ಅರೆಭಾಷಿಕ ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನಹರಿಸಲಿ

ಅರೆಭಾಷಿಕ ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನಹರಿಸಲಿ
ಕೊಡಗು ಗೌಡ ವಿದ್ಯಾಸಂಘದ ವತಿಯಿಂದ ಏರ್ಪಡಿಸಲಾಗಿದ್ದ 26ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಜನಾಂಗದ ಸಾಧಕರನ್ನು ಗೌರವಿಸಲಾಯಿತು. ಮುಕ್ಕಾಟಿ ಎ. ಮನೋಜ್ ಕುಮಾರ್, ಅಂಬೇಕಲ್ ನವೀನ್ ಕುಶಾಲಪ್ಪ, ಅಮೆ ಸಿ. ಸೀತಾರಾಮ್, ಹೊಸೂರು ರಮೇಶ್ ಜೋಯಪ್ಪ, ತೆಕ್ಕಡೆ ಗುಲಾಬಿ ಜನಾರ್ದನ ಮತ್ತಿತರರು ಇದ್ದರು.
Published on: 

ಮಡಿಕೇರಿ

ಅರೆಭಾಷಿಕ ಗೌಡ ಸಮುದಾಯದ ಯುವ ಜನಾಂಗ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು, ಐಎಎಸ್, ಐಪಿಎಸ್ ಮಾದರಿಯ ಅತ್ಯುನ್ನತ ಆಡಳಿತಾತ್ಮಕ ಹುದ್ದೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವಂತಾಗಬೇಕು ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕರಂದ್ಲಾಜೆ ಆನಂದ ಆಶಯ ವ್ಯಕ್ತಪಡಿಸಿದರು. ಇಲ್ಲಿನ ಗೌಡ ಸಮಾಜ ಸಮುದಾಯ ಭವನದಲ್ಲಿ ಕೊಡಗು ಗೌಡ ವಿದ್ಯಾಸಂಘದ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ 26ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯೆ ಮತ್ತು ಸಂಸ್ಕೃತಿಯನ್ನು ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿದ್ಯೆಯ ಮಹತ್ವವನ್ನು ಅರಿತುಕೊಂಡೇ ನಮ್ಮ ಹಿರಿಯರು ಶತಮಾನದ ಹಿಂದೆಯೇ ಇಂತಹ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಪ್ರತಿಭಾವಂತರನ್ನು ಗುರುತಿಸುವ ಈ ಶ್ಲಾಘನೀಯ ಪರಂಪರೆಗೆ ಕಾಲಕ್ಕೆ ತಕ್ಕಂತೆ ಬದಲಾವಣೆ ಹಾಗೂ ನಾವಿನ್ಯತೆಯನ್ನು ಅಳವಡಿಸಿಕೊಳ್ಳಬೇಕಿದೆ.

ಪ್ರತಿಭಾ ಪುರಸ್ಕಾರ ಹಲವರಿಗೆ ಪ್ರಯೋಜನಕಾರಿಯಾಗಿದೆ. ಆದರೆ ಅದರ ಸಂಪೂರ್ಣ ಉಪಯೋಗ ಪಡೆಯುವ ಕುರಿತು ಯುವಜನರ ಮೇಲೆ ದೊಡ್ಡ ಹೊಣೆಗಾರಿಕೆ ಇದೆ. ನಮ್ಮ ಜನಾಂಗದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಿದ್ದರೂ, ಐಎಎಸ್, ಐಪಿಎಸ್ ಅಧಿಕಾರಿಗಳ ಕೊರತೆ ಇದೆ. ಈ ಬಗ್ಗೆ ಪ್ರತಿಯೊಬ್ಬರೂ ಚಿಂತನೆ ನಡೆಸಿ, ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಾಲ್ಯದಿಂದಲೇ ತಯಾರು ಮಾಡಬೇಕು. ವಿದ್ಯೆಯ ಜತೆಗೆ ನಮ್ಮ ಸಾಂಸ್ಕೃತಿಕ ಮೌಲ್ಯಗಳೂ ಅಷ್ಟೇ ಮುಖ್ಯ. ಮುಂದಿನ ತಲೆಮಾರಿನ ಬಗ್ಗೆ ನಮಗೆ ಆತಂಕವಿದೆ. ಯುವಜನತೆಯೇ ನಮ್ಮ ಸಂಸ್ಕೃತಿಯ ರಾಯಬಾರಿಗಳು. ಈ ನಿಟ್ಟಿನಲ್ಲಿ ಪ್ರಸ್ತುತ ನಡೆಯುತ್ತಿರುವ ಕೆಲಸ ಸಾಲದು.

ಶಾಲಾ-ಕಾಲೇಜುಗಳಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಸಂಸ್ಕೃತಿ ಬೆಳೆಸುವಲ್ಲಿ ಕೀಳರಿಮೆ ಬಿಟ್ಟು ಜನಾಂಗದ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉದ್ಯಮಿ ಮುಕ್ಕಾಟಿ ಎ. ಮನೋಜ್ ಕುಮಾರ್ ಮಾತನಾಡಿ, ಜನಾಂಗದ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಹುದ್ದೆಗಳಿಗಾಗಿ ಶ್ರಮಿಸಿ ತಮ್ಮ ಗುರಿ ಸಾಧಿಸಬೇಕು. ಇಂದಿನ ಮಕ್ಕಳೇ ನಾಳಿನ ಭವಿಷ್ಯ. ಅವರ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹ ನೀಡುವುದು ಎಲ್ಲರ ಹೊಣೆಗಾರಿಕೆ. ವಿದ್ಯಾರ್ಥಿಗಳ ಸಾಧನೆಗೆ ಪೋಷಕರು ಹಾಗೂ ವಿದ್ಯಾಸಂಘ ಸದಾ ಬೆನ್ನೆಲುಬಾಗಿ ನಿಲ್ಲುತ್ತದೆ. ಐಟಿ ಕ್ಷೇತ್ರದ ಜತೆಗೆ ಆಡಳಿತಾತ್ಮಕ ವಿಭಾಗದಲ್ಲೂ ನಮ್ಮವರು ಮುಂದುವರಿಯಬೇಕು. ಯುವಕರು ಸೇನೆಗೆ ಸೇರ್ಪಡೆಯಾಗುವ ಪ್ರಮಾಣವೂ ಕಡಿಮೆಯಾಗುತ್ತಿದ್ದು, ವಿದ್ಯಾಸಂಘವು ಈ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು. ಜನಾಂಗದ ಏಳಿಗೆಗೆ ವಿದ್ಯಾಸಂಘ ನಿರ್ಧಾರ ಕೈಗೊಂಡರೆ, ಅದನ್ನು ತಲುಪಲು ಎಲ್ಲರ ಸಹಕಾರ ಅಗತ್ಯ. ಮಕ್ಕಳ ಆಸಕ್ತಿಯ ಕ್ಷೇತ್ರವನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಪೋಷಕರ ಪಾತ್ರವೂ ಪ್ರಮುಖವಾಗಿದೆ. ವಿದ್ಯಾಸಂಘದಿAದ ನೆರವು ಪಡೆದು ಸಾಧನೆ ಮಾಡಿದವರು ಮುಂದೆ ಸಮುದಾಯದ ಏಳಿಗೆಗೆ ಮರಳಿ ಸಹಾಯ ಮಾಡಬೇಕು ಎಂದರು.

ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೇಕಲ್ ನವೀನ್ ಕುಶಾಲಪ್ಪ, ನಮ್ಮ ಜನಾಂಗದ ಹಿರಿಯರು ಶತಮಾನದಷ್ಟು ಹಿಂದೆಯೇ ದೂರದೃಷ್ಟಿ ಇಟ್ಟುಕೊಂಡು ಈ ವಿದ್ಯಾಸಂಘವನ್ನು ಸ್ಥಾಪಿಸಿದ್ದಾರೆ. ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನಗಳ ಮೂಲಕ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ. ಇಂತಹ ಬೆಂಬಲ ಸಿಕ್ಕಾಗ ಸಾಧಕರಿಂದ ಇನ್ನಷ್ಟು ಉತ್ತಮ ಸಾಧನೆ ನಿರೀಕ್ಷಿಸಲು ಸಾಧ್ಯ ಹಾಗೂ ಇದು ಇತರ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗುತ್ತದೆ ಎಂದರು.

ಸಮಾರಂಭದಲ್ಲಿ ಜನಾಂಗದ 121 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಅಮೆ ಸಿ. ಸೀತಾರಾಮ್, ನಿಕಟಪೂರ್ವ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ನಿವೃತ್ತ ಪ್ರಾಂಶುಪಾಲರಾದ ತೆಕ್ಕಡೆ ಗುಲಾಬಿ ಜನಾರ್ದನ ಮಾತನಾಡಿದರು. ಕಾಫಿ ಬೆಳೆಗಾರರಾದ ತೊತ್ತಿಯನ ಕೀರ್ತಿಕುಮಾರಿ ಮೋಹನ್, ವಿದ್ಯಾಸಂಘದ ಕಾರ್ಯದರ್ಶಿ ಪೇರಿಯನ ಕೆ. ಉದಯಕುಮಾರ್, ಸಹಕಾರ್ಯದರ್ಶಿ ತಳೂರು ಕೆ. ದಿನೇಶ್ ಕುಮಾರ್, ಖಜಾಂಚಿ ಕಾಳೇರಮ್ಮನ ಲತಾ ನಂದಕುಮಾರ್, ನಿರ್ದೇಶಕರಾದ ಕೆದಂಬಾಡಿ ಕಾಂಚನ, ಪರಿಚನ್ ಟಿ. ಸತೀಶ್, ಪುದಿಯನೆರವನ ರೇವತಿ ರಮೇಶ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net