ಕಾಮಗಾರಿ ಆಮೆಗತಿ ವಾಹನ ಸಂಚಾರ ಮಂದಗತಿ

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ರಸ್ತೆ ಕುಸಿದಿರುವ ಸ್ಥಳದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಇಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ರಸ್ತೆ ಕುಸಿದಿರುವ ಸ್ಥಳದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಇಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
Published on
ಮಡಿಕೇರಿ:
ಜುಲೈ ತಿಂಗಳಾರAಭದಲ್ಲಿ ಸುರಿದ ಭಾರಿ ಮಳೆಗೆ ಕುಸಿದ ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ರಸ್ತೆ ದುರಸ್ತಿ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಇದರಿಂದಾಗಿ ಪಟ್ಟಣದೊಳಗೆ ವಾಹನ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ಥವ್ಯಸ್ಥವಾಗಿದೆ. ಪ್ರಮುಖ ರಸ್ತೆಗಳಲ್ಲಿ ಪ್ರತಿದಿನವೂ ವಾಹನ ದಟ್ಟಣೆ ಅಧಿಕವಾಗಿ ಕಾಣಿಸಿಕೊಳ್ಳುತ್ತಿದ್ದು ಜನಸಾಮಾನ್ಯರು ಪರದಾಡುವಂತಾಗಿದೆ. ವ್ಯಾಪಾರದ ಮೇಲೂ ಇದು ದುಷ್ಪರಿಣಾಮ ಬೀರಿದ್ದು ಶೇ. 60ರಷ್ಟು ವಹಿವಾಟು ಕುಸಿದಿರುವ ಬಗ್ಗೆ ಚೇಂಬರ್ ಆಫ್ ಕಾಮರ್ಸ್ ಆತಂಕ ವ್ಯಕ್ತಪಡಿಸಿದೆ.
ಕೊಡಗಿನಲ್ಲಿ ಸುಮಾರು 1 ತಿಂಗಳು ತಡವಾಗಿ ಮಳೆಗಾಲ ಆರಂಭವಾಗಿ ಜುಲೈ ಮೊದಲ ವಾರದಲ್ಲಿ ಸುರಿದ ಮಳೆ ಸ್ಥಳೀಯರಲ್ಲಿ ಸ್ವಲ್ಪ ಮಟ್ಟಿಗೆ ಆತಂಕಕ್ಕೆ ಕಾರಣವಾಗಿತ್ತು. ಜು. 7ರಂದು ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹಳೇ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಎಡಬದಿಗೆ ರಾಜಕಾಲುವೆಗೆ ಹೊಂದಿಕೊAಡAತೆ ಪಾದಚಾರಿ ಮಾರ್ಗ ಕುಸಿತವಾಗಿತ್ತು. ಇಲ್ಲಿ ಬಸ್‌ಗಳು ಸಂಚರಿಸುತ್ತಿದ್ದAತೆಯೇ ಸ್ವಲ್ಲ ಸ್ವಲ್ಪವೇ ಮಣ್ಣು ಬೀಳುತ್ತಿದ್ದದ್ದು 2018, 19 ಹಾಗೂ 2020ರ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿತ್ತು. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಮೊದಲು ಇಲ್ಲಿ ಏಕಮುಖಕ್ಕೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಪರಿಸ್ಥಿತಿ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಸಂಪೂರ್ಣ ವಾಹನ ಸಂಚಾರವನ್ನೇ ನಿರ್ಬಂಧಿಸಲಾಯಿತು.
ಪಾದಚಾರಿ ಮಾರ್ಗ ಕುಸಿತವಾದ ಜು. 7ರಿಂದಲೇ ಇಲ್ಲಿ ದುರಸ್ತಿ ಕಾಮಗಾರಿ ಆರಂಭವಾದರೂ ಅದಿನ್ನೂ ಪೂರ್ಣವಾಗಿಲ್ಲ. ಈ ರಸ್ತೆ ಮಡಿಕೇರಿಯ ಹೃದಯ ಭಾಗದ ಪ್ರಮುಖ ರಸ್ತೆ ಆಗಿರುವುದರಿಂದ ಇಲ್ಲಿ ವಾಹನ ಸಂಚಾರ ನಿರ್ಬಂಧಿಸಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿರುವ ಆರೋಪ ಕೇಳಿಬಂದಿದ್ದು ಇದರಿಂದಾಗಿ ಇಲ್ಲಿಯ ವರ್ತಕರು, ವಾಹನ ಚಾಲಕರು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.
ರಸ್ತೆ ಕುಸಿತದ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದ್ದು, ಇದರ ಪರಿಣಾಮ ನಿತ್ಯ ನಗರದಲ್ಲಿ ವಾಹನದಟ್ಟಣೆ ಮಿತಿ ಮೀರಿದೆ. ಇದರಿಂದ ಶಾಲಾ ವಿದ್ಯಾರ್ಥಿಗಳು, ಹಿರಿಯ ನಾಗರೀಕರು, ಸಾರ್ವಜನಿಕರು ಹಾಗೂ ಪ್ರವಾಸಿಗರ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳ ಮಾರ್ಗವನ್ನು ಕೂಡ ಬದಲಾಯಿಸಿರುವುದರಿಂದ ಸಕಾಲದಲ್ಲಿ ಸಂಚಾರ ವ್ಯವಸ್ಥೆ ಇಲ್ಲದೆ ಪ್ರಯಾಣಿಕರೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರಿ ಬಸ್ ನಿಲ್ದಾಣ, ಇಂದಿರಾಗಾAಧಿ ವೃತ್ತ, ಹಳೇ ಖಾಸಗಿ ಬಸ್ ನಿಲ್ದಾಣ, ಟೋಲ್‌ಗೇಟ್ ಸೇರಿ ನಗರದ ವಿವಿಧ ಸ್ಥಳಗಳಿಗೆ ತೆರಳಲು ಇದ್ದ ಹತ್ತಿರದ ರಸ್ತೆಗಳಲೆಲ್ಲಾ ಸಂಚಾರ ವ್ಯವಸ್ಥೆ ಬದಲಾವಣೆ ಮಾಡಲಾಗಿದೆ. ಸೂಕ್ತ ಮಾರ್ಗಸೂಚಿ ಇಲ್ಲದ ಕಾರಣ ಬೇರೆ ಬೇರೆ ರಸ್ತೆಗಳ ಮೂಲಕ ಕಿಲೋ ಮೀಟರ್‌ಗಟ್ಟಲೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ನಗರಕ್ಕೆ ಬರುವ ಪ್ರವಾಸಿಗರಿಗೂ ಸಮಸ್ಯೆ ಉಂಟು ಮಾಡಿದೆ.
ಈ ಪ್ರಮುಖ ರಸ್ತೆ ಬಂದ್ ಆಗಿರುವುದರಿಂದ ಕೆಎಸ್‌ಆರ್‌ಟಿಸಿ ಬಸ್‌ಗಳ ಸಮಯಪಾಲನೆಯಲ್ಲಿ ಭಾರಿ ವ್ಯತ್ಯಾಸ ಆಗಿದೆ. ಟೌನ್‌ಹಾಲ್ ಬಳಿಯಿಂದ ತಿರುವು ಪಡೆದುಕೊಂಡು ಗಾಂಧಿ ಮೈದಾನ, ರಾಜಾಸೀಟ್, ಹೊಸ ಖಾಸಗಿ ಬಸ್‌ನಿಲ್ದಾಣ, ಪತ್ರಿಕಾಭವನ, ಎಸ್‌ಬಿಐ, ಕೊಹಿನೂರು ರಸ್ತೆ ಮಾರ್ಗವಾಗಿ ಸುತ್ತು ಬಳಸಿಕೊಂಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬರಬೇಕು. ವಾಪಸ್ ತೆರಳುವಾಗ ಮತ್ತೆ ಇದೇ ಮಾರ್ಗದಲ್ಲಿ ಹೋಗಬೇಕು. ಹೀಗಾಗಿ ಮಂಗಳೂರು ಕಡೆಯಿಂದ ಮಡಿಕೇರಿ ಮಾರ್ಗವಾಗಿ ಮೈಸೂರು, ಬೆಂಗಳೂರು ಭಾಗಕ್ಕೆ ತೆರಳುವ ಮತ್ತು ಮೈಸೂರು, ಬೆಂಗಳೂರು ಭಾಗದಿಂದ ಮಡಿಕೇರಿಗೆ ಬಂದು ಮಂಗಳೂರು ಕಡೆಗೆ ತೆರಳುವ ಬಸ್‌ಗಳ ಸಮಯದಲ್ಲಿ ಸುಮಾರು 1 ಗಂಟೆಗಳಷ್ಟು ತಡ ಆಗುತ್ತಿದೆ.
ಮಳೆಗಾಲದ ಹಿನ್ನೆಲೆಯಲ್ಲಿ ಈಗಾಗಲೇ ಮಡಿಕೇರಿಯಲ್ಲಿ ವ್ಯಾಪಾರ-ವ್ಯವಹಾರಗಳು ಮಂದಗತಿಯಲ್ಲಿ ಸಾಗುತ್ತಿದೆ. ಇದರ ನಡುವೆಯೇ ರಸ್ತೆ ಸಂಪರ್ಕ ಕಡಿತಗೊಂಡಿರುವುದರಿAದ ಮಡಿಕೇರಿ ನಗರದ ವ್ಯಾಪಾರ ಶೇ.60 ರಷ್ಟು ಕುಸಿದಿದ್ದು, ವರ್ತಕರು ಆರ್ಥಿಕ ನಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು ಹೇಳುತ್ತಿದ್ದಾರೆ.
ವಾರಾಂತ್ಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವುದರಿಂದ ವಾಹನ ದಟ್ಟಣೆ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ರಾಜಾಸೀಟ್ ಮಾರ್ಗದಲ್ಲಿ ಓಡಾಡಲು ವ್ಯವಸ್ಥೆ ಮಾಡಿದ್ದು, ಇಲ್ಲಿ ಪ್ರವಾಸಿಗರ ವಾಹನಗಳು ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ ಬದಿಯಲ್ಲಿ ಇರುವುದರಿಂದ ಬಸ್‌ಗಳ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಜು.10, 11 ಹಾಗೂ 12ರಂದು ರಾಜಾಸೀಟ್‌ಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿದ್ದರಿAದ ಸ್ಬಲ್ಪ ಮಟ್ಟಿಗೆ ಸಮಸ್ಯೆ ಪರಿಹಾರವಾಗಿತ್ತು. ಆದರೆ ಈಗ ರಾಜಾಸೀಟ್ ಪ್ರವಾಸಿಗರಿಗೆ ಮುಕ್ತವಾಗಿರುವುದರಿಂದ ವಾರಾಂತ್ಯದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಮತ್ತೆ ಮುಂದುವರಿದಿದೆ.
ಮಡಿಕೇರಿ ನಗರ ಜಿಲ್ಲಾ ಕೇಂದ್ರ ಸ್ಥಾನವಾಗಿರುವುದರಿಂದ ಮುಖ್ಯ ರಸ್ತೆಯ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಬೇಕು. ಸಂಬAಧಪಟ್ಟ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಹೆಚ್ಚುವರಿ ಕೆಲಸಗಾರರನ್ನು ನೇಮಿಸಬೇಕು. ನೂತನ ತಂತ್ರಜ್ಞಾನವನ್ನು ಬಳಸಿ ಕಾಮಗಾರಿಯನ್ನು ಚುರುಕುಗೊಳಿಸಬೇಕು. ಮುಂದಿನ ಐದು ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ ವಾಹನಗಳ ಹಾಗೂ ಪಾದಾಚಾರಿಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ವಾಹನದಟ್ಟಣೆಯನ್ನು ತಪ್ಪಿಸಲು ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಚೇಂಬರ್ ಆಫ್ ಕಾಮರ್ಸ್, ಜೀಪು, ಟ್ಯಾಕ್ಸಿ, ಆಟೋ ರಿಕ್ಷಾ ಸಂಘಟನೆಗಳು ಮನವಿ ಮಾಡಿವೆ. ತಪ್ಪಿದರೆ ಪ್ರತಿಭಟನೆಯ ಎಚ್ಚರಿಕೆ ನೀಡಲಾಗಿದೆ.
"

ಭೂಕುಸಿತದ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದ್ದು, ಇದರ ಪರಿಣಾಮ ನಿತ್ಯ ನಗರದಲ್ಲಿ ವಾಹನದಟ್ಟಣೆ ಮಿತಿ ಮೀರಿದೆ. ಇದರಿಂದ ಶಾಲಾ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಸಾರ್ವಜನಿಕರು ಹಾಗೂ ಪ್ರವಾಸಿಗರ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ. ಮಳೆಗಾಲದ ಆಗಿರುವುದರಿಂದ ಈಗಾಗಲೇ ವ್ಯಾಪಾರ-ವ್ಯವಹಾರಗಳು ಮಂದಗತಿಯಲ್ಲಿ ಸಾಗುತ್ತಿದೆ. ಇದರ ನಡುವೆಯೇ ರಸ್ತೆ ಸಂಪರ್ಕ ಕಡಿತಗೊಂಡಿರುವುದರಿAದ ಮಡಿಕೇರಿ ನಗರದ ವ್ಯಾಪಾರ ಶೇ.60 ರಷ್ಟು ಕುಸಿದಿದ್ದು, ವರ್ತಕರು ಆರ್ಥಿಕ ನಷ್ಟ ಎದುರಿಸುತ್ತಿದ್ದಾರೆ.

— ಸಂತೋಷ್ ಅಣ್ವೇಕರ್, ಅಧ್ಯಕ್ಷ, ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್
"

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ರಸ್ತೆ ಕುಸಿದಿರುವ ಜಾಗದಲ್ಲಿ ದುರಸ್ತಿ ಕಾಮಗಾರಿ ಭರದಿಂದ ನಡೆಯುತ್ತಿದೆ. ಮುಂದೆ ಈ ರೀತಿ ಆಗದ ರೀತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ನಡೆಸಲು ಇನ್ನೂ ಸ್ವಲ್ಪ ಕಾಲಾವಕಾಶ ಬೇಕಾಗಬಹುದು. ಈ ಕಾಮಗಾರಿಯಿಂದಾಗಿ ಸಾಕಷ್ಟು ಸಮಸ್ಯೆಗಳು ಆಗಿರುವ ಬಗ್ಗೆ ಸಾರ್ವಜನಿಕರು ನಮ್ಮ ಗಮನಕ್ಕೆ ತಂದಿದ್ದಾರೆ. ಏಕಮುಖ ಸಂಚಾರಕ್ಕಾದರೂ ಅವಕಾಶ ಮಾಡಿಕೊಡುವಂತೆ ಸಂಘ ಸಂಸ್ಥೆಗಳ ಪ್ರಮುಖರು ಸೇರಿದಂತೆ ಹಲವರು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆಯೂ ಗಮನಹರಿಸಲಾಗಿದ್ದು ಜು. 29ರಿಂದ ಇಲ್ಲಿ ಲಘುವಾಹನಗಳಿಗೆ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಚರ್ಚಿಸಲಾಗುತ್ತಿದೆ.

— ಪಿ. ಕಲಾವತಿ, ಅಧ್ಯಕ್ಷೆ, ನಗರಸಭೆ, ಮಡಿಕೇರಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net