

ಮಡಿಕೇರಿ
ಕರಾವಳಿಯ ಪ್ರಮುಖ ಜಾನಪದ ಕ್ರೀಡೆಯಾದ ಕಂಬಳದ ಕೋಣಗಳ ದಿಬ್ಬಣ ಕೊಡಗಿಗೂ ಆಗಮಿಸಲಿದೆ. ಇತಿಹಾಸ ಪ್ರಸಿದ್ಧ ಮೈಸೂರು ದಸರಾದಲ್ಲಿ ಇದೇ ಮೊದಲ ಬಾರಿಗೆ ಕಂಬಳವನ್ನು ಪರಿಚಯಿಸಲಾಗುತ್ತಿದ್ದು, ಇಲ್ಲಿ ಪಾಲ್ಗೊಳ್ಳಲಿರುವ ಕೋಣಗಳು ಮತ್ತು ಅದರ ಪರಿಚಾರಕರು ಜಿಲ್ಲೆಯ ಮೂಲಕ ಹಾದುಹೋಗಲಿದ್ದಾರೆ. ಈ ಸಂದರ್ಭ ಅವರಿಗೆಲ್ಲಾ ವಿಶ್ರಾಂತಿಗೆ ಕುಶಾಲನಗರದಲ್ಲಿ ವ್ಯವಸ್ಥೆ ಮಾಡಲಾಗುತ್ತಿದ್ದು, ಇದೇ ವೇಳೆ ಕಂಬಳ ಮತ್ತು ಕಂಬಳ ಕೋಣಗಳ ಬಗ್ಗೆ ಅರಿತುಕೊಳ್ಳಲು ಜಿಲ್ಲೆಯ ಜನತೆಗೆ ಅವಕಾಶ ಮಾಡಿಕೊಡಲಾಗಿದೆ.
ಐತಿಹಾಸಿಕ ಮೈಸೂರು ದಸರಾ ಮಹೋತ್ಸವದದಲ್ಲಿ ಈ ಬಾರಿಯ ಪ್ರಮುಖ ಆಕರ್ಷಣೆಯಾಗಿ ಅ. ೧೮ ಮತ್ತು ೧೯ ರಂದು ಮೈಸೂರು ಕಂಬಳ ಸ್ಪರ್ಧೆ ಆಯೋಜಿಸಲಾಗಿದೆ. ಕರಾವಳಿ ಭಾಗದ ಈ ಶ್ರೀಮಂತ ಜಾನಪದ ಕಲೆಯಲ್ಲಿ ಕೋಣಗಳೇ ಪ್ರಮುಖ ಆಕರ್ಷಣೆಯಾಗಿದ್ದು, ಇವುಗಳ ಅದ್ದೂರಿ ಜೀವನ ಕ್ರಮ, ಕೋಣಗಳನ್ನು ಸಾಕಲು ತಗಲುವ ವೆಚ್ಚ ಅಚ್ಚರಿ ತರುವ ವಿಷಯವಾಗಿದೆ. ಮೈಸೂರು ದಸರಾದ ಕಂಬಳದಲ್ಲಿ ಪಾಲ್ಗೊಳ್ಳುವ ಈ ಕೋಣಗಳು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ಅಂಗಳದಲ್ಲಿ ವಿಶೇಷ ಪೂಜೆಯ ನಂತರ ಅ. ೧೭ರ ಬೆಳಗ್ಗೆ ಹೊರಡಲಿವೆ.
ರಾಷ್ಟಿçÃಯ ಹೆದ್ದಾರಿ ೨೭೫ರ ಮುಖಾಂತರ ಪುತ್ತೂರಿನಿಂದ ಮೈಸೂರಿಗೆ ೨೦೪ ಕಿಮೀ ಆಗುತ್ತದೆ. ಇಷ್ಟು ದೀರ್ಘಾವಧಿಯ ಪ್ರಯಾಣದಲ್ಲಿ ಮಧ್ಯದಲ್ಲಿ ಕೋಣಗಳಿಗೆ ವಿಶ್ರಾಂತಿಯ ಅಗತ್ಯವಿರುತ್ತದೆ. ಹಾಗಾಗಿ ಪುತ್ತೂರಿನಿಂದ ಸುಮಾರು ೯೦ ಕಿಮೀ ದೂರದ ಮಡಿಕೇರಿಯಲ್ಲಿ ಇದಕ್ಕಾಗಿ ವ್ಯವಸ್ಥೆ ಮಾಡಲು ಮೊದಲು ಸಂಘಟಕರು ಚಿಂತನೆ ನಡೆಸಿದ್ದರು. ಆದರೆ ಇಲ್ಲಿ ಇದಕ್ಕೆ ಅಗತ್ಯವಿರುವ ಜಾಗದ ಸಮಸ್ಯೆ ಇರುವುದರಿಂದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಸಲಹೆ ಹಿನ್ನೆಲೆಯಲ್ಲಿ ಪುತ್ತೂರಿನಿಂದ ೧೧೬ ಕಿಮೀ ದೂರದ ಕುಶಾಲನಗರವನ್ನು ಅಂತಿಮಗೊಳಿಸಲಾಗಿದೆ.
ಸAಘಟಕರ ಮಾಹಿತಿ ಪ್ರಕಾರ ಸುಮಾರು ೧೬೦ ಜೋಡಿಗಳ ೩೨೦-೩೬೦ರಷ್ಟು ಕೋಣಗಳು, ಇವುಗಳ ಮಾಲೀಕರು, ಪರಿಚಾರಕರು, ಕಂಬಳದ ಓಟಗಾರರು ಸೇರಿದಂತೆ ೨ ಸಾವಿರ ಜನರು ಹಾಗೂ ೭೫೦ಕ್ಕೂ ಅಧಿಕ ವಾಹನಗಳು ಏಕಕಾಲದಲ್ಲಿ ಪುತ್ತೂರಿನಿಂದ ಹೊರಡಲಿವೆ. ರಾಷ್ಟಿçÃಯ ಹೆದ್ದಾರಿ ೨೭೫ ರ ಮೂಲಕ ಆಗಮಿಸಲಿರುವ ಈ ಮೈಸೂರು ಕಂಬಳದ ದಿಬ್ಬಣಕ್ಕೆ ತುಳುವರ ಒಕ್ಕೂಟದ ವತಿಯಿಂದ ಮಡಿಕೇರಿ ಸಮೀಪ ಜಿಲ್ಲೆಗೆ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗುತ್ತದೆ. ನಂತರ ಕುಶಾಲನಗರಕ್ಕೆ ತೆರಳಲಿದ್ದು ಅಲ್ಲಿ ೨-೩ ಗಂಟೆ ಕಾಲ ವಿಶ್ರಾಂತಿ ಪಡೆಯಲಾಗುತ್ತದೆ.
ವಿಶ್ರಾಂತಿ ಪಡೆಯುವ ಸಂದರ್ಭ ಎಲ್ಲಾ ಕೋಣಗಳನ್ನೂ ವಾಹನಗಳಿಂದ ಕೆಳಕ್ಕೆ ಇಳಿಸಲಾಗುತ್ತದೆ. ನಂತರ ಅವುಗಳಿಗೆ ಆಹಾರ, ನೀರು ಕೊಡಲಾಗುತ್ತದೆ. ಹೆಚ್ಚಿನ ಬಿಸಿಲು ಇದ್ದರೆ ಕೋಣಗಳ ಶರೀರಕ್ಕೆ ತಣ್ಣಗಿನ ನೀರು ಚಿಮುಕಿಸಲಾಗುತ್ತದೆ. ಕೋಣಗಳ ಜತೆಗೆ ಆಗಮಿಸಿರುವವರು ಇದೇ ವೇಳೆಯಲ್ಲಿ ತಮ್ಮ ಊಟ ಮತ್ತಿತರ ಕಾರ್ಯಗಳನ್ನು ಮುಗಿಸಿಕೊಳ್ಳಲಿದ್ದಾರೆ. ಈ ಅವಧಿಯಲ್ಲಿ ಕೊಡಗಿನ ಜನರಿಗೆ ಕಂಬಳ ಮತ್ತು ಕಂಬಳದ ಕೋಣಗಳ ಬಗ್ಗೆ ಮಾಹಿತಿ ನೀಡಲು ಬಳಸಿಕೊಳ್ಳಲಾಗುತ್ತಿದೆ.
ಮೈಸೂರಿಗೆ ತೆರಳಲಿರುವ ಕಂಬಳದ ಕೋಣಗಳ ವಿಶ್ರಾಂತಿಗಾಗಿ ಕುಶಾಲನಗರದಲ್ಲಿ ರಾಷ್ಟಿçÃಯ ಹೆದ್ದಾರಿ ಪಕ್ಕದಲ್ಲೇ ಇರುವ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನವನ್ನು ಗುರುತಿಸಲಾಗಿದೆ. ರಾಜ್ಯ ಕಂಬಳ ಸಮಿತಿ ಪ್ರತಿನಿಧಿಗಳು, ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಈಗಾಗಲೇ ಈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಂಬAಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೋಣಗಳು ಮತ್ತು ಅವುಗಳ ಜತೆ ಆಗಮಿಸುವ ಸುಮಾರು ೨ ಸಾವಿರ ಜನರಿಗೆ ಊಟ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಡಲು ಸಮಿತಿಗಳನ್ನು ರಚಿಸಲಾಗಿದ್ದು, ಅವುಗಳು ಈಗಾಗಲೇ ಕಾರ್ಯೋನ್ಮುಖವಾಗಿವೆ.
ಮೈಸೂರು ದಸರಾ ಅಂಗವಾಗಿ ನಡೆಯುತ್ತಿರುವ ಕಂಬಳದಲ್ಲಿ ಪಾಲ್ಗೊಳ್ಳಲಿರುವ ಕೋಣಗಳು ಮತ್ತು ಅವುಗಳ ಜತೆಯಲ್ಲಿ ಆಗಮಿಸುವವರಿಗೆ ವಿಶ್ರಾಂತಿ ಸಂದರ್ಭ ಮಾಡಬೇಕಿರುವ ವ್ಯವಸ್ಥೆ ಬಗ್ಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ಕುಶಾಲನಗರದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿ ಪ್ರಸಾದ್ ಶೆಟ್ಟಿ, ಮುರಳೀಧರ ರೈ, ಚಂದ್ರಹಾಸ ಶೆಟ್ಟಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕುಶಾಲನಗರ ನಗರ ಯೋಜನಾ ಸಮಿತಿ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಪುರಸಭೆ ಮುಖ್ಯಾಧಿಕಾರಿ ಟಿ.ಎಸ್. ಗಿರೀಶ್, ಬಂಟರ ಸಂಘ, ವಿಶ್ವ ತುಳು ಒಕ್ಕೂಟ ಹಾಗೂ ತುಳುವೆರೆ ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದು ಹಲವು ಸಲಹೆಗಳನ್ನು ನೀಡಿದರು.
ಕಂಬಳ ಕೇವಲ ಕ್ರೀಡೆಯಲ್ಲ, ನಾಡಿನ ಸಂಸ್ಕೃತಿ ಮತ್ತು ಕೃಷಿಕರ ಜಾನಪದ ಹೆಮ್ಮೆಯಾಗಿದೆ. ಕಂಬಳ ಮೈಸೂರು ದಸರಾ ಸಂದರ್ಭದಲ್ಲಿ ನಡೆಯುವುದರಿಂದ ಈ ಕ್ರೀಡೆ ಜಾಗತಿಕ ಮಟ್ಟದಲ್ಲಿ ಗುರುತಿಸಲು ಅವಕಾಶವಾಗುತ್ತದೆ. ಕಂಬಳದ ಪ್ರಮುಖ ಆಕರ್ಷಣೆಯಾದ ಕೋಣಗಳು ದಕ್ಷಿಣಕನ್ನಡದಿಂದ ಕೊಡಗಿನ ಮೂಲಕ ಸಾಗಲಿವೆ. ಈ ಸಂದರ್ಭ ಅವುಗಳಿಗೆ ಕುಶಾಲನಗರದಲ್ಲಿ ವಿಶ್ರಾಂತಿ ನೀಡಲಾಗುತ್ತದೆ. ವೈಶಿಷ್ಟö್ಯಪೂರ್ಣ ಕಂಬಳದ ಕೋಣಗಳ ಬಗ್ಗೆ ತಿಳಿದುಕೊಳ್ಳಲು ಕೊಡಗಿನವರಿಗೆ ಇದು ಉತ್ತಮ ಅವಕಾಶವಾಗಿದೆ.
ಅಶೋಕ್ ಕುಮಾರ್ ರೈ, ಪುತ್ತೂರು ಶಾಸಕ
ಕAಬಳದ ಕೋಣಗಳನ್ನು ಅಲ್ಲಿಯವರು ತಮ್ಮ ಮಕ್ಕಳಂತೆಯೇ ಸಾಕುತ್ತಾರೆ. ಮೈಸೂರು ದಸರಾ ಅಂಗವಾಗಿ ನಡೆಯಲಿರುವ ಕಂಬಳದಲ್ಲಿ ಪಾಲ್ಗೊಳ್ಳಲಿರುವ ಕಂಬಳದ ಕೋಣಗಳು ಕೊಡಗಿನ ಮೂಲಕ ಸಾಗುವ ಸಂದರ್ಭ ಕುಶಾಲನಗರದಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಅಗತ್ಯವಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡಲಾಗುತ್ತದೆ. ಇದರ ಜತೆಗೆ ಸ್ಥಳೀಯರು ಈ ಕೋಣಗಳನ್ನು ನೋಡುವ, ಅವುಗಳ ಫೋಟೋ ತೆಗೆಯುವ, ಮಾಹಿತಿ ಪಡೆದುಕೊಳ್ಳಲು ಕೂಡ ಅವಕಾಶ ಕಲ್ಪಿಸಲಾಗುತ್ತದೆ.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ
ಕAಬಳದ ಕೋಣಗಳು ದಕ್ಷಿಣಕನ್ನಡದಿಂದ ಮೈಸೂರಿಗೆ ತೆರಳುವ ಸುದೀರ್ಘ ಹಾದಿಯಲ್ಲಿ ೨-೩ ಗಂಟೆಗಳ ಕಾಲ ವಿಶ್ರಾಂತಿ ಪಡೆದುಕೊಳ್ಳುವುದು ತೀರಾ ಅಗತ್ಯ. ಹಾಗಾಗಿ ಕುಶಾಲನಗರದಲ್ಲಿ ವಿಶ್ರಾಂತಿ ನೀಡಲಾಗುತ್ತಿದ್ದು, ಈ ಅವಧಿಯಲ್ಲಿ ಕೋಣಗಳಿಗೆ ಹುಲ್ಲು ತಿನ್ನಿಸುವುದು, ನೀರು ಕುಡಿಸುವುದು, ಕೋಣಗಳ ಜತೆಯಲ್ಲಿ ಬಂದವರಿಗೆ ಊಟಕ್ಕೆ ಅನುಕೂಲ ಮಾಡಿಕೊಳ್ಳಲಾಗುತ್ತದೆ. ಸುಮಾರು ೩೨೦-೪೦೦ರಷ್ಟು ಕೋಣಗಳು ಆಗಮಿಸಲಿದ್ದು, ಇವುಗಳನ್ನು ಹೀಗೆ ಒಟ್ಟಿಗೆ ನೋಡುವ ಅವಕಾಶ ಯಾವಾಗಲೂ ಸಿಗುವುದಿಲ್ಲ.
ಬೆಳಪು ದೇವಿಪ್ರಸಾದ್ ಶೆಟ್ಟಿ, ಅಧ್ಯಕ್ಷ, ರಾಜ್ಯ ಕಂಬಳ ಸಮಿತಿ
ಕರಾವಳಿಯ ಹೆಮ್ಮೆಯ ಜಾನಪದ ಕ್ರೀಡೆಯಾದ ಕಂಬಳದ ಕೋಣಗಳು ನಮ್ಮ ಊರಿನ ಮೂಲಕ ಸಾಗಿಹೋಗುವಾಗ ಅವುಗಳಿಗೆ ಗೌರವಪೂರ್ಣ ಆತಿಥ್ಯ ನೀಡುವುದು ನಮ್ಮೆಲ್ಲರ ಕರ್ತವ್ಯವೂ ಆಗಿದೆ. ಈ ಅವಕಾಶ ಬಳಸಿಕೊಂಡು ನಮ್ಮೂರಿನ ಜನರಿಗೆ ಕಂಬಳ ಮತ್ತು ಕಂಬಳ ಕೋಣಗಳ ಬಗ್ಗೆ ಮಾಹಿತಿ ಕೊಡಲು ಸೂಕ್ತ ವ್ಯವಸ್ಥೆಯನ್ನೂ ಮಾಡಿಕೊಡಲಾಗುವುದು.
ವಿ.ಪಿ. ಶಶಿಧರ್, ಅಧ್ಯಕ್ಷ, ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ