ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ್ದ ಪತಿಗೆ ಜೈಲು ಶಿಕ್ಷೆ

ವಿರಾಜಪೇಟೆ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು
ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ್ದ ಪತಿಗೆ ಜೈಲು ಶಿಕ್ಷೆ
Published on: 

ವಿರಾಜಪೇಟೆ: ಪತಿಯ ನಿರಂತರ ಕಿರುಕುಳದಿಂದ ಬೇಸತ್ತ ಪತ್ನಿ ತವರು ಮನೆಗೆ ಹಾದಿ ಹಿಡಿದ ಹಿನ್ನೆಲೆಯಲ್ಲಿ ಬ್ಲೇಡ್‌ನಿಂದ ಕತ್ತು ಸೀಳಿ ಕೊಲೆ ಮಾಡಲು ಯತ್ನಸಿದ್ದ ಅಪರಾಧಿಗೆ ಇಲ್ಲಿನ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ನೀಡಿ ತೀರ್ಪು ನೀಡಿದೆ.

ವಿರಾಜಪೇಟೆ ನಗರದ ಸುಂಕದ ಕಟ್ಟೆ ನಿವಾಸಿ ಕುಮಾರಸ್ವಾಮಿ ಎಂಬುವರ ಪುತ್ರ ಎಚ್.ಕೆ.ಮೋಹನ್ (36) ಶಿಕ್ಷೆಗೆ ಗುರಿಯಾದವನು.

ಎಚ್.ಕೆ.ಮೋಹನ್ ಕೂಲಿ ಕಾರ್ಮಿಕನಾಗಿದ್ದು, ಪತ್ನಿ ಸುಕನ್ಯಾ ಜೊತೆ ಸುಂಕದ ಕಟ್ಟೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ. ಪತಿ ಮತ್ತು ಪತ್ನಿಯರ ನಡುವೆ ಸಣ್ಣಪುಟ್ಟ ಕಲಹಗಳು ನಡೆಯುತಿದ್ದವು ಎನ್ನಲಾಗಿದೆ. ಪತಿಯ ಕಿರುಕುಳದಿಂದ ಬೇಸತ್ತ ಸುಕನ್ಯಾಳು ಮಗಳೊಂದಿಗೆ ನಗರದ ಸುಣ್ಣದ ಬೀದಿಯಲ್ಲಿರುವ ತವರು ಮನೆಗೆ ಬಂದು ನೆಲೆಸುತ್ತಾಳೆ. ಸಮಾರಂಭಕ್ಕೆ ತೆರಳಲು ಸೀರೆಯೊಂದನ್ನು ತರಲು ಪತಿ ವಾಸವಾಗಿದ್ದ ಮನೆಗೆ 2020 ನ.29ರಂದು ಬೆಳಗ್ಗೆ ಸುಕನ್ಯಾ ತೆರಳಿ ಮನೆಯ ಬೀಗವನ್ನು ತೆಗೆದು ಮನೆ ಹೊಕ್ಕು ಸೀರೆಯ ಹುಡುಕಾಟ ನಡೆಸಿದ್ದಾಳೆ. ಈ ಸಂಧರ್ಭದಲ್ಲಿ ಪತಿ ಮೋಹನ್ ಮನೆಗೆ ಬಂದಿದ್ದಾನೆ.

ಮನೆ ಬಿಟ್ಟು ತೆರಳಿದ್ದ ಪತ್ನಿ ಮನೆಗೆ ಬಂದಿರುವುದನ್ನು ನೋಡಿ ಸಿಟ್ಟಿಗೆದ್ದು ಕೊಲೆ ಮಾಡುವ ಉದ್ದೇಶದಿಂದ ಬಲವಂತವಾಗಿ ಸುಕನ್ಯಾಳ ಮೇಲೆ ದಾಳಿ ಮಾಡಿ ತನ್ನ ಬಳಿ ಇದ್ದ ಕ್ಷೌರ ಮಾಡುವ ಬ್ಲೇಡ್‌ನಿಂದ ಕತ್ತು ಕೊಯ್ದ ಗಂಭೀರವಾಗಿ ಗಾಯಗೊಳಿಸಿದ್ದ. ಗಾಯದಿಂದ ನರಳುತಿದ್ದ ಸುಕನ್ಯಾ ಚೀರಿಕೊಂಡಾಗ ಅದನ್ನು ಕೇಳಿದ ನೆರೆಹೊರೆಯವರು ಗಾಯಗೊಂಡಿದ್ದ ಸುಕನ್ಯಾಳನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸುತ್ತಾರೆ.

ಘಟನೆಯ ಕುರಿತು ಮತ್ತು ಗಾಯಾಳು ಸುಕನ್ಯಾಳ ಹೇಳಿಕೆ ಪಡೆದ ನಗರ ಪೊಲೀಸರು ವಿರಾಜಪೇಟೆನಗರ ಠಾಣೆಯಲ್ಲಿ ಸುಕನ್ಯಾಳ ಪತಿ ಮೋಹನ್ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಿ, ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಎರಡನೇ ಆಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಎಸ್.ನಟರಾಜ್ ಎಚ್.ಕೆ.ಮೋಹನ್‌ಗೆ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂ.ದಂಡ, ವಿಧಿಸಿದ್ದು, ದಂಡ ಕಟ್ಟಲು ವಿಫಲನಾದಲ್ಲಿ 3 ತಿಂಗಳ ಸಾದಾ ಸಜೆಯನ್ನು ಅನುಭವಿಸುವಂತೆ ತೀರ್ಪು ನೀಡಿದ್ದಾರೆ. ಗಾಯಳು ಸುಕನ್ಯಾಳಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ನೀಡುವಂತೆ ಆದೇಶ ಮಾಡಿರುತ್ತಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಯಾಸೀನ್ ಅಹಮ್ಮದ್ ವಾದ ಮಂಡಿಸಿದ್ದರು.