

ಸುಂಟಿಕೊಪ್ಪ: ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಸುಂಟಿಕೊಪ್ಪಕ್ಕೆ ವಿಶೇಷವಾದ ಸ್ಥಾನ ಇದೆ ಎಂದು ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಎಫ್.ಸಬಾಸ್ಟಿನ್ ಹೇಳಿದರು.
ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಅನೇಕ ಸಾಹಿತಿಗಳು ಸುಂಟಿಕೊಪ್ಪದಲ್ಲಿ ಓಡಾಡಿದ್ದು, ಹರದೂರು ಗ್ರಾಮದಲ್ಲಿರುವ ಗುಂಡುಗುಟ್ಟಿ ಮಂಜನಾಥಯ್ಯ ಅವರ ಬಂಗಲೆಯಲ್ಲಿ ಉಳಿದು ಸಾಹಿತ್ಯ ರಚನೆ ಮಾಡಿ ತೆರಳುತ್ತಿದ್ದರು ಎಂದು ಸಬಾಸ್ಸ್ಟಿನ್ ಸ್ಮರಿಸಿದರು.
ಹಾಗೇಯೇ ಇಂದಿನ ಕಾಲಘಟ್ಟದಲ್ಲಿ ಸುಂಟಿಕೊಪ್ಪಕ್ಕೆ ಸೇರಿದವರಾದ ಹಿರಿಯ ಸಾಹಿತಿ ಅಬ್ದುಲ್ ರಶೀದ್ ಮತ್ತು ಪ್ರಸ್ತುತ ಶಿಕ್ಷಕರಾಗಿರುವ ಸತೀಶ್ ಕಾಜೂರು ಅವರ ಕವಿತೆಗಳು ವಿಶ್ವವಿದ್ಯಾಲಯ ಮಟ್ಟದ ಕನ್ನಡ ಪಠ್ಯಗಳಲ್ಲಿ ಸೇರಿರುವುದು ಅಭಿಮಾನದ ಸಂಗತಿ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸ್ಪಷ್ಟ ಪದ ಬಳಕೆಯನ್ನು ಮಾಡುತ್ತಿರುವುದು ಕನ್ನಡ ಉಳಿವಿಗೆ ಸಹಕಾರಿ. ಇಂಗ್ಲಿಷ್ ಮಾಧ್ಯಮವನ್ನು ಭಾಷೆಯಾಗಿ ಬಳಸಿಕೊಂಡು ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಬೇಕೆ ಹೊರತು, ಕನ್ನಡವನ್ನು ನಿರ್ಲಕ್ಷ್ಯ ಮಾಡುವಂತಾಗಬಾರದು ಎಂದು ಕಿವಿಮಾತು ಹೇಳಿದರು.
ಶಿಕ್ಷಕ ಹಾಗೂ ಸಾಹಿತಿ ಸತೀಶ್ ಕಾಜೂರು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ಕನ್ನಡ ರಾಜ್ಯೋತ್ಸವದ ಹುಟ್ಟು, ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿದ ಅವರು, ಬ್ರಿಟಿಷರು ತಮ್ಮನ್ನು ಒಡೆದು ಆಳುವ ನೀತಿಯ ಹಿನ್ನೆಲೆಯಲ್ಲಿ ವಿವಿಧ ಭಾಷೆಗಳನ್ನು ಆಡುವ ಜನರನ್ನು ಒಟ್ಟಿಗೆ ಪರಸ್ಪರ ಮಾತನಾಡದಂತೆ ಮಾಡಿದರು. ಈ ಹುನ್ನಾರಗಳ ವಿರುದ್ಧ ಸಿಡಿದ್ದೆದ ಜನ ಹೋರಾಟ ನಡೆಸಿದ ಪರಿಣಾಮ ಭಾರತದಲ್ಲಿ ಮೊದಲು ತೆಲುಗು ಮಾತನಾಡುವ ಜನ ಒಂದೆಡೆ ಸೇರಿ ಆಂಧ್ರಪ್ರದೇಶವನ್ನು ರಚಿಸಿಕೊಂಡರು. ಇದರಿಂದ ಸ್ಫೂರ್ತಿ ಪಡೆದ ಕನ್ನಡ ಜನರೆಲ್ಲ ಒಂದಾಗಿ ಮೈಸೂರು ರಾಜ್ಯವನ್ನು ರಚಿಸಿಕೊಂಡರು. ಮುಂದೆ ಕರ್ನಾಟಕ ಎಂದು ಹೆಸರಾಯಿತು. ಕನ್ನಡದಲ್ಲಿ ಮಾತನಾಡಿ ಕನ್ನಡದಲ್ಲಿ ಓದಿ ಬರೆದು ನಾವು ಕನ್ನಡ ಮತ್ತು ಕರ್ನಾಟಕಕ್ಕೆ ಗೌರವ ತೋರಿಸಬೇಕೆಂದು ಕರೆ ನೀಡಿದರು.
ಶಾಲಾ ಮುಖ್ಯಶಿಕ್ಷಕ ಕುಮಾರ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರಭಾರ ಉಪಪ್ರಾಂಶುಪಾಲೆ ಶಾಂತಾ ಹೆಗ್ಡೆ, ದೈಹಿಕ ಶಿಕ್ಷಣ ಶಿಕ್ಷಕ ಪಿ.ಇ.ನಂದ ಮಾತನಾಡಿದರು. ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷ ಎಚ್.ಎಸ್.ರವಿ, ಗೌರವಾಧ್ಯಕ್ಷ ಎಚ್.ಯು.ರಫೀಕ್ ಖಾನ್, ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷೆ ಲೀಲಾವತಿ ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.