ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಿವಿ, ಮೂಗು, ಗಂಟಲು ವಿಭಾಗದಿಂದ ಆಚರಿಸಲಾದ ವಿಶ್ವ ಧ್ವನಿ ದಿನದ ಸಂದರ್ಭದಲ್ಲಿ ಖ್ಯಾತ ಸಂಗೀತ ಶಿಕ್ಷಕಿ ವಿದುಷಿ ಸರೋಜ ಸುಧಾಕರ್ ಅವರನ್ನು ಸನ್ಮಾನಿಸಲಾಯಿತು. ಡಾ. ದಿವ್ಯಾ ಸೇಠ್, ಡಾ. ಪೂಜಾ, ಡಾ. ವಿಶಾಲ್ ಕುಮಾರ್, ಡಾ. ಶ್ವೇತಾ ಮತ್ತಿತರರು ಇದ್ದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಿವಿ, ಮೂಗು, ಗಂಟಲು ವಿಭಾಗದಿಂದ ನಮ್ಮ ಧ್ವನಿಯ ಆರೈಕೆ ಎಂಬ ವಿಷಯದಡಿ ವಿಶ್ವ ಧ್ವನಿ ದಿನವನ್ನು ಶನಿವಾರ ಆಚರಿಸಲಾಯಿತು. ವೃತ್ತಿಪರ ಧ್ವನಿ ಬಳಕೆದಾರರಲ್ಲಿ ಧ್ವನಿಯ ಆರೋಗ್ಯದ ಮಹತ್ವ ಮತ್ತು ಧ್ವನಿಯ ಆರೈಕೆಯ ಅಗತ್ಯತೆಯ ಬಗ್ಗೆ ಈ ಸಂದರ್ಭ ಅರಿವು ಮೂಡಿಸಲಾಯಿತು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ, ವಾಕ್ ಮತ್ತು ಭಾಷೆ ತಜ್ಞೆ ಡಾ. ದಿವ್ಯಾ ಸೇಠ್ ಧ್ವನಿಯ ಆರೈಕೆ, ಧ್ವನಿಯ ಅಸ್ವಸ್ಥತೆಗಳನ್ನು ಗುರುತಿಸುವುದು ಮತ್ತು ವಿಶೇಷವಾಗಿ ತಮ್ಮ ವೃತ್ತಿಗಳಲ್ಲಿ ಧ್ವನಿಯನ್ನು ಹೆಚ್ಚು ಅವಲಂಬಿಸಿರುವ ವ್ಯಕ್ತಿಗಳಲ್ಲಿ ಆರೋಗ್ಯಕರ ಧ್ವನಿ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ಸ್ನಾತಕೋತ್ತರ ಇಎನ್ಟಿ ವಿದ್ಯಾರ್ಥಿನಿ ಡಾ. ಪೂಜಾ ಧ್ವನಿಯ ವಿಕಸನವನ್ನು ವಿವರಿಸಿದರು. ಇದು ಅಭಿವ್ಯಕ್ತಿಗೆ ಪ್ರಬಲ ಮಾಧ್ಯಮವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆ ಹೇಳಿದರು. ಧ್ವನಿ ಕೇವಲ ಒಂದು ಪ್ರಮುಖ ಅಂಗವಲ್ಲದೆ, ಮಾನವರನ್ನು ಸುತ್ತಮುತ್ತಲಿನ ಪ್ರಪಂಚದೊAದಿಗೆ ಅರ್ಥಪೂರ್ಣವಾಗಿ ಸಂಪರ್ಕಿಸಲು ಸ್ವರ ಪೆಟ್ಟಿಗೆ ಹೇಗೆ ಶಕ್ತಗೊಳಿಸುತ್ತದೆ ಎಂಬುದರ ಕುರಿತು ವಿವರಿಸಿದರು.
1993ರಿಂದ ಉತ್ಸಾಹದಿಂದ ಸಂಗೀತವನ್ನು ಬೋಧಿಸುತ್ತಿರುವ ಮತ್ತು ತಮ್ಮ ಸಮರ್ಪಣೆ ಹಾಗೂ ಬದ್ಧತೆಯಿಂದ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುತ್ತಿರುವ ಖ್ಯಾತ ಸಂಗೀತ ಶಿಕ್ಷಕಿ ವಿದುಷಿ ಸರೋಜ ಸುಧಾಕರ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಪ್ರಾಂಶುಪಾಲ ಡಾ.ವಿಶಾಲ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ದೈನಂದಿನ ಜೀವನದಲ್ಲಿ ಧ್ವನಿ ಆರೋಗ್ಯದ ಮಹತ್ವ ಕುರಿತು ಮಾಹಿತಿ ನೀಡಿದರು.
ಇಎನ್ಟಿ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥೆ ಡಾ.ಶ್ವೇತಾ ಮಾತನಾಡಿ, ಸಂವಹನ ಮತ್ತು ಗುರುತಿನ ಆಧಾರವಾಗಿ ಧ್ವನಿಯ ಮಹತ್ವ ಬಗ್ಗೆ ವಿವರಿಸಿದರು.
ಧ್ವನಿ ಉತ್ಪಾದನೆಯಲ್ಲಿ ಮಾತ್ರವಲ್ಲದೆ, ವಾಯು ಮಾರ್ಗವನ್ನು ರಕ್ಷಿಸುವಲ್ಲಿ ಮತ್ತು ದೈನಂದಿನ ಜೀವನದಲ್ಲಿ ಪರಿಣಾಮಕಾರಿ ಸಂವಹನ ಸಕ್ರಿಯಗೊಳಿಸುವಲ್ಲಿ ಸ್ವರಪೆಟ್ಟಿಗೆಯ ಪ್ರಮುಖ ಪಾತ್ರವನ್ನು ಉಲ್ಲೇಖಿಸಿದರು.
ಉಪ-ಪ್ರಾಂಶುಪಾಲರಾದ ಡಾ.ಇಶಾ ರಾವ್, ಸಿಎಒ ರೋಹಿಣಿ ಮತ್ತು ಆರ್‌ಎಂಒ ಡಾ.ಧನಂಜಯ ಕುಮಾರ್, ಇಎನ್‌ಟಿ ಸಹಾಯಕ ಪ್ರಾಧ್ಯಾಪಕಿ ಡಾ. ನಳಿನಾ, ಎಂಬಿಬಿಎಸ್ ವಿದ್ಯಾರ್ಥಿಗಳಾದ ಐಶ್ವರ್ಯ, ಪ್ರತೀಕ್ಷಾ, ಉಪಸ್ಥಿತರಿದ್ದರು.