

ಮಡಿಕೇರಿ
ಹೆಚ್ಚಾಗುತ್ತಿರುವ ಡ್ರಗ್ಸ್ ಚಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೋಟರಿಯಂಥ ಸೇವಾ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳಲ್ಲಿ ಮಾದಕ ದ್ರವ್ಯ ದುಷ್ರರಿಣಾಮದ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚು ಕಾರ್ಯಗತಗೊಳಿಸಬೇಕೆಂದು ರೋಟರಿ ಜಿಲ್ಲೆ 3181ರ ನಿರ್ದೇಶಕ ಎಚ್.ಟಿ. ಅನಿಲ್ ಹೇಳಿದರು. ಕುಶಾಲನಗರದ ರೋಟರಿ ಸಭಾಂಗಣದಲ್ಲಿ ಸೋಮವಾರ ನಡೆದ ಕೊಡಗಿನ 10 ರೋಟರಿ ಸಂಸ್ಥೆಗಳೂ ಸೇರಿದಂತೆ ವಲಯ 6ರ 14 ರೋಟರಿ ಸಂಸ್ಥೆಗಳ ಕಾರ್ಯಯೋಜನೆ ಪರಿಶೀಲನಾ ಸಭೆ ಉದ್ಘಾಟಿಸಿ ಮಾತನಾಡಿದರು.
ಪೊಲೀಸ್ ಇಲಾಖೆ ಈಗಾಗಲೇ ಮಾರಕವಾದ ಡ್ರಗ್ಸ್ ವಿರುದ್ಧ ಸಮರ ಸಾರಿದೆ. ಆದರೆ ರೋಟರಿಯಂಥ ಸೇವಾ ಸಂಸ್ಥೆಗಳು ಕೂಡ ಶಿಕ್ಷಣ ಸಂಸ್ಥೆಗಳಲ್ಲಿ ಮಾದಕ ವ್ಯಸನದಿಂದ ದೈಹಿಕ ಮತ್ತು ಮಾನಸಿಕವಾಗಿ ಉಂಟಾಗುವ ದುಷ್ಪಾರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಡ್ರಗ್ಸ್ ಜಾಲದಲ್ಲಿ ಸಿಲುಕಿಕೊಂಡವರನ್ನು ಹೊರತರುವ ಕೆಲಸಕ್ಕೆ ರೋಟರಿ ಸಂಸ್ಥೆಗಳ ಸದಸ್ಯರು ಮುಂದಾಗಬೇಕು.
ರೋಟರಿ ಜಿಲ್ಲೆ 3181 ರಿಂದ ಈ ವರ್ಷ ಪ್ರಾರಂಭವಾಗಿರುವ ನಮ್ಮ ಹಬ್ಬ ನಮ್ಮ ಸೇವೆ ಎಂಬ ವಿನೂತನ ಯೋಜನೆಯನ್ನು ರೋಟರಿ ಸಂಸ್ಥೆಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಆಯಾ ಗ್ರಾಮ ವ್ಯಾಪ್ತಿಯ ಉತ್ಸವಗಳಿಗೆ ಅಗತ್ಯ ಸೇವಾ ಕಾರ್ಯದ ಮೂಲಕ ನೆರವು ನೀಡಬೇಕು. ವಿದೇಶಿ ಅಥವಾ ಬೇರೆ ಯಾವುದೇ ಸಂಸ್ಥೆಗಳಿAದ ಆರ್ಥಿಕ ನೆರವು ಪಡೆಯದೇ ಪ್ರತೀಯೋರ್ವ ಸದಸ್ಯರೂ ತಮ್ಮ ಸ್ವಂತ ವೆಚ್ಚದಿಂದ ಸೇವಾ ಯೋಜನೆ ಜಾರಿಗೊಳಿಸುತ್ತಿರುವ ರೋಟರಿ ಸಂಸ್ಥೆಯ ಕಾರ್ಯವೈಖರಿಯನ್ನು ಮತ್ತಷ್ಟು ಜನರಿಗೆ ತಲುಪಿಸುವ ಮೂಲಕ ಸೇವಾ ಮನೋಭಾವ ಹೊಂದಿರುವ ಮತ್ತಷ್ಟು ಜನರು ರೋಟರಿ ಸದಸ್ಯರಾಗುವಂತೆ ಪ್ರೇರೇಪಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು.
ರೋಟರಿ ವಲಯ 6 ರ ಸಹಾಯಕ ಪ್ರಾಂತಪಾಲ ಎಂ.ಡಿ. ರಂಗಸ್ವಾಮಿ ಮಾತನಾಡಿ, ರೋಟರಿಯಂಥ ಸೇವಾ ಸಂಸ್ಥೆಗಳ ಸದಸ್ಯರಾಗುವುದೇ ಸಮಾಜಸೇವೆಗೆ ಲಭಿಸಿರುವ ಅತ್ಯುತ್ತಮ ಅವಕಾಶವಾಗಿದೆ. ಹೀಗಿರುವಾಗ ರೋಟರಿ ಸದಸ್ಯರು ತಮ್ಮ ಅಧಿಕಾರಾವಧಿಯಲ್ಲಿ ಸೇವೆಗೆ ದೊರಕುವ ಅವಕಾಶಗಳನ್ನು ಕೈಚೆಲ್ಲಬಾರದು ಎಂದು ಹೇಳಿದರು.
ರೋಟರಿ ವಲಯ 6ರ ಸಹಾಯಕ ಪ್ರಾಂತಪಾಲರಾದ ಎಚ್.ಎಸ್. ವಸಂತ್ ಕುಮಾರ್, ಸಿ.ಎನ್. ವಿಜಯ್, ರಾಘವೇಂದ್ರ, ವಲಯ ಸೇನಾನಿಗಳಾದ ವಸಂತ್ ಕುಮಾರ್, ಜೆ.ಕೆ. ಸುಭಾಷಿಣಿ, ಲಲಿತಾ ರಾಘವನ್, ಮಾಜಿ ಸಹಾಯಕ ಗವರ್ನರ್ಗಳಾದ ಲಿಖಿತ್, ಮನೋಹರ್ ಕಾಮತ್, ಕುಶಾಲನಗರ ರೋಟರಿ ಅಧ್ಯಕ್ಷ ರುದ್ರೇಶ್ ಪಟೇಲ್ ಇದ್ದರು.
ಕೊಡಗು ಜಿಲ್ಲೆಯ ಕುಶಾಲನಗರ, ಮಡಿಕೇರಿ, ರೋಟರಿ ವುಡ್ಸ್, ಮಿಸ್ಟಿ ಹಿಲ್ಸ್, ಗೋಣಿಕೊಪ್ಪಲು, ವೀರಾಜಪೇಟೆ, ಸೋಮವಾರಪೇಟೆ, ಕೊಡ್ಲಿಪೇಟೆ, ಶನಿವಾರಸಂತೆ, ಆಲೂರು ಸಿದ್ದಾಪುರ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮಿಡ್ ಟೌನ್, ಪಿರಿಯಾಪಟ್ಟಣ ಐಕಾನ್, ಹುಣಸೂರು, ಕೆ.ಆರ್. ನಗರ ರೋಟರಿ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪ್ರಮುಖರು ಸಭೆಯಲ್ಲಿ ಪಾಲ್ಗೊಂಡು ಮುಂದಿನ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.