ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಅಗತ್ಯ

ಹೈಕೋರ್ಟ್‌ನ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ ಹೇಳಿಕೆ
ರೋಟರಿ ಹೇಮಾವತಿ ಕೊಡ್ಲಿಪೇಟೆ
ರೋಟರಿ ಹೇಮಾವತಿ ಕೊಡ್ಲಿಪೇಟೆ ವತಿಯಿಂದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆರೋಗ್ಯ ತಪಾಸಣೆ ಉಚಿತ ಶಿಬಿರ ಆಯೋಜಿಸಲಾಗಿತ್ತು.
Published on: 

ಶನಿವಾರಸಂತೆ: ರೋಟರಿ ಹೇಮಾವತಿ ಕೊಡ್ಲಿಪೇಟೆ ವತಿಯಿಂದ ಕೊಡ್ಲಿಪೇಟೆಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆರೋಗ್ಯ ತಪಾಸಣಾ ಉಚಿತ ಶಿಬಿರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಹೈಕೋರ್ಟ್‌ನ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ ಮಾತನಾಡಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲಿಯೇ ಗುರುತಿಸಿಕೊಳ್ಳಬೇಕು. ಸಂಕೋಚವಿಲ್ಲದೆ ವೈದ್ಯರೊಂದಿಗೆ ತಮ್ಮ ಆರೋಗ್ಯ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.

ರೋಟರಿ ಸಹಾಯಕ ಪ್ರಾಂತಪಾಲ ವಸಂತ್ ಕುಮಾರ್, ಸದಸ್ಯ ಡಾ.ಉದಯ್ ಕುಮಾರ್, ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ರೋಟರಿ ಹೇಮಾವತಿ ಅಧ್ಯಕ್ಷ ಭಾನುಪ್ರಕಾಶ್, ಕಾರ್ಯದರ್ಶಿ ಮೋಹನ್ ಕುಮಾರ್, ಸಿದ್ದೇಶ್, ಮಣಿಶಂಕರ್, ಎಚ್.ಎಂ.ದಿವಾಕರ್, ಕೊಡ್ಲಿಪೇಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಧನಿಕಾ, ವೈದ್ಯರಾದ ಡಾ.ಮಹೇಶ್, ಡಾ.ನಂದನ್, ಡಾ.ಐಶ್ವರ್ಯಾ, ಡಾ.ಸ್ಫೂರ್ತಿ ಇದ್ದರು.

ಶಿಬಿರದಲ್ಲಿ ಕಣ್ಣಿನ ತಪಾಸಣೆ ನಡೆಸಿ ಅಗತ್ಯವಿದ್ದವರಿಗೆ ಕನ್ನಡಕ ವಿತರಿಸಲಾಯಿತು. 20 ಜನರು ರಕ್ತದಾನ ಮಾಡಿದರು. ಜೀವ ಸಂಜೀವಿನಿ ಬ್ಲಡ್ ಬ್ಯಾಂಕ್‌ನ ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net