

ಮಡಿಕೇರಿ
ಮಡಿಕೇರಿ ದಸರಾ ಜನೋತ್ಸವ 2026ರ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯಿಂದಲೇ ಆರಂಭವಾದ ದಶಮಂಟಪಗಳ ಅದ್ಧೂರಿ ಮೆರವಣಿಗೆಗೆ ಗುರುವಾರ ಬೆಳಗ್ಗೆ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವುದರೊಂದಿಗೆ ಸಂಭ್ರಮದ ತೆರೆ ಬಿದ್ದಿದೆ. ಇದಕ್ಕೂ ಮೊದಲು 9 ದಿನಗಳ ಕಾಲ ನಡೆದ ವೈವಿಧ್ಯಮಯ ಕಾರ್ಯಕ್ರಮಗಳು ದಸರಾಕ್ಕೆ ವಿಶಿಷ್ಟ ಕಳೆ ನೀಡಿದ್ದವು. ಕೊನೆಯ ದಿನದ ಶೋಭಾಯಾತ್ರೆಯನ್ನು ಜಿಲ್ಲೆ ಮಾತ್ರವಲ್ಲದೆ ರಾಜ್ಯ, ಹೊರರಾಜ್ಯದ ಪ್ರವಾಸಿಗರೂ ಕಣ್ತಂಬಿಸಿಕೊಂಡು ಆನಂದಿಸಿದರು.
ದಶಮಂಟಪಗಳ ಮೆರವಣಿಗೆ:
ನಗರದ ವಿವಿಧ ಭಾಗಗಳಲ್ಲಿ ಇರುವ ಪ್ರಮುಖ ದೇವಾಲಯಗಳ ಮಂಟಪ ಸಮಿತಿಗಳ ವತಿಯಿಂದ ಒಂದಕ್ಕಿಂತ ಒಂದು ಪೈಪೋಟಿ ನೀಡುವ ರೀತಿಯಲ್ಲಿ ಮಂಟಪಗಳನ್ನು ನಿರ್ಮಿಸಲಾಗಿತ್ತು. ವಿದ್ಯುತ್ ದೀಪಗಳ ಅಲಂಕಾರ, ಪೌರಾಣಿಕ ಕಥಾ ಹಂದರ ಹೊಂದಿರುವ ದೇವಾನುದೇವತೆಗಳ ಪ್ರತಿಕೃತಿಗಳ ಚಲನೆ, ಆಧುನಿಕ ಸ್ಟುಡಿಯೋ ತಂತ್ರಜ್ಞಾನ, ಬೆಳಕಿನ ಚಿತ್ತಾರ, ಡಿಜೆ ಸಂಗೀತ ಮತ್ತು ಧ್ವನಿವರ್ಧಕದ ವ್ಯವಸ್ಥೆ ಗಮನ ಸೆಳೆದವು.
ಅದ್ಧೂರಿ ಮಂಟಪಗಳು:
ಪ್ರತಿ ಮಂಟಪಗಳನ್ನೂ ಸುಮಾರು 15-80 ಲಕ್ಷ ರೂ. ತನಕ ವೆಚ್ಚ ಮಾಡಿ ಮೆರವಣಿಗೆಗಾಗಿ ನಿರ್ಮಿಸಲಾಗಿತ್ತು. ಒಂದೊಂದು ದೇವಾಲಯ ಸಮಿತಿಯಲ್ಲೂ 300-500 ಮಂದಿ ಸದಸ್ಯರು ಕಳೆದ ಒಂದು ತಿಂಗಳಿನಿಂದ ಮಂಟಪಗಳ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮಿಸಿದ್ದರು. ಮಡಿಕೇರಿ ದಸರಾ ಆಚರಣಾ ಸಮಿತಿಗೆ ಸರ್ಕಾರ ಈ ಬಾರಿ 2 ಕೋಟಿ ರೂ. ಅನುದಾನ ಕೊಟ್ಟಿದ್ದು, ದಶಮಂಟಪಗಳಿಗೂ ಒಂದಿಷ್ಟು ಹಣ ನೀಡಲಾಗುತ್ತಿದೆ. ಉಳಿದ ಹಣವನ್ನು ದಾನಿಗಳಿಂದ ಸಂಗ್ರಹಿಸಿ ಕಣ್ಮನ ಸೆಳೆಯುವಂತೆ ಮಂಟಪಗಳನ್ನು ತಯಾರಿಸಲಾಗಿತ್ತು.
ಭಾಗವಹಿಸಿದ್ದ ಮಂಟಪಗಳು:
ಪೇಟೆ ಶ್ರೀರಾಮ ಮಂದಿರ, ದೇಚೂರು ಶ್ರೀ ರಾಮ ಮಂದಿರ, ಕಂಚಿ ಕಾಮಾಕ್ಷಿ ದೇವಾಲಯ, ಶ್ರೀ ಚೌಡೇಶ್ವರಿ ದೇವಾಲಯ, ಶ್ರೀ ಕೋಟೆ ಮಾರಿಯಮ್ಮ ದೇವಾಲಯ, ಶ್ರೀ ಕೋದಂಡ ರಾಮ ದೇವಾಲಯ, ಶ್ರೀ ಕೋಟೆ ಮಹಾಗಣಪತಿ ದೇವಾಲಯ, ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ, ಕರವಲೆ ಶ್ರೀ ಭಗವತಿ ಮಹಿಷ ಮರ್ದಿನಿ ದೇವಾಲಯ, ಹಾಗೂ ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ಮಂಟಪಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದವು
ವೀಕ್ಷಣೆಗೆ ಜನಜಂಗುಳಿ:
ದಶಮಂಟಪಗಳು ತೆರಳುವ ಹಾದಿಯಲ್ಲಿ ವೀಕ್ಷಣೆಗೋಸ್ಕರ ಗ್ಯಾಲರಿಗಳನ್ನು ನಿರ್ಮಾಣ ಮಾಡಲಾಗಿತ್ತು. ನಗರ ಪೊಲೀಸ್ ಠಾಣೆ ಎದುರು ಕೋಟೆಯ ಆವರಣದಲ್ಲಿ ನಿರ್ಮಿಸಿದ್ದ ಗ್ಯಾಲರಿಯಲ್ಲಿ ಸಂಜೆಯಿಂದಲೇ ಪ್ರೇಕ್ಷಕರು ಜಾಗ ಕಾದಿರಿಸಿಕೊಂಡು ಮಂಟಪಗಳ ಪ್ರದರ್ಶನಕ್ಕಾಗಿ ಕಾತುರದಿಂದ ಕಾಯುತ್ತಿದ್ದ ದೃಶ್ಯ ಕಂಡುಬಂತು. ಹೊಸ ಕಟ್ಟಡ ಕಟ್ಟುವ ಉದ್ದೇಶದಿಂದ ಕಾವೇರಿ ಕಲಾಕ್ಷೇತ್ರ ಕೆಡವಿದ್ದು, ಕಾಮಗಾರಿ ಪ್ರಗತಿಯಲ್ಲಿ ಇರುವ ಕಾರಣ ಇಲ್ಲಿ ಈ ಬಾರಿ ಗ್ಯಾಲರಿ ನಿರ್ಮಾಣ ಮಾಡಿರಲಿಲ್ಲ. ಹಾಗಾಗಿ ಮಂಟಪಗಳನ್ನು ಕುಳಿತುಕೊಂಡು ವೀಕ್ಷಿಸಲು ಆಗಮಿಸಿದ್ದವರಿಗೆ ನಿರಾಸೆ ಆಯಿತು. ಗ್ಯಾಲರಿಗಳನ್ನು ಇನ್ನೂ ಸ್ವಲ್ಪ ದೊಡ್ಡದಾಗಿ ನಿರ್ಮಿಸುವುದರ ಜತೆಗೆ ನಗರದ ಇತರ ಭಾಗಗಳಲ್ಲೂ ಅಳವಡಿಸಬೇಕಿತ್ತು ಎನ್ನುವ ಅಭಿಪ್ರಾಯಗಳು ಕೇಳಿಬಂದವು. ಪ್ರಮುಖ ರಸ್ತೆಯ ಇಕ್ಕೆಲಗಳ ಅಂಗಡಿ ಮುಂಗಟ್ಟು, ಮನೆ, ಕಚೇರಿಗಳ ಮುಂದೆಯೂ ಜನಜಂಗುಳಿ ನಿಂತು ಮೆರವಣಿಗೆ ವೀಕ್ಷಿಸಲಾಯಿತು.
ಪ್ರವಾಸಿಗರ ಆಗಮನ:
ವಾರಾಂತ್ಯದ ಶನಿವಾರದಿಂದಲೇ ಮಡಿಕೇರಿ ಕಡೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಆಯುಧಾ ಪೂಜೆಯ ದಿನ ನಗರಕ್ಕೆ ಬರುವ ಎಲ್ಲಾ ರಸ್ತೆಗಳಲ್ಲೂ ವಾಹನಗಳ ದಟ್ಟಣೆ ಹೆಚ್ಚು ಇದ್ದಿದ್ದು ಕಂಡು ಬಂತು. ಬುಧವಾರ ಮಧ್ಯಾಹ್ನ ನಂತರ ಪ್ರವಾಸಿಗರ ಆಗಮನ ಹೆಚ್ಚಾಗುತ್ತಿದ್ದಂತೆಯೇ ನಗರದೊಳಗೆ ವಾಹನ ಸಂಚಾರ ಸಂಪೂರ್ಣ ನಿರ್ಬಂಧಿಸಲಾಯಿತು. ಹೊರವಲಯದಿಂದಲೇ ಪಾರ್ಕಿಂಗ್ಗೆ ನಿಗದಿಪಡಿಸಿದ ಸ್ಥಳಗಳಿಗೆ ಕಳುಹಿಸಲಾಯಿತು. ಹಾಗಾಗಿ ನಗರದ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ವಿರಳವಾಗಿ ಎಲ್ಲೆಲ್ಲೂ ಪಾದಚಾರಿಗಳೇ ಕಾಣಿಸಿಕೊಳ್ಳಲಾರಂಭಿಸಿದರು. ಮೈಸೂರು ಕಡೆಯಿಂದ ಮಂಗಳೂರು ಮತ್ತು ಮಂಗಳೂರು ಕಡೆಯಿಂದ ಮೈಸೂರಿಗೆ ಮಡಿಕೇರಿ ಮಾರ್ಗದಿಂದ ತೆರಳುವ ವಾಹನಗಳು ಮಡಿಕೇರಿಗೆ ಪ್ರವೇಶಿಸದೆ ಬೇರೆ ಮಾರ್ಗಗಳಿಂದ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿತ್ತು.
ಕರಗ ಸಂಚಾರ ವಿಶೇಷ:
ಮಡಿಕೇರಿ ದಸರಾದಲ್ಲಿ ಶಕ್ತಿ ದೇವತೆಗಳ ಕರಗ ಮಹೋತ್ಸವವೂ ವಿಶೇಷತೆ ಪಡೆದುಕೊಂಡಿದೆ. ಅ.11ರಿಂದ ಆರಂಭವಾಗಿದ್ದ ಕರಗಗಳ ನಗರ ಸಂಚಾರ ಕೂಡ ಗುರುವಾರ ಬೆಳಗ್ಗೆ ಬನ್ನಿ ಕಡಿಯುವುದರೊಂದಿಗೆ ತೆರೆಬಿದ್ದಿದೆ. ಮಡಿಕೇರಿ ದಸರಾದ ಮೂಲ ಆಚರಣೆಯಾದ ಕರಗ ಹೊರುವ ಸಂಪ್ರದಾಯ ಹಾಲೇರಿ ಅರಸರ ಕಾಲದಲ್ಲಿ ಆರಂಭವಾಯಿತು ಎಂಬ ಇತಿಹಾಸವಿದೆ. ಮಾರಕ ರೋಗವೊಂದು ಸ್ಥಳೀಯರನ್ನು ಕಾಡಿ ಅಪಾರ ಸಾವು-ನೋವುಗಳು ಸಂಭವಿಸಿದಾಗ, ರೋಗ ನಿವಾರಣೆಗಾಗಿ ಮತ್ತು ಊರಿನ ರಕ್ಷಣೆಗಾಗಿ ಶಕ್ತಿ ದೇವತೆಗಳಾದ ಶ್ರೀ ಕೋಟೆ ಮಾರಿಯಮ್ಮ, ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ ಹಾಗೂ ಕಂಚಿ ಕಾಮಾಕ್ಷಿಯರ ಕರಗವನ್ನು ಹೊತ್ತು ಪೂಜಿಸುವ ಸಂಪ್ರದಾಯ ಶುರುವಾಯಿತು ಎಂದು ಹಿರಿಯರು ಸ್ಮರಿಸುತ್ತಾರೆ. ಅಂದಿನಿಂದ ಇಂದಿನವರೆಗೂ ಈ ಪರಂಪರೆ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಮುಂದುವರಿದುಕೊಂಡು ಬಂದಿದೆ.
ಮಡಿಕೇರಿ ದಸರಾದಲ್ಲಿ ವಿವಿಧ ದೇವಾಲಯ ಸಮಿತಿಗಳ ವತಿಯಿಂದ ಹೊರತರುವ ಮಂಟಪಗಳ ಕಲಾಕೃತಿಗಳೇ ಪ್ರಮುಖ ಆಕರ್ಷಣೆಯಾಗಿದೆ. ಪೌರಾಣಿಕ ಕತೆಗಳ ಹಿನ್ನೆಲೆ ಇಟ್ಟುಕೊಂಡು ಕಲಾಕೃತಿಗಳನ್ನು ರಚಿಸಲಾಗುತ್ತದೆ.
ಪೇಟೆ ಶ್ರೀರಾಮಮಂದಿರದಿಂದ ಈ ವರ್ಷ ಶ್ರೀಲಕ್ಷ್ಮೀ ನರಸಿಂಹ ದರ್ಶನ ಕಥಾವಸ್ತುವನ್ನು ಆಯ್ದುಕೊಂಡು ಮಂಟಪ ರಚಿಸಲಾಗಿತ್ತು. ದೇಚೂರು ಶ್ರೀರಾಮಮಂದಿರದಿಂದ ಈ ವರ್ಷ ಶತಮಹಿಷಿ ಎಂಬ ಕಥಾವಸ್ತುವನ್ನು ಆಯ್ದುಕೊಂಡು ಮಂಟಪ ರಚಿಸಲಾಗಿತ್ತು. ದಂಡಿನ ಮಾರಿಯಮ್ಮ ದೇವಾಲಯ ಸಮಿತಿಯಿಂದ ಈ ವರ್ಷ ಮಹಾಕಾಮೇಶ್ವರಾಸ್ತ್ರದಿಂದ ಲಲಿತಾಂಬಿಕೆಯಿಂದ ಭಂಡಾಸುರನ ವಧೆ ಕಥಾವಸ್ತು ಬಳಸಿಕೊಳ್ಳಲಾಗಿತ್ತು. ಚೌಡೇಶ್ವರಿ ದೇಗುಲ ಸಮಿತಿಯು ಗಣಪತಿಗೆ ಗಜಮುಖ ಪ್ರಾಪ್ತಿ ಮತ್ತು ಗಣಪತಿಯಿಂದ ಗಜಾಸುರನ ವಧಾಖ್ಯಾನ ಎನ್ನುವ ಕಥಾ ವಸ್ತು ಇಟ್ಟುಕೊಂಡು ಕಲಾಕೃತಿಗಳನ್ನು ರಚಿಸಲಾಗಿತ್ತು. ಕಂಚಿ ಕಾಮಾಕ್ಷಮ್ಮ, ಮುತ್ತುಮಾರಿಯಮ್ಮ ಬಾಲಕ ಮಂಡಳಿಯ ಮಂಟಪದಲ್ಲಿ ಕಾರ್ತಿಕೇಯ ಮತ್ತು ಸೂರಪದ್ಮನ ಮಹಾಸಂಗ್ರಾಮ ಎನ್ನುವ ಕಥಾವಸ್ತು ಆಧಾರದಲ್ಲಿ ರಚಿಸಲಾಗಿದ್ದ ಕಲಾಕೃತಿ ಗಮನ ಸೆಳೆಯಿತು. ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇಗುಲ ಸಮಿತಿಯವರು ಮಣಿಕಂಠನಿಂದ ಮಹಿಷಿಯ ಸಂಹಾರ ಎನ್ನುವ ಕಥಾವಸ್ತು ಅಡಕವಾಗಿದ್ದ ಕಲಾಕೃತಿ ಪ್ರದರ್ಶನ ಮಾಡಿದರು. ಕೋದಂಡರಾಮ ಮಂದಿರ ಸಮಿತಿಯವರು ರಾಮಕಥಾಮೃತದ ಕಥಾ ಸಾರಾಂಶ ಇಟ್ಟುಕೊಂಡು ಕಲಾಕೃತಿ ರೂಪಿಸಿದ್ದರು. ಕೋಟೆ ಮಾರಿಯಮ್ಮ ದೇಗುಲ ಸಮಿತಿಯಿಂದ ಧೂಮ್ರಕೇತು ಗಣಪತಿಯಿಂದ ಧೂಮ್ರಾಕ್ಷಾಸುರ ಸಂಹಾರ ಎನ್ನುವ ಕಥಾಸಾರ ಇಟ್ಟುಕೊಂಡು ಕಲಾಕೃತಿ ರಚನೆ ಮಾಡಲಾಗಿತ್ತು. ಈ ವರ್ಷ 50ನೇ ವರ್ಷದ ಸಂಭ್ರಮದಲ್ಲಿ ಇರುವ ಶ್ರೀ ಕೋಟೆ ಮಹಾಗಣಪತಿ ಮಂಟಪ ಸಮಿತಿಯವರು ಮಹಾಗಣಪತಿಯಿಂದ ಶಿವಾಂಶ ಕ್ರೋಧಾಸುರನ ಸಂಹಾರ ಎನ್ನುವ ಕಥೆ ಇಟ್ಟುಕೊಂಡು ಆಕರ್ಷಕ ಕಲಾಕೃತಿ ಒಳಗೊಂಡ ಮಂಟಪ ರೂಪಿಸಿದ್ದರು. ಕರವಲೆ ಭಗವತಿ ಮಹಿಷ ಮರ್ಧಿನಿ ದೇಗುಲ ಸಮಿತಿಯಿಂದ ಈ ವರ್ಷ ಶ್ರೀಕೃಷ್ಣನ ಬಾಲಲೀಲೆ ಹೇಳುವ ಕಥಾ ವಸ್ತು ಇಟ್ಟುಕೊಂಡು ಕಲಾಕೃತಿ ರೂಪಿಸಲಾಗಿತ್ತು. ಈ ವರ್ಷ ಕೆಲವು ಮಂಟಪಗಳ ಕಲಾಕೃತಿಗಳಲ್ಲಿ ಡ್ರೋನ್ ಬಳಸಿದ್ದು ವಿಶೇಷವಾಗಿತ್ತು.