

ಗೋಣಿಕೊಪ್ಪ: ಸಮಾಜದ ಪರಿವರ್ತನೆಗೆ ಆದರ್ಶಗಳು ಬಹು ಮುಖ್ಯ. ಇಂತಹ ಜ್ಞಾನ ಮತ್ತು ಆದರ್ಶನವನ್ನು ಜಗತ್ತಿಗೆ ರಾಮಾಯಣದ ಮೂಲಕ ವಾಲ್ಮೀಕಿ ಮಹರ್ಷಿಗಳು ಸಾರಿದರು ಎಂದು ಪೊನ್ನಂಪೇಟೆ ಸಿಐಟಿಪಿಯು ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ.ಪಿ.ವಿ.ಸುಶ್ಮಿತಾ ತಿಳಿಸಿದರು.
ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ, ತಾಲೂಕು ಆಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘ, ವಿವಿಧ ಆದಿವಾಸಿ ಬುಡಕಟ್ಟು ಸಂಘಗಳ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಅವರು ಮಾತನಾಡಿದರು. ರಾಮಾಯಣ ಜಗತಿಗೆ ಆದರ್ಶ ಬದುಕನ್ನು ತಿಳಿಸಿಕೊಟ್ಟ ಮಹಾಕಾವ್ಯ. ವಾಲ್ಮೀಕಿಯ ಮೇರು ವ್ಯಕ್ತಿತ್ವ ನಮಗೆ ಆದರ್ಶವಾದಾಗ ನಮ್ಮ ಬದುಕಿನ ಪರಿವರ್ತನೆ ಸಾಧ್ಯವಾಗಬಲ್ಲದು ಎಂದು ಹೇಳಿದರು.
ಬದುಕಿನಲ್ಲಿ ಪರಿವರ್ತನೆ ಹೊಂದಬೇಕು. ಜ್ಞಾನ ಮತ್ತು ಆದರ್ಶವನ್ನು ಮೈಗೂಡಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬದುಕನ್ನು ತರಬೇಕು. ಈ ಮೂಲಕ ಮತ್ತೊಬ್ಬರ ಬದುಕಿಗೆ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ತತ್ವ, ಆದರ್ಶ, ಮಾನವೀಯತೆ, ಧರ್ಮ, ದಯೆಗಳಂತಹ ಅಂಶಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ. ಇಂತಹ ಮೌಲ್ಯಗಳು ರಾಮಾಯಣದ ಮಹಾಕಾವ್ಯದಲ್ಲಿ ವಾಲ್ಮೀಕಿ ಋಷಿಗಳು ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.
ವಿರಾಜಪೇಟೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ವಿ.ಜಾನ್ಸನ್ ಮಾತನಾಡಿ, ನಮ್ಮದೇ ಆಚಾರ- ವಿಚಾರಗಳನ್ನು ಮಂಡಿಸುವ ಮತ್ತು ತಿಳಿದುಕೊಳ್ಳುವ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಜ್ಞಾನವಂತರಾಗಬೇಕು. ಸರ್ಕಾರದ ಸವಲತ್ತು ಮತ್ತು ವ್ಯವಸ್ಥೆಗಳನ್ನು ತಿಳಿದುಕೊಳ್ಳಲು ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ. ಹೀಗಾಗಿ ವಾಲ್ಮೀಕಿ ಜಯಂತಿಯಲ್ಲಿ, ರಾಮಾಯಣದ ಮಹತ್ವ ಪರಿಚಯ ಮಾಡಿಕೊಳ್ಳುವ ಅವಕಾಶವಿದೆ. ಬುಡಕಟ್ಟು ಸಮುದಾಯದ ವ್ಯಕ್ತಿ ಒಬ್ಬ ಶ್ರೇಷ್ಠ ಕಾವ್ಯವನ್ನು ಬರೆದಿದ್ದಾನೆ ಅನ್ನುವುದೇ ಬುಡಕಟ್ಟು ಸಮುದಾಯದ ಹೆಮ್ಮೆಯಾಗಬೇಕು ಎಂದು ಹೇಳಿದರು.
ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, ಮಕ್ಕಳು ಶಿಕ್ಷಣವಂತರಾದಾಗ, ನಮ್ಮ ಸಾಮಾಜಿಕ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. 21 ವರ್ಷಗಳಿಂದ ಪೊನ್ನಂಪೇಟೆ ತಾಲೂಕಿಗೆ ವಾಲ್ಮೀಕಿ ಭವನದ ಬೇಡಿಕೆ ಸಲ್ಲಿಸುತ್ತಿದ್ದರೂ ಇನ್ನೂ ಸಿಕ್ಕಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.
ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಕಾರ್ಯದರ್ಶಿ ಮುತ್ತುರಾಜ್ ಮಾತನಾಡಿದರು. ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುನಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಗೀತಾ, ಎಸ್.ಹರ್ಷಿತಾ, ಕೆ.ಕೆ.ಯಶ್ಮ, ಬಿ.ಎಸ್.ನಿತ್ಯ, ಸಿ.ಎಂ.ಜಯಂತ್, ಬಿ.ಕೆ.ಅಕ್ಷತಾ, ವಿ.ಕೆ.ಚಂದನ, ಆರ್.ದೀಕ್ಷಿತ್, ಪಿ.ಬಿ.ರಮ್ಯಾ, ವೈ.ಆರ್.ನೇತ್ರ, ಪಿ.ಆರ್.ದೇಶಿಕ, ಪಿ.ಆರ್.ಯತೀಶ್, ಕೆ.ಎಂ.ಗಗನ್, ಜೆ.ಟಿ.ಕೃಷ್ಣ, ಕೆ.ಎಂ.ಪ್ರಕೃತಿ, ರೋಷನ್ ಅವರನ್ನು ಸನ್ಮಾನಿಸಲಾಯಿತು.
ಮರೂರು ಗಿರಿಜನ ಆಶ್ರಮ ಶಾಲೆಯ ಶಿಕ್ಷಕಿ ಎಚ್.ಉಮಾ, ವಿವಿಧ ಕ್ಷೇತ್ರದ ಸಾಧಕರಾದ ಜೆ.ಕೆ.ರಾಮು, ಡಾ.ಬಿ.ಸಿ.ಸುಶ್ಮಿತಾ, ಪಾಪಣ್ಣ, ಸುರೇಶ್ ಅವರನ್ನು ಗೌರವಿಸಲಾಯಿತು.
ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನದಿಂದ ಕೆಪಿಎಸ್ ಶಾಲಾ ಆವರಣದವರೆಗೆ ವಾಲ್ಮೀಕಿ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ತಹಸೀಲ್ದಾರ್ ಸಿ.ಎಸ್.ಸಂಜನಾ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ರಾಜೇಶ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತೇಜರಾಜ ಹಲಸಬಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪೂಣಚ್ಚ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಗೋಪಿ, ವಿರಾಜಪೇಟೆ ಪುರಸಭೆ ಮುಖ್ಯ ಅಧಿಕಾರಿ ಟಿ.ಕೆ.ನಾಚಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪಂಕಜಾ, ಬುಡಕಟ್ಟು ಕೃಷಿಕ ಸಂಘದ ಅಧ್ಯಕ್ಷ ಸಿದ್ದಪ್ಪ, ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಜಾತಿ ನೌಕರರ ಸಂಘದ ಅಧ್ಯಕ್ಷ ಮಹೇಶ್, ನಾಗರಹೊಳೆ ವಿಕಾಸ ಕೇಂದ್ರದ ಸಂಚಾಲಕಿ ಪುಷ್ಪಾ ಇದ್ದರು.