

ಮಡಿಕೇರಿ
ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಪಟ್ಟಿಯಲ್ಲಿ 2026-27ನೇ ಸಾಲಿಗೆ ತಿಯನ್ ಜಾತಿಯನ್ನು ಸೇರಿಸದಿರುವುದಕ್ಕೆ ಮಡಿಕೇರಿ ತಾಲೂಕು ತಿಯನ್ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ತಿಯನ್ ಜಾತಿಯನ್ನು ನಿಗಮದ ವ್ಯಾಪ್ತಿಗೆ ಸೇರಿಸಿ, ಸಮುದಾಯದವರಿಗೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಕಲ್ಪಿಸಬೇಕೆಂದು ಸಂಘದ ಅಧ್ಯಕ್ಷ ಕೆ.ವಿ. ಧರ್ಮೇಂದ್ರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮೂಲಕ ಹೊಲಿಗೆ, ಕೃಷಿ, ಹೈನುಗಾರಿಕೆ, ಶಿಕ್ಷಣ ನೆರವು, ಸ್ವಯಂ ಉದ್ಯೋಗಕ್ಕಾಗಿ ಸಾಲ, ವೈಯಕ್ತಿಕ ಸಾಲ ಯೋಜನೆ, ವ್ಯಾಪಾರ ಮತ್ತು ಉದ್ಯಮ ಆರಂಭಿಸಲು ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅಲ್ಲದೆ, ಸ್ವಾವಲಂಬಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರದ ವಾಹನ ಖರೀದಿಗೆ ಸಹಾಯಧನ ಹಾಗೂ ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. ಆದರೆ, ತಿಯನ್ ಜಾತಿಯನ್ನು ನಿಗಮದ ಪಟ್ಟಿಯಲ್ಲಿ ಸೇರಿಸದಿರುವುದರಿಂದ ಈ ಸಮುದಾಯದ ಮಂದಿ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ವಿವಿಧ ಯೋಜನೆಗಳು ಸಮುದಾಯದ ಜನರ ಆರ್ಥಿಕ ಸ್ವಾವಲಂಬನೆ, ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಗೆ ನೆರವಾಗುತ್ತವೆ. ಹೀಗಿರುವಾಗ ತಿಯನ್ ಜಾತಿಯನ್ನು ನಿಗಮದ ವ್ಯಾಪ್ತಿಯಿಂದ ಹೊರಗಿಟ್ಟಿರುವುದು ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ. ಸಂಬAಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಆದಷ್ಟು ಶೀಘ್ರ ತಿಯನ್ ಜಾತಿಯನ್ನು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಪಟ್ಟಿಯಲ್ಲಿ ಸೇರಿಸುವ ಮೂಲಕ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದ್ದಾರೆ.