ಕೊಡಗಿಗೆ ಸ್ಫೂರ್ತಿಯಾಗುವುದೇ ಪ್ರವಾಸೋದ್ಯಮ ನೀತಿ ?

ಕೊಡಗಿಗೆ ಸ್ಫೂರ್ತಿಯಾಗುವುದೇ ಪ್ರವಾಸೋದ್ಯಮ ನೀತಿ ?
ಕೊಡಗಿನ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿರುವ ಮಡಿಕೇರಿಯ ಅರಮನೆ
Published on: 

ಮಡಿಕೇರಿ

ಮಂಗಳೂರಿನಲ್ಲಿ ಈಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡ ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿ 2026 ಬೆಟ್ಟ-ಗುಡ್ಡಗಳ ನಿಸರ್ಗ ಸೌಂದರ್ಯದ ತವರೂರು ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಆಯಾಮ ಹಾಗೂ ಬಲ ತಂದುಕೊಡುವ ನಿರೀಕ್ಷೆ ಇಟ್ಟಿಕೊಳ್ಳಲಾಗಿದೆ.

ವಿಶೇಷವಾಗಿ ಕಾಫಿ ಮತ್ತು ಪ್ಲಾಂಟೇಶನ್ ಸರ್ಕ್ಯೂಟ್ ಅಭಿವೃದ್ಧಿಗೆ ಈ ನೀತಿಯಲ್ಲಿ ಆದ್ಯತೆ ನೀಡಲಾಗಿದೆ. ಇದರಿಂದ ಕೊಡಗಿನ ಪ್ರಮುಖ ಆಕರ್ಷಣೆಯಾಗಿರುವ ಹೋಂಸ್ಟೇಗಳು, ಎಸ್ಟೇಟ್ ವಾಕ್, ಪ್ಲಾಂಟೇಶನ್ ಪ್ರವಾಸೋದ್ಯಮ ಮತ್ತು ನೈಜ ಪರಿಸರಸ್ನೇಹಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಸರ್ಕಾರದಿಂದ ಆರ್ಥಿಕ ಹಾಗೂ ತಾಂತ್ರಿಕ ನೆರವು ಸಿಗಲಿದೆ. ಕೋಸ್ಟ್ ಟು ಘಾಟ್ಸ್ ಬ್ಲೂ-ಗ್ರೀನ್ ಸರ್ಕ್ಯೂಟ್ ಮೂಲಕ ಮಂಗಳೂರು-ಉಡುಪಿ ಕರಾವಳಿ ಭಾಗವನ್ನು ಕೊಡಗಿನ ಮಲೆನಾಡು ಪರಿಸರದೊಂದಿಗೆ ನೇರವಾಗಿ ಜೋಡಿಸಲಾಗುತ್ತದೆ. ಕರಾವಳಿಗೆ ಬರುವ ಪ್ರವಾಸಿಗರು ಸುಲಭವಾಗಿ ಕೊಡಗಿನ ಪಶ್ಚಿಮ ಘಟ್ಟಗಳ ಪ್ರಕೃತಿ ಸೌಂದರ್ಯ ಸವಿಯಲು ರಸ್ತೆ ಹಾಗೂ ಸಾರಿಗೆ ಸಂಪರ್ಕ ವ್ಯವಸ್ಥೆ ಸುಧಾರಿಸಲಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಕೊಡಗಿನ ಚಾರಣ, ವೈಲ್ಡ್ಲೈಫ್ ಹಾಗೂ ಸಾಹಸ ಕ್ರೀಡೆಗಳ ಉತ್ತೇಜನಕ್ಕೆ ಪ್ರತ್ಯೇಕ ಒತ್ತು ಸಿಗಲಿದೆ. ಸುಸ್ಥಿರ ಹಾಗೂ ಪರಿಸರ ಕಾಳಜಿಯ ಪ್ರವಾಸೋದ್ಯಮ ನಿಯಮಾವಳಿಗಳೊಂದಿಗೆ ಪ್ರವಾಸಿ ತಾಣಗಳನ್ನು ಮೂಲಸೌಕರ್ಯಗಳೊಂದಿಗೆ ಮೇಲ್ದರ್ಜೆಗೇರಿಸಲಾಗುತ್ತದೆ. ಪ್ರವಾಸೋದ್ಯಮ ಯೋಜನೆಗಳಿಗೆ ಉದ್ಯಮ ಮಾನ್ಯತೆ ನೀಡುವುದರ ಜತೆಗೆ, ಹೂಡಿಕೆ ಉತ್ತೇಜನಾ ವಲಯಗಳಲ್ಲಿ ಆಸ್ತಿ ತೆರಿಗೆ ವಿನಾಯಿತಿ ಹಾಗೂ ಏಕಗವಾಕ್ಷಿ ಅನುಮೋದನೆ ವ್ಯವಸ್ಥೆ ಜಾರಿಗೆ ಬರುವುದರಿಂದ ಈ ನೀತಿ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿ 2026 ಕೊಡಗಿನ ಪಾಲಿಗೆ ಪೂರಕವೇ ಆಗಿದ್ದರೂ ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಕಿತ್ತುಕೊಂಡAತಾಗಿದೆ. ಪ್ರವಾಸೋದ್ಯಮ ಎಂದೊಡನೆ ಕೊಡಗಿಗೆ ಬರುವ ಪ್ರವಾಸಿಗರು, ಇಲ್ಲಿನ ನಿಸರ್ಗ ಸೌಂದರ್ಯ, ಹೋಂ ಸ್ಟೇ, ರೆಸಾರ್ಟ್ ಹಾಗೂ ಉತ್ತಮ ಸಾರಿಗೆ ವ್ಯವಸ್ಥೆಗಳನ್ನು ಮನದಲ್ಲಿ ಹೊತ್ತು ಬರುತ್ತಾರೆ. ಆದರೆ ಕಸ್ತೂರಿ ರಂಗನ್ ವರದಿಯ ಪರಿಣಾಮ ಕೊಡಗಿನಲ್ಲಿ ಯಾವುದೇ ಕಾಮಗಾರಿಯನ್ನಾಗಲಿ ರಸ್ತೆಗಳನ್ನಾಗಲಿ ಮಾಡುವ ಹಾಗೆ ಇಲ್ಲಿ. ಪ್ರವಾಸಿಗರು ತಂಗುವ ಹೋಂ ಸ್ಟೇ ಹಾಗೂ ರೆಸಾರ್ಟ್ಗಳನ್ನು ಮಾಡುವಂತಿಲ್ಲ. ಮೊದಲು ಈ ವರದಿಯನ್ನು ರದ್ದುಗೊಳಿಸಿ ಇಲ್ಲಿನ ನಿವಾಸಿಗಳ ಬದುಕು ಹಸನಾಗಿಸಲು ಕ್ರಮ ಕೈಗೊಳ್ಳಬೇಕು.

ದೇವರಾಜ್, ಪ್ರಾಂಶುಪಾಲ, ಕಾವೇರಿ ಕಾಲೇಜು, ಶನಿವಾರಸಂತೆ

ಕಾಫಿ ನಾಡೆಂದೇ ಪ್ರಸಿದ್ಧಿಯಾಗಿರುವ ಕೊಡಗು ತನ್ನ ವಿಶಿಷ್ಟವಾದ ಆಚಾರ-ವಿಚಾರ, ಜಾನಪದ ಕಲೆ, ಸಂಸ್ಕೃತಿ, ಪರಂಪರೆ, ಜನಜೀವನ ಹಾಗೂ ಪ್ರಕೃತಿ ರಮಣೀಯತೆಯಿಂದ ವಿಶಿಷ್ಠ ಸ್ಥಾನಮಾನ ಪಡೆಯುವುದರೊಂದಿಗೆ ಜನರ ಆಕರ್ಷಣೆಯ ಕೇಂದ್ರವಾಗಿದೆ. ಪ್ರವಾಸೋದ್ಯಮದಿಂದ ಮೂಲ ಸೌಕರ್ಯಗಳಲ್ಲಿ ಒಂದಾದ ರಸ್ತೆಗಳು ಅಭಿವೃದ್ಧಿಯಾಗುತ್ತದೆ. ಪ್ರವಾಸಿ ಕೇಂದ್ರಗಳು, ಹೋಂ ಸ್ಟೇಗಳು, ಸಾರಿಗೆ ವ್ಯವಸ್ಥೆ, ಹೋಟೆಲ್, ಉದ್ಯಮ ಇತ್ಯಾದಿಗಳು ಅಭಿವೃದ್ಧಿ ಹೊಂದುವ ಸಾಧ್ಯತೆ ಇದೆ. ಸ್ಥಳೀಯ ಉದ್ಯಮಿಗಳಿಗೆ ಹಾಗೂ ಸ್ಥಳೀಯರಿಗೆ ಸ್ವಯಂ ಉದ್ಯೋಗದ ಅವಕಾಶಗಳು ಸಿಗುತ್ತದೆ.

ಪವಿತ್ರ ಅಚ್ಚಪ್ಪ, ಶಿಕ್ಷಕಿ, ವಿರಾಜಪೇಟೆ

ಕೊಡಗಿನ ದೃಷ್ಟಿಯಿಂದ ಈ ನೀತಿ ಪ್ರವಾಸೋದ್ಯಮವನ್ನು ಹೆಚ್ಚು ಸಂಘಟಿತವಾಗಿ ಅಭಿವೃದ್ಧಿಪಡಿಸುವ ಅವಕಾಶ ನೀಡಬಹುದು. ಪ್ರವಾಸಿ ತಾಣಗಳಿಗೆ ಉತ್ತಮ ಸಂಪರ್ಕ, ಪಾರ್ಕಿಂಗ್, ಶೌಚಾಲಯ, ಕುಡಿಯುವ ನೀರು, ಮಾಹಿತಿ ಕೇಂದ್ರಗಳAತಹ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ಸಿಗಬಹುದು.

ಸ್ಥಳೀಯ ಕುಟುಂಬಗಳು ನಡೆಸುವ ಹೋಂಸ್ಟೇ, ಆಹಾರ, ಮಾರ್ಗದರ್ಶಕ ಸೇವೆ, ಪ್ರವಾಸಿ ಸಾರಿಗೆ ಮತ್ತು ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಈ ನೀತಿಯಲ್ಲಿ ಕಾಫಿ ಮತ್ತು ಪ್ಲಾಂಟೇಷನ್ ಸರ್ಕ್ಯೂಟ್ ಹಾಗೂ ಪಶ್ಚಿಮ ಘಟ್ಟ ಇಕೋ ಮತ್ತು ಅಡ್ವೆಂಚರ್ ಸರ್ಕ್ಯೂಟ್ ಮುಂತಾದ ಪರಿಕಲ್ಪನೆಗಳಿವೆ.

ಎಂ.ಡಿ. ಲಾಲು, ಗ್ರಾಮ ಸಹಾಯಕ, ಯವಕಪಾಡಿ

500 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿರುವ ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿ 2026 ಮೂಲಸೌಕರ್ಯ ವೃದ್ಧಿ, ಖಾಸಗಿ ಹೂಡಿಕೆ ಆಕರ್ಷಣೆ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಸುವಲ್ಲಿ ಮೈಲಿಗಲ್ಲಾಗಲಿದೆ. ಈ ನೀತಿ ಜಾರಿಗೆ ಬರುವುದರಿಂದ ಕೊಡಗು ಕೇವಲ ಸೀಸನಲ್ ಪ್ರವಾಸಿ ತಾಣವಾಗಿ ಉಳಿಯದೆ, ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುವ, ಸ್ಥಳೀಯ ಆರ್ಥಿಕತೆಗೆ ಶಕ್ತಿ ತುಂಬುವ ಪ್ರಮುಖ ಶಕ್ತಿ ಕೇಂದ್ರವಾಗಿ ಹೊರಹೊಮ್ಮುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಡಾ. ಮಂತರ್ ಗೌಡ, ಮಡಿಕೇರಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net