ಗುರಿ ಸಾಧಿಸಲು ದೃಢಸಂಕಲ್ಪ ಮತ್ತು ನಿರಂತರ ಪರಿಶ್ರಮ ಅಗತ್ಯ

ಗುರಿ ಸಾಧಿಸಲು ದೃಢಸಂಕಲ್ಪ ಮತ್ತು ನಿರಂತರ ಪರಿಶ್ರಮ ಅಗತ್ಯ
ಕೂಡಿಗೆ ಕೊಡಗು ಸೈನಿಕ ಶಾಲೆಯ 2026-27ನೇ ಸಾಲಿನ 20ನೇ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿಜೇತರು ಮತ್ತು ಅಧ್ಯಾಪಕ ವರ್ಗ. ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಸ್ಕ್ವಾಡ್ರನ್ ಲೀಡರ್ ದೀಪಕ್ ನಾಯಕ್, ಅಶೋಕ್ ಕೆಂಗಾರೆ ಮತ್ತಿತರರು ಇದ್ದರು.
Published on: 

ಕುಶಾಲನಗರ

ಜೀವನದಲ್ಲಿ ಕಠಿಣ ಗುರಿಗಳನ್ನು ಸಾಧಿಸಲು ದೃಢಸಂಕಲ್ಪ ಮತ್ತು ನಿರಂತರ ಪರಿಶ್ರಮ ಅತ್ಯಂತ ಅಗತ್ಯ ಎಂದು ಕೂಡಿಗೆ ಕೊಡಗು ಸೈನಿಕ ಶಾಲೆಯಪ್ರಭಾರ ಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ ಹೇಳಿದರು. ಸೈನಿಕ ಶಾಲೆ ಆವರಣದಲ್ಲಿ ಬುಧವಾರ ನಡೆದ 2026-27ನೇ ಸಾಲಿನ 20ನೇ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಸೈನಿಕ ಶಾಲೆಯಲ್ಲಿ ಲಭ್ಯವಿರುವ ಅವಕಾಶಗಳನ್ನು ವಿದ್ಯಾರ್ಥಿಗಳು ಸಮರ್ಥವಾಗಿ ಸದುಪಯೋಗಪಡಿಸಿಕೊಳ್ಳಬೇಕು. ಸ್ಪರ್ಧೆಯಲ್ಲಿ ಗೆಲ್ಲುವುದು ಅಥವಾ ಸೋಲುವುದು ಮುಖ್ಯವಲ್ಲ, ಬದಲಾಗಿ ಶಿಸ್ತು ಹಾಗೂ ಒಗ್ಗಟ್ಟಿನಿಂದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದೇ ಅತ್ಯಂತ ಶ್ಲಾಘನೀಯ. ಶಾಲೆಯಲ್ಲಿ ದೊರೆಯುವ ಪ್ರತಿ ಅವಕಾಶವೂ ಭವಿಷ್ಯವನ್ನು ರೂಪಿಸಿಕೊಳ್ಳಲು ನೆರವಾಗುತ್ತದೆ ಎಂದು ಅವರು ಕ್ರೀಡಾಪಟುಗಳ ಕ್ರೀಡಾಸ್ಫೂರ್ತಿಯನ್ನು ಕೊಂಡಾಡಿದರು. ಇದೇ ವೇಳೆ ಮುಂಬರುವ ದಕ್ಷಿಣ ವಲಯದ ಸ್ಪರ್ಧೆಗೆ ಆಯ್ಕೆಯಾದ ಅಥ್ಲೆಟ್‌ಗಳಿಗೆ ಶುಭ ಹಾರೈಸಿದರು.

ನಾಲ್ಕು ನಿಲಯಗಳ ನಡುವೆ ನಡೆದ ಈ ಬಾರಿಯ ವಾರ್ಷಿಕ ಕ್ರೀಡಾಕೂಟದಲ್ಲಿ ಸುಬ್ರೊತೊ ನಿಲಯ ಮತ್ತು ಕಟಾರಿ ನಿಲಯಗಳ ನಡುವೆ ತೀವ್ರ ರೋಮಾಂಚನಕಾರಿ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಸುಬ್ರೊತೊ ನಿಲಯ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟ 2026-27ರ ಸಮಗ್ರ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ಕ್ರೀಡಾಕೂಟದ ಅವಧಿಯಲ್ಲಿ ಹಲವು ಹೊಸ ದಾಖಲೆಗಳು ಸಹ ನಿರ್ಮಾಣಗೊಂಡವು.

ಹಿರಿಯ ಬಾಲಕಿಯರ ವಿಭಾಗದಲ್ಲಿ ದೀಪ್ತಿ ದೇವಿ, ಕಿರಿಯ ಬಾಲಕಿಯರ ವಿಭಾಗಲ್ಲಿ ಸಿಡಿಟಿ ಆನ್ವಿ, ಹಿರಿಯ ಬಾಲಕರ ವಿಭಾಗದಲ್ಲಿ ಪ್ರಜ್ವಲ್, ಕಿರಿಯ ಬಾಲಕರ ವಿಭಾಗದಲ್ಲಿ ಸುಧಾಂಶು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಿದರು.

ಸಮಾರಂಭದಲ್ಲಿ ಶಾಲೆಯ ಆಡಳಿತಾಧಿಕಾರಿ ಸ್ಕ್ವಾಡ್ರನ್ ಲೀಡರ್ ದೀಪಕ್ ನಾಯಕ್, ಕ್ರೀಡಾಕೂಟದ ಉಸ್ತುವಾರಿ ಶಿಕ್ಷಕ ಅಶೋಕ್ ಕೆಂಗಾರೆ, ಶೈಕ್ಷಣಿಕ ಹಾಗೂ ಆಡಳಿತ ಸಿಬ್ಬಂದಿ, ಎನ್‌ಸಿಸಿ ಪಿಐ ಸಿಬ್ಬಂದಿ, ದೈಹಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net