ಕ್ಷಯರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಅಭಿಯಾನ

ವಿಶ್ವ ಕ್ಷಯರೋಗ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಸನತ್ ಕುಮಾರ್, ರಾಮಚಂದ್ರ ಕಾಮತ್, ಡಾ.ಸತೀಶ್ ಕುಮಾರ್, ಡಾ.ಲೋಕೇಶ್ ಇತರರಿದ್ದರು.
ವಿಶ್ವ ಕ್ಷಯರೋಗ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಸನತ್ ಕುಮಾರ್, ರಾಮಚಂದ್ರ ಕಾಮತ್, ಡಾ.ಸತೀಶ್ ಕುಮಾರ್, ಡಾ.ಲೋಕೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕ್ಷಯರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಅಭಿಯಾನ
ಮಡಿಕೇರಿ: ಜಿಲ್ಲೆಯಲ್ಲಿ ಒಂದು ಲಕ್ಷ ಜನಸಂಖ್ಯೆಗೆ ೭೯ ಕ್ಷಯ ರೋಗಿಗಳಿದ್ದು, ಇನ್ನೂ ಎರಡು ವರ್ಷದಲ್ಲಿ ಕ್ಷಯಮುಕ್ತ ಜಿಲ್ಲೆಯನ್ನಾಗಿ ಮಾಡಬಹುದಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸನತ್ ಕುಮಾರ್ ತಿಳಿಸಿದರು.
ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ನಡೆದ ವಿಶ್ವ ಕ್ಷಯರೋಗ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮುಂದಿನ ಒಂದು ವರ್ಷದಲ್ಲಿ ಒಂದು ಲಕ್ಷ ಜನರಿಗೆ ನಲ್ವತ್ತಕ್ಕಿಂತ ಕಡಿಮೆ ಕ್ಷಯ ರೋಗಿಗಳು ಕಂಡುಬರಲಿದ್ದು, ಸಂಪೂರ್ಣವಾಗಿ ಕ್ಷಯಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲರೂ ಸಂಕಲ್ಪ ಮಾಡಬೇಕು. ಕ್ಷಯರೋಗವನ್ನು ತಡೆಯುವಲ್ಲಿ ೬ ರಿಂದ ೭ ಲಕ್ಷ ರೂ. ವರೆಗೆ ಒಬ್ಬ ರೋಗಿಗೆ ಸರ್ಕಾರ ಭರಿಸಿ ಅತ್ಯುತ್ತಮ ಚಿಕಿತ್ಸೆ ನೀಡಲಿದೆ ಎಂದು ಹೇಳಿದರು.
ಮುಂದಿನ ಪೀಳಿಗೆ ಕ್ಷಯ ರೋಗದಿಂದ ಬಳಲಬಾರದು, ಮೊಬೈಲ್ ಎಕ್ಸೆರೆ ಮೂಲಕವೂ ಕ್ಷಯವನ್ನು ಪತ್ತೆ ಹಚ್ಚಲಾಗುತ್ತಿದೆ. ಕಫ ಪರೀಕ್ಷೆ ಮಾಡಲಾಗುತ್ತಿದೆ. ಜಿಲ್ಲೆಯ ಸೂಕ್ಷ್ಮ ಪ್ರದೇಶಗಳ ಮನೆ ಮನೆಗೆ ಭೇಟಿ ನೀಡಿ ಕ್ಷಯರೋಗ ಪತ್ತೆ ಹಚ್ಚುವ ಕಾರ್ಯಕ್ರಮ ಮಂಗಳವಾರದಿಂದ ೧೦೦ ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದು, ಕ್ಷಯರೋಗ ಪತ್ತೆ ಹಚ್ಚುವುದರ ಜತೆಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಅವರು ತಿಳಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ರಾಮಚಂದ್ರ ಕಾಮತ್ ಮಾತನಾಡಿ, ಕ್ಷಯರೋಗವನ್ನು ನಿಯಂತ್ರಿಸುವಲ್ಲಿ ಹಾಗೆಯೇ ಮತ್ತೊಬ್ಬರಿಗೆ ಕ್ಷಯ ರೋಗ ಹರಡದಂತೆ ಮುನ್ನೆಚ್ಚರ ವಹಿಸುವಲ್ಲಿ ಮಾಹಿತಿ, ಶಿಕ್ಷಣ ನೀಡಲಾಗುತ್ತಿದೆ. ರಸಪ್ರಶ್ನೆ ಹಾಗೂ ರಂಗೋಲಿ ಸ್ಪರ್ಧೆ ಮೂಲಕ ಕ್ಷಯರೋಗ ನಿಯಂತ್ರಣ ಸಂಬಂಧ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಕ್ಷಯರೋಗ ಪತ್ತೆಗೆ ನೂತನ ವಿಧಾನವನ್ನು ಅಳವಡಿಸಿಕೊಂಡು ಕ್ಷಯರೋಗ ನಿಯಂತ್ರಣಕ್ಕೆ ಶ್ರಮಿಸಲಾಗುತ್ತಿದೆ. ಕ್ಷಯರೋಗ ನಿರ್ಮೂಲನೆ ಮಾಡುವಲ್ಲಿ ಅನೇಕ ನೂತನ ರೂಪುರೇಷೆಗಳನ್ನು ಹಾಕಿಕೊಂಡು ಸಮರೋಪಾದಿಯಲ್ಲಿ ಕಾರ್ಯಗತ ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ನುಡಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಲೋಕೇಶ್ ಮಾತನಾಡಿ, ಕ್ಷಯರೋಗ ಮುಕ್ತಗೊಳಿಸುವಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಹೆಚ್ಚಿನದ್ದಾಗಿದೆ. ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವಲ್ಲಿ ತಂಡವಾಗಿ ಕೆಲಸ ಮಾಡಬೇಕಿದೆ. ಕ್ಷಯರೋಗವು ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಮುನ್ನೆಚ್ಚರ ವಹಿಸಬೇಕು ಎಂದರು.
ರಂಗೋಲಿ ಹಾಗೂ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಹಾಗೆಯೇ ೨೦೨೫ನೇ ಸಾಲಿನ ಕ್ಷಯಮುಕ್ತ ಗ್ರಾಮ ಪಂಚಾಯಿತಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಬಲ್ಲಮಾವಟಿ ಮತ್ತು ಕಾಕೋಟುಪರಂಬು ಗ್ರಾ.ಪಂ.ಗಳಿಗೆ ಚಿನ್ನದ ಪದಕ, ಮೂರು ಗ್ರಾ.ಪಂ.ಗಳಿಗೆ ಬೆಳ್ಳಿ ಪದಕ ಹಾಗೂ ೨೪ ಗ್ರಾ.ಪಂ.ಗಳಿಗೆ ಕಂಚಿನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಪತಿ ರವೀಂದ್ರ ರೈ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಅರುಣ್ ಕುಮಾರ್, ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿವಿಧ ವಿಭಾಗದ ಮುಖ್ಯಸ್ಥರು, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಪಿಡಿಒಗಳು, ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳು ಇತರರು ಇದ್ದರು. ಕ್ಷಯ ರೋಗ ವಿಭಾಗದ ಮೇಲ್ವಿಚಾರಕ ಎಂ.ಮಹದೇವಪ್ಪ, ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ನಿರೂಪಿಸಿ, ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net