

ಗೋಣಿಕೊಪ್ಪ: ಚಂಗ್ರಾಂದಿ ಪತ್ತಲೋದಿಯ ಕಾರ್ಯಕ್ರಮದಲ್ಲಿ ಕೊಡವ ಸಂಸ್ಕೃತಿ ಕುರಿತು ಅರಿತುಕೊಳ್ಳಲು ಸಾಧ್ಯ ಎಂದು ವಕೀಲ ಜಮ್ಮಡ ಅಯ್ಯಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದಲ್ಲಿ ಸೋಮವಾರ ಆಯೋಜಿಸಿದ್ದ ಚಂಗ್ರಾಂದಿ ಪತ್ತಲೋದಿ ಪೈತಾಂಡ್ ನಮ್ಮೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಡವ ಸಂಸ್ಕೃತಿಯ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಲು ಮತ್ತು ಪ್ರತಿಭೆಗಳಿಗೆ ಅವಕಾಶ ಸಿಗುತ್ತದೆ. ಎಲ್ಲರೂ ಒಂದಾಗಿ ಸೇರಲು ಸಿಕ್ಕಿರುವ ಈ ಅವಕಾಶ ಬಳಸಿಕೊಂಡು ಕಲಾವಿದರು ಇನ್ನಷ್ಟು ಬೆಳೆಯಬೇಕೆಂದು ಕಿವಿಮಾತು ಹೇಳಿದರು.
ಅಂತಾರಾಷ್ಟ್ರೀಯ ಪರ್ವತಾರೋಹಿ ಜಮ್ಮಡ ಪ್ರೀತ್ ಅಯ್ಯಣ್ಣ ಮಾತನಾಡಿ, ನಾನು ಸೀರೆಯನ್ನೇ ಧರಿಸಿ ಹಿಮಾಲಯ ಪರ್ವತವಲ್ಲದೆ ಆಫ್ರಿಕಾ, ಯೂರೋಪ್, ಆಸ್ಟ್ರೇಲಿಯ ಖಂಡಗಳ ಅತಿ ಎತ್ತರದ ಶಿಖರಗಳನ್ನೇರಿದ್ದೇನೆ. ಸಾಧಿಸಬೇಕೆಂಬ ಛಲದ ಮುಂದೆ ವಯಸ್ಸು ನಗಣ್ಯ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರಿರುವುದನ್ನು ಗಮನಿಸಿದರೆ ಕೊಡವತಿಯರಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಎಷ್ಟೊಂದು ಗೌರವ ಹಾಗೂ ಅಭಿಮಾನವಿದೆ ಎಂಬುದು ತಿಳಿಯುತ್ತದೆ. ಮಹಿಳೆಯರೆಲ್ಲರೂ ಕೇವಲ ಅಡುಗೆ ಮನೆಗೆ ಸೀಮಿತವಾಗದೆ ತಮ್ಮ ಇಷ್ಟದ ಕ್ಷೇತ್ರದಲ್ಲಿ ಸಾಧನೆ ಮಾಡಿ ಎಂದು ಸಲಹೆ ನೀಡಿದರು.
ಸಮಾಜದ ಮಾಜಿ ಉಪಾಧ್ಯಕ್ಷ ಮಾಣೀರ ವಿಜಯ ನಂಜಪ್ಪ, ಚೆಟ್ಟಂಗಡ ವಿಜಯ ಕಾರ್ಯಪ್ಪ, ಶ್ರೀಮಂಗಲ ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪೆಮ್ಮಂಡ ಸಭಿತ ಕುಶಾಲಪ್ಪ, ಸಂಭ್ರಮ ಪೊಮ್ಮಕ್ಕಡ ಕೂಟದ ಸದಸ್ಯೆ ಅಜ್ಜಮಡ ಸ್ಮಿತ ರಂಜಿ, ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಮಾತನಾಡಿದರು.
ಶ್ರೀಮಂಗಲ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಸದಸ್ಯೆ ಚಟ್ಟಂಡ ಲತ ಚರ್ಮಣ, ಟಿ.ಶೆಟ್ಟಿಗೇರಿ ಕೊಡವ ಸಮಾಜದ ಖಜಾಂಚಿ ಚಂಗುಲಂಡ ಸತೀಶ್, ಸಾಂಸ್ಕೃತಿಕ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ, ಕಾರ್ಯದರ್ಶಿ ಕೋಟ್ರಮಡ ಸುಮಂತ್ ಮಾದಪ್ಪ, ಕೊಡವ ಸಮಾಜದ ಜಂಟಿ ಕಾರ್ಯದರ್ಶಿ ಬಾದುಮಂಡ ವಿಷ್ಣು ಕಾರ್ಯಪ್ಪ, ಕ್ರೀಡಾ ಕಾರ್ಯದರ್ಶಿ ತಡಿಯಂಗಡ ಶಮ್ಮಿ ಸುಬ್ಬಯ್ಯ, ನಿರ್ದೇಶಕರಾದ ಚಂಗುಲಂಡ ಅಶ್ವಿನಿ ಸತೀಶ್, ತೀತೀರ ಅನಿತ ಸುಬ್ಬಯ್ಯ, ಮಾಣೀರ ದೀಪಕ್, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೋಟ್ರಮಡ ರೇಶ್ಮ ಕಾರ್ಯಪ್ಪ, ಕಾರ್ಯದರ್ಶಿ ಕಳ್ಳಿಚಂಡ ದೀನ ಉತ್ತಪ್ಪ, ಸಂಭ್ರಮ ಪೊಮ್ಮಕ್ಕಡ ಕೂಟದ ಸದಸ್ಯೆ ಅಜ್ಜಮಡ ಸಾವಿತ್ರಿ ಉಪಸ್ಥಿತರಿದ್ದರು.
ಶ್ರೀಮಂಗಲ ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ವತಿಯಿಂದ ಕೊಡವಾಮೆಲ್ ಪಳೆಯಾಮೆರ ನಡ್ಪು ಸಾಂಸ್ಕೃತಿಕ ಕಾರ್ಯಕ್ರಮ ಮನಸೆಳೆಯಿತು.