ಕುಂದಚೇರಿ ಗ್ರಾಮ ಪಂಚಾಯಿತಿಯ ಸಭಾ ಭವನದಲ್ಲಿ ಕೊಡಗು ಗೌಡ ಮಹಿಳಾ ಒಕ್ಕೂಟದ ಮಾರ್ಗದರ್ಶನ ಹಾಗೂ ಶ್ರೀ ಕಾವೇರಿ ಗೌಡ ಮಹಿಳಾ ಘಟಕ ಭಾಗಮಂಡಲ ಸಹಯೋಗದಲ್ಲಿ ಆಯೋಜಿಸಿದ್ದ ಚೆಟ್ಟಿಮಾನಿ ಶ್ರೀ ಸುಜ್ಯೋತಿ ಗೌಡ ಮಹಿಳಾ ಘಟಕವನ್ನು ಗಣ್ಯರು ಉದ್ಘಾಟಿಸಿದರು. ಮುಕ್ಕಾಟಿ ಲಲಿತಾ, ಅಮೆ ದಮಯಂತಿ, ಸೂರ್ತಲೆ ವಾರಿಜಾ, ಕುದುಪಜೆ ರೋಹಿಣಿ, ಮುದ್ದೆನ ಜ್ಯೋತಿ, ಕೇಕಡ ಇಂದುಮತಿ, ಪೊನ್ನೆಟಿ ಕೇಶ್ವರಿ ಇದ್ದರು.
ನಾಪೋಕ್ಲು: ಮಹಿಳೆಯರು ಸಂಘಟನೆಯ ಮೂಲಕ ಕ್ರಿಯಾಶೀಲರಾಗಿ ತಮ್ಮಲ್ಲಿ ಅಡಗಿರುವ ಕಲೆ, ಕ್ರೀಡೆ, ಕೌಶಲ, ಸಾಹಿತ್ಯಾಶಕ್ತಿಗಳಿಗೆ ವೇದಿಕೆ ಸೃಷ್ಟಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಮೆ ದಮಯಂತಿ ಅಭಿಪ್ರಾಯಪಟ್ಟರು.
ಕುಂದಚೇರಿ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಕೊಡಗು ಗೌಡ ಮಹಿಳಾ ಒಕ್ಕೂಟದ ಮಾರ್ಗದರ್ಶನ ಹಾಗೂ ಶ್ರೀ ಕಾವೇರಿ ಗೌಡ ಮಹಿಳಾ ಘಟಕ ಭಾಗಮಂಡಲ ಸಹಯೋಗದಲ್ಲಿ ಆಯೋಜಿಸಿದ್ದ ಚೆಟ್ಟಿಮಾನಿ ಶ್ರೀ ಸುಜ್ಯೋತಿ ಗೌಡ ಮಹಿಳಾ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನಾಂಗದ ಬೇಕು-ಬೇಡಗಳ ಬಗ್ಗೆ ಸಂಘಟನೆಯೊಂದಿಗೆ ಒಂದಾಗಿ ತೀರ್ಮಾನಿಸಿ ಕಾರ್ಯೋನ್ಮುಖವಾಗಲು ಸಾಧ್ಯ ಎಂದ ಅವರು, ಇದರಿಂದ ಕುಟುಂಬದ ದೈನಂದಿನ ಕೆಲಸ ಕಾರ್ಯಗಳ ಜತೆಗೆ ಸಾಮಾಜಿಕವಾಗಿ ತೊಡಗಿಸಿಕೊಳ್ಳಲು ಅವಕಾಶವಾಗುವುದು. ಜನಾಂಗದ ಸಂಪ್ರದಾಯದಲ್ಲಿರುವ ಒಳ್ಳೆಯ ಅಂಶಗಳನ್ನು ಅನುಸರಿಸಿ ಬೆಳೆಸುವುದರ ಜತೆಗೆ ಅಲ್ಲಲ್ಲಿ ಕಂಡುಬರುವ ಅನಿಷ್ಠಗಳನ್ನು ನಿವಾರಣೆ ಮಾಡಲು ಸಂಘಟನೆಯಿಂದ ಮಾತ್ರ ಸಾಧ್ಯ. ಸ್ಥಳೀಯವಾಗಿ ಹಮ್ಮಿಕೊಳ್ಳುವ ಎಲ್ಲ ಕಾರ್ಯಕ್ರಮಗಳಿಗೆ ಕೊಡಗು ಗೌಡ ಮಹಿಳಾ ಒಕ್ಕೂಟ ಬೆಂಬಲವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಘಟಕದ ಮುಕ್ಕಾಟಿ ಲಲಿತಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಇನ್ನಷ್ಟು ಮಹಿಳೆಯರನ್ನು ಸಂಘಟಿಸುವ ಮೂಲಕ ಘಟಕವನ್ನು ಬಲಪಡಿಸಬೇಕು. ಒಗ್ಗಟ್ಟಾಗಿ ಮುಂದುವರಿಯಲು ಎಲ್ಲರೂ ಬೆಂಬಲಿಸಬೇಕು ಎಂದು ಹೇಳಿದರು.
ಭಾಗಮಂಡಲದ ಶ್ರೀ ಕಾವೇರಿ ಗೌಡ ಮಹಿಳಾ ಘಟಕದ ಅಧ್ಯಕ್ಷೆ ಸೂರ್ತಲೆ ವಾರಿಜಾ, ಕೊಡಗು ಗೌಡ ಮಹಿಳಾ ಒಕ್ಕೂಟದ ನಿರ್ದೇಶಕರಾದ ಕುದುಪಜೆ ರೋಹಿಣಿ, ಮುದ್ದೆನ ಜ್ಯೋತಿ, ಕೇಕಡ ಇಂದುಮತಿ, ಪೊನ್ನೆಟಿ ಕೇಶ್ವರಿ, ಭಾಗಮಂಡಲ ಘಟಕದ ಕೋಳಿಬೈಲು ಮಾಲತಿ, ಕುದುಕುಳಿ ಪ್ರೇಮಾ ಹಾಗೂ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.