಎಂದು ತಿಳಿಸಿದರು.

ಈಶ ಔಟ್‌ರೀಚ್‌ನ ಮಣ್ಣು ಉಳಿಸಿ ರೈತ ಅಭಿಯಾನವು ಸಣ್ಣ ಮತ್ತು ಅತಿಸಣ್ಣ ರೈತರಿಗೆ ತಂತ್ರಜ್ಞಾನ, ಆರ್ಥಿಕ ಹಾಗೂ ಮಾರುಕಟ್ಟೆ ನೆರವು ನೀಡುವ ಮೂಲಕ ಲಾಭದಾಯಕ ಕೃಷಿ ಉದ್ಯಮಗಳನ್ನು ಕಟ್ಟಿಕೊಳ್ಳಲು ನೆರವಾಗುತ್ತಿದೆ. 2013ರಲ್ಲಿ ವೆಳ್ಳಿಯಂಗಿರಿ ಉಳವನ್ ಎಫ್‌ಪಿಒ ಮೂಲಕ ಪ್ರಾರಂಭವಾದ ಈ ಉಪಕ್ರಮ ಪ್ರಸ್ತುತ ಕರ್ನಾಟಕ ಮತ್ತು ತಮಿಳುನಾಡಿನಾದ್ಯಂತ 25 ಎಫ್‌ಪಿಒಗಳಿಗೆ ವಿಸ್ತರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net