

ಸಿದ್ದಾಪುರ: ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಉಳಿವು ಮತ್ತು ಬೆಳವಣಿಗೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕಸಾಪ ಅಮ್ಮತ್ತಿ ಹೋಬಳಿ ಘಟಕದ ಅಧ್ಯಕ್ಷ ಟಿ.ಎಚ್.ಮಂಜುನಾಥ್ ಹೇಳಿದರು.
ಸಿದ್ದಾಪುರ ಪಟ್ಟಣದ ಆಟೋ ರಿಕ್ಷಾ ನಿಲ್ದಾಣದಲ್ಲಿ ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡರ ಸ್ವಾಭಿಮಾನಿ ಬಣ, ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘ, ಮಹಿಳಾ ಸಂಜೀವಿನಿ ಒಕ್ಕೂಟ ಹಾಗೂ ಆಟೋ ಚಾಲಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕನ್ನಡಾಭಿಮಾನ ಕೇವಲ ಮಾತಿಗೆ ಸೀಮಿತವಾಗದೆ ನಿತ್ಯ ಜೀವನದಲ್ಲೂ ಭಾಷೆಯ ಬಳಕೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ ಕನ್ನಡ ವಿಷಯದಲ್ಲಿ 125ಕ್ಕೆ 123 ಅಂಕ ಗಳಿಸಿದ ವಿಜಯಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡರ ಬಣದ ಪದಾಧಿಕಾರಿಗಳು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಒಳರೋಗಿಗಳಿಗೆ ಹಣ್ಣು ವಿತರಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಭಾವ ಮಾಲ್ದಾರೆ, ಪತ್ರಕರ್ತ ರಜಿತ್ ಕುಮಾರ್, ಸಂತೋಷ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ತುಳಸಿ ಗಣಪತಿ, ತಲೆಹೊರೆ ಕಾರ್ಮಿಕರ ಸಂಘದ ಅಧ್ಯಕ್ಷ ಅಯ್ಯಪ್ಪ, ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.