

ನಾಪೋಕ್ಲು: ಕನ್ನಡ ರಾಜ್ಯೋತ್ಸವ ಕ್ರೀಡಾಕೂಟ ಸಮಿತಿಯ ಚೆಯ್ಕಂಡಣೆ ವತಿಯಿಂದ ಚೆಯ್ಕಂಡಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೋಕೇರಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.
ತೀವ್ರ ಪೈಪೋಟಿಯ ಕುತೂಹಲ ಕೆರಳಿಸಿದ್ದ ಫೈನಲ್ ಪಂದ್ಯದಲ್ಲಿ ಕೋಕೇರಿ ತಂಡವು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡರೆ ನರಿಯಂದಡ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ನರಿಯಂದಡ ತಂಡ ನಿಗದಿತ 6 ಓವರ್ಗಳಲ್ಲಿ 36 ರನ್ ಗಳಿಸಿತು. ಗೆಲುವಿಗೆ 37 ರನ್ಗಳ ಗುರಿ ಸವಾಲನ್ನು ಸ್ವೀಕರಿಸಿ ಬೆನ್ನಟ್ಟಿದ ಕೋಕೇರಿ ತಂಡದ ಪರ ಕಾಳಪ್ಪ ಅವರು ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಕೋಕೇರಿ ತಂಡವು ಕೇವಲ 5.4 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಚೇಲಾವರ ತಂಡವನ್ನು ಪರಾಭವಗೊಳಿಸಿದ ನರಿಯಂದಡ ತಂಡವು ಫೈನಲ್ ಪ್ರವೇಶಿಸಿತ್ತು.
ಕ್ರೀಡಾಕೂಟದಲ್ಲಿ ಮೂರು ಗ್ರಾಮಗಳ ಕ್ರೀಡಾಭಿಮಾನಿಗಳು ಪಾಲ್ಗೊಂಡು ಆಟಗಾರರನ್ನು ಪ್ರೋತ್ಸಾಹಿಸಿದರು. ಕಾರ್ಯಕ್ರಮದಲ್ಲಿ ಕ್ರೀಡಾಕೂಟ ಸಮಿತಿ ಅಧ್ಯಕ್ಷ ಚೇನಂಡ ಸಂಪತ್, ಉಪಾಧ್ಯಕ್ಷ ಚೈಯಂಡ ನಂದ ನಾಚಪ್ಪ, ಕಾರ್ಯದರ್ಶಿ ಕುಟ್ಟನ ಸುನಿಲ್ ಕುಮಾರ್, ಸಮಿತಿ ಸದಸ್ಯರು ಹಾಗೂ ಕ್ರೀಡಾಭಿಮಾನಿಗಳು ಇದ್ದರು.