

ಮಡಿಕೇರಿ
ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಸಂಬAಧಿಸಿದAತೆ ಕ್ಷೇತ್ರವಾರು ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆಯೇ ಕೊಡಗಿನಲ್ಲಿ ಗ್ರಾಮೀಣ ರಾಜಕೀಯ ಗರಿಗೆದರಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದ್ದವರು ಈಗ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಯಾವ ಕ್ಷೇತ್ರ ಯಾರಿಗೆ ಒಲಿಯಲಿದೆ ? ಯಾವ ಪಕ್ಷದಿಂದ ಯಾರಿಗೆ ಟಿಕೆಟ್ ಸಿಗಲಿದೆ ? ಹಾಲಿ ರಾಜಕೀಯ ಪ್ರಭಾವವನ್ನು ಉಳಿಸಿಕೊಳ್ಳಲು ನಾಯಕರು ಯಾವ ತಂತ್ರ ಅನುಸರಿಸಲಿದ್ದಾರೆ ಎಂಬ ಲೆಕ್ಕಾಚಾರಗಳು ಬಿರುಸಿನಿಂದ ನಡೆಯುತ್ತಿವೆ.
ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಜಿಲ್ಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾಗಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಮತ್ತು ಬಿಜೆಪಿಯ ಜಿದ್ದಾಜಿದ್ದಿ ಹೋರಾಟದ ಕಣವಾಗಿ ಪರಿವರ್ತನೆ ಆಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಪಾರುಪತ್ಯ ಹೊಂದಿರುವ ಕಾಂಗ್ರೆಸ್‌ಗೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತನ್ನ ಪ್ರಭಾವವನ್ನು ಸಾಬೀತುಪಡಿಸುವುದು ಪ್ರತಿಷ್ಠೆಯ ಪ್ರಶ್ನೆಯಾಗಿದ್ದರೆ, ಈ ಹಿಂದೆ ಸುಮಾರು 3 ದಶಕಗಳಷ್ಟು ಕಾಲ ಏಕಚಕ್ರಧಿಪತ್ಯದ ರೀತಿಯಲ್ಲಿ ಆಡಳಿತ ನಡೆಸಿದ್ದ ಬಿಜೆಪಿ ಮತ್ತೆ ತನ್ನ ಹಳೆಯ ವೈಭವ ಮರಳಿ ಪಡೆಯಲು ಶತಾಯ ಗತಾಯ ಹೋರಾಟ ನಡೆಸಲೇಬೇಕಿದೆ.
ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಹಲವು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ ಹೊಂದಿರುವವರು ತಮ್ಮ ರಾಜಕೀಯ ಭವಿಷ್ಯದ ಲೆಕ್ಕಾಚಾರ ಆರಂಭಿಸಿದ್ದಾರೆ. ಈ ಹಿಂದೆ ಸ್ಪರ್ಧಿಸಿದ್ದವರು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗುರುತಿಸಿಕೊಂಡವರು, ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗಿರುವವರು ಹಾಗೂ ಸ್ಥಳೀಯವಾಗಿ ಪ್ರಭಾವ ಹೊಂದಿರುವ ಮುಖಂಡರು ಟಿಕೆಟ್‌ಗಾಗಿ ಪ್ರಯತ್ನಿಸುವ ಸಾಧ್ಯತೆ ದಟ್ಟವಾಗಿದೆ.
ಈ ಮಧ್ಯೆ ಕರಡು ಮೀಸಲಾತಿಯ ಕಾರಣದಿಂದ ಕೆಲವು ಆಕಾಂಕ್ಷಿಗಳಿಗೆ ತಮ್ಮ ಆದ್ಯತೆಯ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಸಿಗದಿರಬಹುದು. ಇಂತಹ ಸಂದರ್ಭದಲ್ಲಿ ಪಕ್ಕದ ಕ್ಷೇತ್ರಕ್ಕೆ ಸ್ಥಳಾಂತರಗೊಳ್ಳಬೇಕೇ, ಬೇರೆ ಕ್ಷೇತ್ರದಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಬೇಕೇ ಅಥವಾ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸಬೇಕೇ ಎಂಬ ಚರ್ಚೆಗಳೂ ನಡೆಯುತ್ತಿದೆ. ಅಂತಿಮವಾಗಿ ಯಾವ ಕ್ಷೇತ್ರಕ್ಕೆ ಯಾವ ವರ್ಗದ ಮೀಸಲಾತಿ ನಿಗದಿಯಾಗುತ್ತದೆ ಎಂಬುದು ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರ್ಣಾಯಕವಾಗಲಿದೆ.
ಜಿಲ್ಲೆಯಲ್ಲಿ ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ, ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕುಗಳ ಗ್ರಾಮೀಣ ಭಾಗಗಳಲ್ಲಿ ಪಕ್ಷಗಳ ಸಂಘಟನಾ ಸಾಮರ್ಥ್ಯ, ಸ್ಥಳೀಯ ಮುಖಂಡರ ಪ್ರಭಾವ ಮತ್ತು ಮತದಾರರೊಂದಿಗಿನ ಸಂಪರ್ಕ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು. ಮೀಸಲಾತಿ ಪ್ರಕಟವಾದ ಕೂಡಲೇ ಅಭ್ಯರ್ಥಿಗಳ ಹೆಸರು ಅಂತಿಮವಾಗುವುದಿಲ್ಲ. ಆಕ್ಷೇಪಣೆಗಳ ಪರಿಶೀಲನೆ, ಅಂತಿಮ ಮೀಸಲಾತಿ ಹಾಗೂ ಚುನಾವಣಾ ವೇಳಾಪಟ್ಟಿಯ ನಂತರವೇ ರಾಜಕೀಯ ಚಿತ್ರಣ ಹೆಚ್ಚು ಸ್ಪಷ್ಟವಾಗಲಿದೆ.
ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿರುವುದು ಪಕ್ಷಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚುವರಿ ರಾಜಕೀಯ ಜವಾಬ್ದಾರಿಯನ್ನು ತಂದಿದೆ. ಶಾಸಕರಾದ ಡಾ. ಮಂತರ್ ಗೌಡ ಮತ್ತು ಎ.ಎಸ್. ಪೊನ್ನಣ್ಣ ಅವರ ನೇತೃತ್ವದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪಕ್ಷದ ಪ್ರಭಾವವನ್ನು ವಿಸ್ತರಿಸುವುದು ಕಾಂಗ್ರೆಸ್ ಮುಂದಿರುವ ಪ್ರಮುಖ ಸವಾಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ದೊರೆತ ಬೆಂಬಲ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿಯೂ ಉಳಿಸಿಕೊಳ್ಳುವುದು ಕಾಂಗ್ರೆಸ್‌ಗೆ ಸುಲಭದ ಕೆಲಸವಲ್ಲ.
ವಿಧಾನಸಭಾ ಚುನಾವಣೆಯ ಮತದಾರರ ನಿರೀಕ್ಷೆಗಳು, ಸ್ಥಳೀಯ ಸಮಸ್ಯೆಗಳು ಮತ್ತು ಗ್ರಾಮಮಟ್ಟದ ನಾಯಕತ್ವದ ನಡುವಿನ ವ್ಯತ್ಯಾಸಗಳು ಪಂಚಾಯಿತಿ ಚುನಾವಣೆಯಲ್ಲಿ ಮಹತ್ವ ಪಡೆಯುತ್ತವೆ. ಗ್ರಾಮೀಣ ರಸ್ತೆ, ಕುಡಿಯುವ ನೀರು, ಕಾಡಾನೆ-ಮಾನವ ಸಂಘರ್ಷ, ಕೃಷಿ ಸಮಸ್ಯೆಗಳು, ಕಾಫಿ ಬೆಳೆಗಾರರ ಹಿತಾಸಕ್ತಿ, ಉದ್ಯೋಗ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಂತಹ ವಿಷಯಗಳು ಮತದಾರರ ತೀರ್ಮಾನವನ್ನು ಪ್ರಭಾವಿಸಬಹುದು. ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿರುವ ರೀತಿ ಮತ್ತು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿರುವ ವೇಗವೂ ಕಾಂಗ್ರೆಸ್‌ನ ಸಾಧನೆಯ ಮೌಲ್ಯಮಾಪನಕ್ಕೆ ಒಳಪಡಲಿದೆ.
ಸಹಜವಾಗಿ ಹೆಚ್ಚು ಆಕಾಂಕ್ಷಿಗಳು ಇರುವುದರಿಂದ ಪಕ್ಷದೊಳಗಿನ ಟಿಕೆಟ್ ಆಕಾಂಕ್ಷಿಗಳನ್ನು ಒಗ್ಗೂಡಿಸುವುದು ಕಾಂಗ್ರೆಸ್ ಪಾಲಿಗೆ ಮತ್ತೊಂದು ಸವಾಲು. ಒಂದೇ ಕ್ಷೇತ್ರಕ್ಕೆ ಹಲವು ಮುಖಂಡರು ಆಸಕ್ತಿ ತೋರಿಸಿದರೆ ಅಸಮಾಧಾನ ಸೃಷ್ಟಿಯಾಗುವ ಸಾಧ್ಯತೆ ಇದೆ. ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿಯದಂತೆ ನೋಡಿಕೊಳ್ಳುವುದು ಹಾಗೂ ಕಾರ್ಯಕರ್ತರ ನಡುವೆ ಸಮನ್ವಯ ಸಾಧಿಸುವುದು ಪಕ್ಷದ ನಾಯಕರಿಗೆ ಮುಖ್ಯವಾಗಲಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಕಾಂಗ್ರೆಸ್‌ಗೆ ಕೇವಲ ಸ್ಥಳೀಯ ಸಂಸ್ಥೆಗಳ ಸ್ಪರ್ಧೆಯಲ್ಲ, ಗ್ರಾಮೀಣ ಮಟ್ಟದಲ್ಲಿ ತನ್ನ ರಾಜಕೀಯ ನೆಲೆಯನ್ನು ಎಷ್ಟು ಬಲಪಡಿಸಿಕೊಂಡಿದೆ ಎಂಬುದನ್ನು ತೋರಿಸುವ ಪರೀಕ್ಷೆಯೂ ಹೌದು.
ಕೊಡಗು ಜಿಲ್ಲೆಯಲ್ಲಿ ದೀರ್ಘಕಾಲದಿಂದ ಪ್ರಭಾವ ಹೊಂದಿರುವ ಬಿಜೆಪಿ, ವಿಧಾನಸಭಾ ಚುನಾವಣೆಯ ನಂತರ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ತನ್ನ ಸಂಘಟನಾ ಬಲವನ್ನು ಪುನಃ ಸಾಬೀತುಪಡಿಸಬೇಕಿದೆ. ಹಿಂದೆ ಪಕ್ಷಕ್ಕೆ ಬೆಂಬಲ ನೀಡಿದ್ದ ಮತದಾರರನ್ನು ಮತ್ತೆ ತನ್ನತ್ತ ಸೆಳೆಯುವುದು, ಸ್ಥಳೀಯ ಮುಖಂಡರನ್ನು ಸಕ್ರಿಯಗೊಳಿಸುವುದು ಮತ್ತು ಹೊಸ ತಲೆಮಾರಿನ ಕಾರ್ಯಕರ್ತರಿಗೆ ಅವಕಾಶ ನೀಡುವುದು ಪಕ್ಷದ ಮುಂದಿರುವ ಪ್ರಮುಖ ಕಾರ್ಯಗಳಾಗಿವೆ.
ಮಾಜಿ ಶಾಸಕರು, ಮಾಜಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಸದಸ್ಯರು, ಗ್ರಾಮಮಟ್ಟದಲ್ಲಿ ಪ್ರಭಾವ ಹೊಂದಿರುವ ಮುಖಂಡರು ಹಾಗೂ ಪಕ್ಷದ ಸಂಘಟನೆಯಲ್ಲಿ ಅನುಭವ ಹೊಂದಿರುವವರನ್ನು ಒಗ್ಗೂಡಿಸಿದರೆ ಬಿಜೆಪಿ ಸ್ಪರ್ಧೆಗೆ ಬಲ ಸಿಗಬಹುದು. ಆದರೆ ಹಳೆಯ ನಾಯಕತ್ವದ ಮೇಲಿನ ಅವಲಂಬನೆಯೊAದೇ ಸಾಕಾಗುವುದಿಲ್ಲ. ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವ ಅಭ್ಯರ್ಥಿಗಳು ಮತ್ತು ಮತದಾರರೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಕಾರ್ಯಕರ್ತರು ಪಕ್ಷದ ಗೆಲುವಿಗೆ ನಿರ್ಣಾಯಕವಾಗಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.
ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ, ಸ್ಥಳೀಯ ಅಭಿವೃದ್ಧಿ ಕಾಮಗಾರಿಗಳು ಹಾಗೂ ಜನರ ನಿರೀಕ್ಷೆಗಳನ್ನು ಚುನಾವಣಾ ಪ್ರಚಾರದ ಪ್ರಮುಖ ವಿಷಯಗಳನ್ನಾಗಿ ಬಿಜೆಪಿ ಮಾಡಿಕೊಳ್ಳುವ ಸಾಧ್ಯತೆಯಿದೆ. ಆದರೆ ಸರ್ಕಾರದ ವಿರುದ್ಧದ ಟೀಕೆಯಷ್ಟೇ ಮತಗಳನ್ನು ತಂದುಕೊಡುವುದಿಲ್ಲ. ಕ್ಷೇತ್ರವಾರು ಅಭ್ಯರ್ಥಿಗಳ ಆಯ್ಕೆ, ಸಂಘಟನಾ ಶಕ್ತಿ ಮತ್ತು ಮತಗಳ ಕ್ರೋಡೀಕರಣವೂ ಅಷ್ಟೇ ಮುಖ್ಯ. ಮೀಸಲಾತಿಯಿಂದಾಗಿ ಕೆಲವು ಕ್ಷೇತ್ರಗಳಲ್ಲಿ ಹಳೆಯ ಮುಖಂಡರಿಗೆ ಸ್ಪರ್ಧಿಸಲು ಅವಕಾಶ ತಪ್ಪಬಹುದು. ಅಂತಹ ಸಂದರ್ಭದಲ್ಲಿ ಹೊಸ ಅಭ್ಯರ್ಥಿಗಳನ್ನು ಮುನ್ನೆಲೆಗೆ ತರುವ ಸಾಮರ್ಥ್ಯವೇ ಬಿಜೆಪಿಯ ಸಂಘಟನಾ ಬಲದ ಪರೀಕ್ಷೆಯಾಗಲಿದೆ ಎನ್ನಲಾಗುತ್ತಿದೆ.
ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಕಣಕ್ಕಿಳಿಯುತ್ತವೆಯೇ ಎನ್ನುವುದು ಈ ಚುನಾವಣೆಯಲ್ಲಿ ಗಮನ ಸೆಳೆಯುತ್ತಿರುವ ಮತ್ತೊಂದು ಪ್ರಶ್ನೆಯಾಗಿದೆ. ಕೊಡಗಿನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎರಡೂ ಪಕ್ಷಗಳ ನಡುವೆ ಸಮನ್ವಯ ಸಾಧಿಸುವ ಚರ್ಚೆಗಳಿಗೆ ಈಗಾಗಲೇ ವೇದಿಕೆ ಸಿದ್ಧವಾಗಿರುವ ಸೂಚನೆಗಳು ಕಾಣಿಸಿವೆ. ಸೆ. 30ರಂದು ಜೆಡಿಎಸ್ ಮುಖಂಡರ ನಿಯೋಗ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಕೊಡಗಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಉತ್ತಮ ಸಮನ್ವಯ ಸಾಧಿಸಲು ಸಮನ್ವಯ ಸಮಿತಿ ರಚಿಸುವಂತೆ ಮನವಿ ಮಾಡಿತ್ತು. ಈ ಮಧ್ಯೆ ಏಕಾಂಗಿ ಸ್ಪರ್ಧೆ ಅಥವಾ ಎನ್.ಡಿ.ಎ. ಮೈತ್ರಿ ಕುರಿತಾದ ಅಂತಿಮ ತೀರ್ಮಾನವನ್ನು ರಾಜ್ಯ ಮಟ್ಟದಲ್ಲಿ ತೆಗೆದುಕೊಳ್ಳಲಾಗುತ್ತದೆ. ರಾಜ್ಯದ ಮುಖಂಡರು ಏನು ತೀರ್ಮಾನ ಕೈಗೊಳ್ಳುತ್ತಾರೋ, ಅದಕ್ಕೆ ಬದ್ಧರಾಗಿ ಮುಂದುವರಿಯಲಾಗುವುದು ಎಂದು ಜಿಲ್ಲಾ ಬಿಜೆಪಿ ಮುಖಂಡರು ಸ್ಪಷ್ಟಪಡಿಸಿದ್ದಾರೆ.