ಆರೋಗ್ಯ ಕೇಂದ್ರಕ್ಕೆ ಅಗತ್ಯ ವೈದ್ಯರ ನೇಮಕ

ಡಿಎಚ್‌ಒ ಸತೀಶ್ ಕುಮಾರ್ ಭರವಸೆ
 ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಕುಮಾರ್ ಭೇಟಿ ನೀಡಿ ಮಾಹಿತಿ ಪಡೆದರು.
Published on: 

ಸುಂಟಿಕೊಪ್ಪ: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯ ವೈದ್ಯರ ನೇಮಕ, ಔಷಧಗಳನ್ನು ಪೂರೈಕೆ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಕುಮಾರ್ ಭರವಸೆ ನೀಡಿದರು.

ಮಂಗಳವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು ವೇವ್ ಸಂಘಟನೆ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರೊಂದಿಗೆ ಆರೋಗ್ಯ ಕೇಂದ್ರದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು. ಬಳಿಕ ಮಾತನಾಡಿ, ಜಿಲ್ಲೆಯಲ್ಲಿ ಕೇವಲ 7 ಜನ ಕಾಯಂ ವೈದ್ಯರಿದ್ದು ಉಳಿದೆಡೆ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ. ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಉನ್ನತ ವಿದ್ಯಾಭ್ಯಾಸ ಹಾಗೂ ಇತರ ಕಾರಣಗಳಿಂದ ಸೇವೆಯಿಂದ ನಿರ್ಗಮಿಸುತ್ತಿದ್ದಾರೆ. ಬದಲಿ ವ್ಯವಸ್ಥೆಗೆ ಸ್ಥಳೀಯರು ಸೇರಿದಂತೆ ಹೊರಗಿನವರು ಬರುತ್ತಿಲ್ಲ ಎಂದು ಹೇಳಿದರು.

ವೇವ್ ಸಂಘಟನೆಯ ಸಂಚಾಲಕ ಕೆ.ಎ.ಲತೀಫ್ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಲ್ಲೂ ಸ್ವಚ್ಛತೆ ಇಲ್ಲವಾಗಿದೆ. ಶಿಥಿಲಗೊಂಡ ಕಟ್ಟಡಗಳಲ್ಲಿ ಹಾವು ಸೇರಿದಂತೆ ವಿಷಜಂತುಗಳು ಸೇರಿಕೊಳ್ಳುತ್ತಿವೆ. ಇದರಿಂದ ಇದರ ಹಿಂಬದಿಯಲ್ಲಿ ವಾಸದ ಮನೆ ಪಕ್ಕದ ಶಾಲೆಗೆ ಅಪಾಯ ತಪ್ಪಿದಲ್ಲ ಎಂದರು. ಒಂದೂವರೆ ತಿಂಗಳ ಹಿಂದೆ ಸಂಬಂಧಿಸಿದ ಇಂಜಿನಿಯರ್ ಭೇಟಿ ನೀಡಿದಾಗ ಅವರ ಗಮನಕ್ಕೆ ತರಲಾಗಿದ್ದು ಸ್ವಚ್ಛತೆ ಕಾರ್ಯವನ್ನು ಮಾಡಲಾಗುವುದೆಂದು ಭರವಸೆ ನೀಡಿದರೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಿ.ಐ.ಭವಾನಿ, ಔಷಧಗಳು ದೊರೆಯದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಡಾ.ಸತೀಶ್ ಕುಮಾರ್ ಮಾತನಾಡಿ, ಶಿಥಿಲ ಕಟ್ಟಡ ತೆರವುಗೊಳಿಸಲು 10 ಲಕ್ಷ ರೂ .ಅನುದಾನ ಬಿಡುಗಡೆಯಾಗಿದೆ. ಸಂಬಂಧಿಸಿದ ಗುತ್ತಿಗೆದಾರರು ಕ್ರಮವಹಿಸಬೇಕಾಗಿದೆ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಚ್.ಯು.ರಫೀಕ್ ಖಾನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net