ಮಡಿಕೇರಿ: ಕಿಗ್ಗಾಲು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಗರ್ಭಿಣಿಯರು, ಬಾಣಂತಿಯರು ಮತ್ತು ಫಲಾನುಭವಿಗಳಿಗೆ ಸ್ತನ್ಯಪಾನದ ಮಹತ್ವ ಕುರಿತು ಅರಿವು ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರು, ತಾಯಿಯ ಎದೆಹಾಲು ಮಗುವಿಗೆ ಅಮೃತಸಮಾನ. ಮಗುವಿನ ಸುಸ್ಥಿರ ಜೀವನದ ಆರಂಭಕ್ಕೆ ಸ್ತನ್ಯಪಾನ ಅತ್ಯಗತ್ಯ. ಗರ್ಭಿಣಿಯರು ಪೌಷ್ಟಿಕ ಆಹಾರ, ನಿಯಮಿತ ಆರೋಗ್ಯ ತಪಾಸಣೆ ಮತ್ತು ವ್ಯಾಯಾಮದ ಮೂಲಕ ಆರೋಗ್ಯ ಕಾಪಾಡಿಕೊಂಡು ಮಾನಸಿಕವಾಗಿ ತಾಯ್ತನಕ್ಕೆ ಸಿದ್ಧರಾಗಬೇಕು. ಇದರಿಂದ ಮಗುವಿನ ಆರೋಗ್ಯದ ಜೊತೆಗೆ ಎದೆಹಾಲಿನ ಉತ್ಪಾದನೆಯೂ ಹೆಚ್ಚುತ್ತದೆ ಎಂದು ಹೇಳಿದರು.
ಮಗು ಜನಿಸಿದ ಅರ್ಧ ಗಂಟೆಯೊಳಗೆ ಮೊದಲ ಹಾಲನ್ನು ತಪ್ಪದೇ ಕುಡಿಸಬೇಕು. ಇದರಿಂದ ಮಗುವಿನ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಮಗು ಅತ್ತಾಗಲೆಲ್ಲಾ ಅಥವಾ ಕನಿಷ್ಠ ೨ ಗಂಟೆಗೊಮ್ಮೆ, ರಾತ್ರಿಯಲ್ಲೂ ನಿಯಮಿತವಾಗಿ ಎದೆಹಾಲುಣಿಸಬೇಕು ಎಂದು ತಿಳಿಸಿದರು.
ಮಗುವಿನ ಬೆಳವಣಿಗೆಯಲ್ಲಿ ತೂಕದ ಮೇಲ್ವಿಚಾರಣೆ ಮುಖ್ಯ. ಮಗು ಹುಟ್ಟಿದ ಕೂಡಲೇ ತೂಕ ದಾಖಲಿಸಿ, ನಂತರ ಪ್ರತಿ ತಿಂಗಳು ಅಂಗನವಾಡಿಯಲ್ಲಿ ತೂಕ ಪರೀಕ್ಷೆ ಮಾಡಿಸಬೇಕು. ಸತತ ೩ ತಿಂಗಳು ತೂಕ ಹೆಚ್ಚಳವಾಗದಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜನನ ಪ್ರಮಾಣಪತ್ರ ನೋಂದಣಿ, ಮಾತೃ ವಂದನ, ಭಾಗ್ಯಲಕ್ಷ್ಮಿ ಮತ್ತು ಗೃಹಲಕ್ಷ್ಮಿ ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು. ಆಶಾ ಕಾರ್ಯಕರ್ತೆ ಲೀಲಾವತಿ ಅವರು ಮಗುವಿಗೆ ಸರಿಯಾದ ರೀತಿಯಲ್ಲಿ ಎದೆಹಾಲುಣಿಸುವ ವಿಧಾನವನ್ನು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು. ಚುಚ್ಚುಮದ್ದಿನ ಮಹತ್ವದ ಕುರಿತು ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಾದ ಸುನಿತಾ, ಪುಷ್ಪ, ಅಂಗನವಾಡಿ ಕಾರ್ಯಕರ್ತೆ ಗೌರಿ, ಸಹಾಯಕಿ ಹರಿಣಿ ಸೇರಿದಂತೆ ಗರ್ಭಿಣಿಯರು, ಬಾಣಂತಿಯರು ಮತ್ತು ಫಲಾನುಭವಿಗಳು ಭಾಗವಹಿಸಿದ್ದರು.