ದಸರಾದಲ್ಲಿ ಸಂಭ್ರಮ ಓಕೆ ಅಬ್ಬರದ ಡಿಜೆ ಬೇಕೆ ?

 ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾದ ವರ್ಣರಂಜಿತ ಮಂಟಪ.
Published on: 

ಮಡಿಕೇರಿ

ಐತಿಹಾಸಿಕ ಮಡಿಕೇರಿ ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿರುವ ನಡುವೆಯೇ, ಮಂಟಪಗಳ ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ಜಿಲ್ಲಾಡಳಿತ ವಿಧಿಸಿರುವ ನಿರ್ಬಂಧ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲಾಡಳಿತದ ಈ ಕ್ರಮಕ್ಕೆ ದಶಮಂಟಪ ಸಮಿತಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಡಿಜೆ ಇಲ್ಲದಿದ್ದರೆ ಮಡಿಕೇರಿ ದಸರಾ  ಕಳೆಗುಂದಲಿದೆ ಎಂದು ಆತಂಕ ವ್ಯಕ್ತಪಡಿಸಿವೆ.

​ಪರಿಸರ ಮಾಲಿನ್ಯ, ಶಬ್ಧ ನಿಯಂತ್ರಣ ಹಾಗೂ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ದಸರಾ ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ನಿರ್ಬಂಧ ಹೇರಲು ಮುಂದಾಗಿದೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ದಶಮಂಟಪಗಳ ಪ್ರಮುಖರು ಮತ್ತು ಆಯೋಜಕರು, ದಶಕಗಳಿಂದ ನಡೆದುಕೊಂಡು ಬಂದಿರುವ ಮಡಿಕೇರಿ ದಸರೆಯ ಸ್ತಬ್ಧಚಿತ್ರಗಳ ಮೆರವಣಿಗೆಯ ಪ್ರಮುಖ ಆಕರ್ಷಣೆಯೇ ಡಿಜೆ ಆಗಿದೆ. ಮಡಿಕೇರಿಯಲ್ಲಿ ಕಳೆದ ಸುಮಾರು ನಾಲ್ಕು ದಶಕಗಳಿಂದಲೂ ದಸರಾ ಸ್ತಬ್ಧಚಿತ್ರಗಳ ಮೆರವಣಿಗೆಯಲ್ಲಿ ಧ್ವನಿವರ್ಧಕ ಹಾಗೂ ಡಿಜೆ ಬಳಸುವುದು ಸಂಪ್ರದಾಯದಂತೆ ಬೆಳೆದುಬಂದಿದೆ.  ಡಿಜೆ ಇಲ್ಲದೆ ಕೇವಲ ಸಾಂಪ್ರದಾಯಿಕ ಸಾಧನಗಳಷ್ಟೇ ಇದ್ದರೆ ಯುವ ಜನತೆ ಹಾಗೂ ಜನಸಾಮಾನ್ಯರನ್ನು ಆಕರ್ಷಿಸುವ ಉತ್ಸಾಹ ಕಡಿಮೆಯಾಗಿ, ದಸರಾ  ಹಬ್ಬ ಕಳೆ ಹಾಗೂ ಮೆರಗು ಕಳೆದುಕೊಳ್ಳಲಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ .​ಜಿಲ್ಲಾಡಳಿತದ ನಿರ್ಬಂಧವನ್ನು ವಿರೋಧಿಸಿ ಹಾಗೂ ಡಿಜೆ ಬಳಕೆಗೆ ಅನುಮತಿ ಕೋರಿ ದಸರಾ ದಶಮಂಟಪ ಸಮಿತಿ ಈಗಾಗಲೇ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ. ಅರ್ಜಿಯನ್ನು ಪರಿಶೀಲಿಸಿರುವ ಉಚ್ಚ ನ್ಯಾಯಾಲಯ ಡಿಜೆ ಬಳಕೆ ಅನುಮತಿ ಕುರಿತು ಕಾನೂನು ಪ್ರಕಾರ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಕೊಡಗು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ. ಶೋಭಾಯಾತ್ರೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ ಜಿಲ್ಲಾಡಳಿತದ ನಿಬಂಧನೆಗಳು ಮತ್ತು ಮಂಟಪ ಸಮಿತಿಗಳ ಪಟ್ಟು ಮಡಿಕೇರಿ ದಸರಾದಲ್ಲಿ ಕುತೂಹಲದ ವಾತಾವರಣ ಸೃಷ್ಟಿಸಿದೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net